ನವದೆಹಲಿ, ಜು.31: ಟಿವಿ ಚರ್ಚೆಗಳಲ್ಲಿ ಆಡಳಿತಾರೂಢ ಬಿಜೆಪಿಯ (BJP) ಅತ್ಯಂತ ಪ್ರಮುಖರಲ್ಲಿ ಒಬ್ಬರಾದ ಶೆಹಜಾದ್ ಪೂನಾವಾಲಾ (Shehzad Poonawalla) ಅವರು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿನ ತಮ್ಮ ಬಯೋವನ್ನು ಬದಲಾಯಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಪದವನ್ನು ಅವರು ತೆಗೆದುಹಾಕಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಜೀವಮಾನದ ಅನುಯಾಯಿ ಎಂದು ಬರೆದಿರುವ ಪದವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
“ಧರ್ಮ: ಇಸ್ಲಾಂ, ಸಂಸ್ಕೃತಿ: ಹಿಂದೂ, ಸಿದ್ಧಾಂತ: ಭಾರತೀಯ, ಲೇಖಕ: ಜಿಎಸ್‌ಟಿ ಕಿ ಯಾತ್ರಾ; ಪ್ರಧಾನಿ ನರೇಂದ್ರ ಮೋದಿಯವರ ಜೀವಮಾನದ ಅನುಯಾಯಿ” ಎಂದು ಎಕ್ಸ್ ಬಯೋದಲ್ಲಿ ಉಲ್ಲೇಖಿಸಿದ್ದಾರೆ. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಊಹಾಪೋಹಗಳಿವೆ.
ಶೆಹಜಾದ್ ಪೂನಾವಾಲಾ ಅವರು ಕಾಂಗ್ರೆಸ್‌ನೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. 2017 ರಲ್ಲಿ ಅವರು ಕಾಂಗ್ರೆಸ್‌ನ ಆಂತರಿಕ ಚುನಾವಣಾ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ, ರಾಹುಲ್ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರಿಸಲು ವಂಚನೆ ಮಾಡಲಾಗಿದೆ ಎಂದು ಆರೋಪಿಸಿದಾಗ ಅವರು ಪ್ರಾಮುಖ್ಯತೆಗೆ ಬಂದರು.
ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ಪಾಕಿಸ್ತಾನಕ್ಕೆ ಭೇಟಿ? ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತ SCO ಸುಮ್ಮಿಟ್?
ಕಾಂಗ್ರೆಸ್ ತೊರೆದ ನಂತರ, ಅವರು ಬಿಜೆಪಿಗೆ ಸೇರಿದರು. ಬಳಿಕ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡರು. ಪೂನಾವಾಲಾ ಇತ್ತೀಚೆಗೆ ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಸಕ್ರಿಯ ರಾಜಕೀಯದಿಂದ ಹೊರಬರುವ ಸಮಯ ಬಂದಿದೆ ಎಂದು ಹೇಳಿದ್ದರು.
ಶೆಹಜಾದ್ ಪೂನಾವಾಲಾ ಅವರು ಪ್ರಸಿದ್ಧ ರಾಜಕೀಯ ವಿಮರ್ಶಕ ತೆಹಸೀನ್ ಪೂನಾವಾಲಾ ಅವರ ಕಿರಿಯ ಸಹೋದರ. ಶೆಹಜಾದ್ ಕಾಂಗ್ರೆಸ್ ತೊರೆದು ಟಿವಿ ಚರ್ಚೆಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕತ್ವದ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ ನಂತರ ಈ ಇಬ್ಬರು ಸಹೋದರರ ನಡುವೆ ಸಾರ್ವಜನಿಕವಾಗಿ ತೀವ್ರ ವಾಗ್ವಾದ ನಡೆಯಿತು.
ತೆಹ್ಸೀನ್ ಪೂನಾವಾಲಾ ಕಾಂಗ್ರೆಸ್ ಬೆಂಬಲಿಗ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿಮರ್ಶಕರಾಗಿ ಟಿವಿ ಚರ್ಚೆಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಾರೆ. ಸೈದ್ಧಾಂತಿಕ ವಿರೋಧಿಗಳಾದ ಇಬ್ಬರು ಸಹೋದರರು, ಆಗಾಗ ಸುದ್ದಿ ವಾಹಿನಿಗಳಲ್ಲಿ ನೇರ ಚರ್ಚೆಗಳಲ್ಲಿ ಮುಖಾಮುಖಿಯಾಗುತ್ತಾರೆ. ಬಿಸಿ-ಬಿಸಿ ಚರ್ಚೆ, ರಾಜಕೀಯ ವಾಗ್ದಾಳಿ ಮತ್ತು ಪರಸ್ಪರ ವ್ಯಂಗ್ಯವಾಡುತ್ತಾರೆ. ತಮ್ಮ ಎಕ್ಸ್ ಪ್ರೊಫೈಲ್‌ನಲ್ಲಿನ ಬದಲಾವಣೆಯ ಕುರಿತು ಬಿಜೆಪಿ ಅಥವಾ ಪೂನಾವಾಲಾ ಅವರಿಂದ ಯಾವುದೇ ಅಧಿಕೃತ ಸಂವಹನ ಬಂದಿಲ್ಲ.