ಕಾಪಾಡಬೇಕಾದ ವೈದ್ಯನೇ ಕಾಡಿದ; ರೋಗಿಯ ಮೇಲೆ ಕೈ ಎತ್ತಿದ ಡಾಕ್ಟರ್: ವಿಡಿಯೊ ವೈರಲ್
Viral Video: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರು ಆಸ್ಪತ್ರೆಯ ಬೆಡ್ ಮೇಲಿದ್ದ ರೋಗಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವೈದ್ಯನಿಂದ ರೋಗಿ ಮೇಲೆ ಹಲ್ಲೆ -
ಶಿಮ್ಲಾ, ಡಿ. 22: ‘ವೈದ್ಯೋ ನಾರಾಯಣೋ ಹರಿಃ...' ಎಂಬ ಮಾತಿದೆ. ಅಂದರೆ ರೋಗಿಗಳ ಪಾಲಿಗೆ ವೈದ್ಯರು ದೇವರ ರೀತಿ ಎಂಬುದು ಈ ಮಾತಿನ ತಾತ್ಪರ್ಯ. ಆದರೆ ಇದು ಕಲಿಗಾಲ. ಇಲ್ಲಿ ಎಲ್ಲವೂ ಸಾಧ್ಯ. ಇದೀಗ ವೈದ್ಯರೊಬ್ಬರು ಆಸ್ಪತ್ರೆಯ ಬೆಡ್ ಮೇಲಿದ್ದ ರೋಗಿಯ ಮೇಲೆ ಹಲ್ಲೆ(Assaulting Patient) ಮಾಡುತ್ತಿರುವ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಈಗ ಸರ್ವತ್ರ ಖಂಡನೆ ವ್ಯಕ್ತವಾಗಿದ್ದು, ಪ್ರತಿಭಟನೆಗಳೂ ನಡೆಯುತ್ತಿವೆ.
ಶಿಮ್ಲಾದಲ್ಲಿರುವ ಇಂದಿರಾ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಖಂಡನೆ ಮತ್ತು ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆ ಆರೋಪಿ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರಾಹುಲ್ ರಾವ್ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿಸ್ತೃತ ವರದಿ ಕೇಳಲಾಗಿದ್ದು, ಆ ವರದಿ ಕೈ ಸೇರಿದ ಬಳಿಕ ಆರೋಪಿ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಹುಲ್ ರಾವ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ರೋಗಿ ಈಗಾಗಲೇ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ವೈದ್ಯರ ವಿರುದ್ಧ ಎಫ್.ಐ.ಆರ್. ಸಹ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೊ ಇಲ್ಲಿದೆ:
What’s happening in our State ?
— Adv. Homi Devang Kapoor (@Homidevang31) December 22, 2025
Shocking Video from IGMC,Shimla
A patient beaten by Doctor at IGMC Shimla
When those meant to heal turn violent, accountability is non-negotiable
Immediate action & accountability needed pic.twitter.com/S1XwrGd4Np
ಶಿಮ್ಲಾದ ನೇರ್ವಾ ಎಂಬಲ್ಲಿನ ನಿವಾಸಿಯಾಗಿರುವ ಸಂತ್ರಸ್ತ ರೋಗಿಯು ಎಂಡೋಸ್ಕೋಪಿ ಮಾಡಿಸಿಕೊಳ್ಳಲೆಂದು ಈ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ವೈದ್ಯರು ರೋಗಿಗೆ ಕೆಲ ಸಮಯ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಹೀಗೆ ರೋಗಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಆರೋಪಿ ವೈದ್ಯ ರೋಗಿಗೆ ಗುದ್ದಿರುವ ವಿಡಿಯೊ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೊವನ್ನು ರೋಗಿಯ ಜತೆ ಬಂದಿದ್ದವರೇ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ.
ಈ ಹಲ್ಲೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ ನೂರಾರು ಜನರು ಈ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ವೈದ್ಯ ತನ್ನ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ರೋಗಿ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ. ಆದರೆ ತನ್ನೊಂದಿಗೆ ರೋಗಿ ತಪ್ಪಾಗಿ ನಡೆದುಕೊಂಡಿದ್ದಾರೆ ಎಂದು ವೈದ್ಯ ತನ್ ಕೃತಯವನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರವಾಹದಿಂದ ಮುಳುಗಿದ ಯುಎಇ; ಮರುಭೂಮಿ ರಾಷ್ಟ್ರದಲ್ಲಿ ಇಷ್ಟೊಂದು ಭಾರಿ ಮಳೆ ಏಕೆ?
ಘಟನೆಯ ಬೆನ್ನಲ್ಲೇ, ರೋಗಿ ಮತ್ತು ಸ್ಥಳೀಯರು ಆಸ್ಪತ್ರೆಯ ಮುಂದೆ ಜಮಾಯಿಸಿ, ಆರೋಪಿ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.