ಚೆನ್ನೈ, ಮೇ 7: ತಮಿಳುನಾಡು ರಾಜಕೀಯ ಮತ್ತೊಮ್ಮೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಕಾಲಿವುಡ್ ದಳಪತಿ, ಸೂಪರ್ ಸ್ಟಾರ್ ವಿಜಯ್ (Vijay) ಕೇವಲ 2 ವರ್ಷಗಳ ಹಿಂದ ಸ್ಥಾಪಿಸಿದ ಟಿವಿಕೆ (TVK) ಚೊಚ್ಚಲ ವಿಧಾನಸಭಾ ಚುನಾವಣೆಯಲ್ಲೇ ಬರೋಬ್ಬರಿ 107 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಸರ್ಕಾರ ರಚನೆಗೆ ಅಗತ್ಯವಾದ ಮ್ಯಾಜಿಕ್ ನಂಬರ್ 118 ದಾಟಲು ವಿಫಲವಾಗಿದ್ದು, 11 ಶಾಸಕರ ಕೊರತೆ ಎದುರಾಗಿದೆ. ಇದರಿಂದ ವಿಜಯ್ ಮುಖ್ಯಮಂತ್ರಿಯಾಗುವ ಕನಸು ಅನಿಶ್ಚಿತತೆಯಲ್ಲಿದ್ದು, ಸರ್ಕಾರ ರಚನೆಯ ಕಸರತ್ತು ಮುಂದುವರಿದಿದೆ.
ಬುಧವಾರ (ಮೇ 6) ವಿಜಯ್ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದರು. ಈ ವೇಳೆ ಅವರು ಐವರು ಕಾಂಗ್ರೆಸ್ ಶಾಸಕರು ಸೇರಿ ಒಟ್ಟು 112 ಶಾಸಕರ ಬೆಂಬಲವಿರುವುದಾಗಿ ತಿಳಿಸಿದ್ದರು. ಆದರೆ ರಾಜ್ಯಪಾಲರು 118 ಶಾಸಕರ ಪಟ್ಟಿಯ ಜತೆಗೆ ಮರಲಿ ಬನ್ನಿ ಎಂದು ಸೂಚಿಸಿದ್ದರು. ಆದರೆ ಇದುವರೆಗೆ ವಿಜಯ್ ಅವರಿಗೆ 118 ಶಾಸಕರ ಬೆಂಬಲ ಗಳಿಸಲು ಸಾಧ್ಯವಾಗಿಲ್ಲ.
ವಿಜಯ್ ಜತೆ ಚರ್ಚೆ ನಡೆಸಿದ ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್:
ಭಾರತೀಯ ಸಂವಿಧಾನದ 164(1)ನೇ ವಿಧಿಯು ರಾಜ್ಯಪಾಲರಿಗೆ ಮುಖ್ಯಮಂತ್ರಿಯನ್ನು ನೇಮಿಸುವ ಅಧಿಕಾರವನ್ನು ನೀಡಿದೆ. ಅಲ್ಲದೆ ಅತಂತ್ರ ವಿಧಾನಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸರಿಯಾದ ಅಭ್ಯರ್ಥಿ ಯಾರಾಗಬೇಕೆಂದು ರಾಜ್ಯಪಾಲರು ನಿರ್ಧರಿಸಬಹುದು. ಹಿಂದೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸಲು ಏಕೈಕ ದೊಡ್ಡ ಪಕ್ಷದ ನಾಯಕನನ್ನು ಆಹ್ವಾನಿಸಿದ್ದರು. ಇದೇ ರೀತಿಯ ಸನ್ನಿವೇಶ ತಮಿಳುನಾಡಿನಲ್ಲೂ ಸೃಷ್ಟಿಯಾಗಬಹುದಾ ಎನ್ನುವ ಕುತೂಹಲ ಮೂಡಿದೆ. ಹಾಗಾದರೆ ಯಾವ ರಾಜ್ಯದಲ್ಲಿ ಏನಾಗಿತ್ತು?
ತಮಿಳುನಾಡಿನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: 25ಕ್ಕೂ ಹೆಚ್ಚು ಎಐಎಡಿಎಂಕೆ ಶಾಸಕರು ಪುದುಚೇರಿಗೆ ಶಿಫ್ಟ್
ಕರ್ನಾಟಕ-2018
2018ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ 104 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಬಹುಮತಕ್ಕೆ ಅಗತ್ಯವಾದ 113 ಸ್ಥಾನಕ್ಕಿಂತ ಕಡಿಮೆ ಇತ್ತು. ಇದೇ ವೇಳೆ 80 ಸ್ಥಾನಗಳನ್ನು ಪಡೆದ ಕಾಂಗ್ರೆಸ್ 37 ಸ್ಥಾನಗಳನ್ನು ಹೊಂದಿದ್ದ ಜೆಡಿಎಸ್‌ಗೆ ತನ್ನ ಬೆಂಬಲ ನೀಡಿತು. ಅದಾಗ್ಯೂ ರಾಜ್ಯಪಾಲ ವಜುಭಾಯಿ ವಾಲಾ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಆಹ್ವಾನಿಸಿದರು. ಸುಪ್ರೀಂ ಕೋರ್ಟ್ ತಕ್ಷಣ ಬಹುಮತ ಸಾಬೀತುಪಡಸಿಬೇಕೆಂದು ಸೂಚಿಸಿದ್ದರಿಂದ ಈ ಸರ್ಕಾರ 3 ದಿನ ಮಾತ್ರ ಇತ್ತು.
ಮಹಾರಾಷ್ಟ್ರ- 2019
ಸರ್ಕಾರ ರಚನೆ ಮತ್ತು ಚುನಾವಣೋತ್ತರ ಮೈತ್ರಿಗಳ ಕುರಿತು 2019ರಲ್ಲಿ ಮಹಾರಾಷ್ಟ್ರದಲ್ಲಿ 34 ದಿನ ನಡೆದ ರಾಜಕೀಯ ನಾಟಕ ಮರೆಯುವಂತದ್ದಲ್ಲ. 2019ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಮತ್ತು ಅವಿಭಜಿತ ಶಿವಸೇನೆ ನಡುವಿನ ಚುನಾವಣಾ ಪೂರ್ವ ಮೈತ್ರಿ ಮುರಿದುಬಿದ್ದ ನಂತರ ನವೆಂಬರ್ 23ರ ಬೆಳಗ್ಗೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಮತ್ತು ಅಜಿತ್ ಪವಾರ್ (ಎನ್‌ಸಿಪಿ) ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಪ್ರಮಾಣ ವಚನ ಭೋದಿಸಿದರು. ಆದರೆ ಕೆಲವೇ ದಿನಗಳಲ್ಲಿ ಸರ್ಕಾರ ಕುಸಿದು ಬಿತ್ತು.
ಗೋವಾ-2017
ಗೋವಾ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 40. 2017ರ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನ ಗಳಿಸಿದರೆ, ಬಿಜೆಪಿ 13 ಸ್ಥಾನ ಗಳಿಸಿತು. ಮ್ಯಾಜಿಕ್ ನಂಬರ್ 21 ದಾಟಲು ಎರಡೂ ಪಕ್ಷಗಳು ವಿಫಲವಾಗಿದವು. ರಾಜ್ಯಪಾಲೆ ಮೃದುಲಾ ಸಿನ್ಹಾ ಏಕೈಕ ದೊಡ್ಡ ಪಕ್ಷ ಕಾಂಗ್ರೆಸ್ ಅನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಬಿಜೆಪಿಯ ಮನೋಹರ್ ಪರಿಕ್ಕರ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದರು. ಗೋವಾ ಫಾರ್ವರ್ಡ್ ಪಾರ್ಟಿ, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ ಮತ್ತು ಮೂವರು ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ ಬಿಜೆಪಿ ಬಹುಮತ ಪರೀಕ್ಷೆಯಲ್ಲಿ ಪಾರಾಯಿತು.
ಮಣಿಪುರ- 2017
ಗೋವಾದಂತೆಯೇ 2017ರ ವಿಧಾನಸಭಾ ಚುನಾವಣೆಯ ನಂತರ ಮಣಿಪುರದಲ್ಲೂ ಅತಂತ್ರ ವಿಧಾನಸಭೆ ರಚನೆಯಾಯಿತು. ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 22 ಕಡೆ ಜಯ ಗಳಿಸಿತು. ಅಲ್ಲಿ ಬಹುಮತ ಸಾಬೀತುಪಡಿಸಲು 31 ಶಾಸಕರ ಬೆಂಬಲ ಅಗತ್ಯ. ಬಿಜೆಪಿ ಶೀಘ್ರದಲ್ಲೇ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ನಾಗಾ ಪೀಪಲ್ಸ್ ಫ್ರಂಟ್ ಜತೆ ಮೈತ್ರಿ ಮಾಡಿಕೊಂಡಿತು. ಎರಡೂ ಪಕ್ಷಗಳು ತಲಾ 4 ಶಾಸಕರನ್ನು ಹೊಂದಿದ್ದವು. ಈ ಒಕ್ಕೂಟವನ್ನು ಲೋಕ ಜನಶಕ್ತಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಸ್ವತಂತ್ರ ಶಾಸಕರು ಬೆಂಬಲಿಸಿದರು. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಎನ್. ಬಿರೇನ್ ಸಿಂಗ್ ಮುಖ್ಯಮಂತ್ರಿಯಾಗಿ 5 ವರ್ಷ ಸರ್ಕಾರ ನಡೆಸಿದರು.
ದಿಢೀರ್ ಅಂತ ʻದಳಪತಿʼ ವಿಜಯ್ ಪರ ಬ್ಯಾಟ್ ಬೀಸಿದ ಕಮಲ್ ಹಾಸನ್ - ಪ್ರಕಾಶ್ ರಾಜ್
ದೆಹಲಿ- 2013
2013ರ ದೆಹಲಿ ವಿಧಾನಸಭಾ ಚುನಾವಣೆಯ ನಂತರ ಯಾವುದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ಸಿಗದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಯಿತು. 70 ಸದಸ್ಯರ ಸದನದಲ್ಲಿ ಮ್ಯಾಜಿಕ್ ನಂಬರ್ 36. ಬಿಜೆಪಿ 31 ಸ್ಥಾನ ಗಳಿಸುವುದರೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿಗೆ ಸೂಕ್ತ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯಪಾಲರು 28 ಸ್ಥಾನಗಳನ್ನು ಪಡೆದಿದ್ದ ಆಮ್ ಆದ್ಮಿ ಪಕ್ಷವನ್ನು (AAP) ಸರ್ಕಾರ ರಚಿಸಲು ಆಹ್ವಾನಿಸಿದರು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಕಾಂಗ್ರೆಸ್‌ನ 8 ಶಾಸಕರ ಬಾಹ್ಯ ಬೆಂಬಲದಿಂದ ಸರ್ಕಾರವನ್ನು ರಚಿಸಿತು. ಆದಾಗ್ಯೂ ಈ ಸರ್ಕಾರದ ಅಧಿಕಾರಾವಧಿ ಕೇವಲ 49 ದಿನಕ್ಕೆ ಅಂತ್ಯವಾಯಿತು.