ದಿಢೀರ್ ಅಂತ ʻದಳಪತಿʼ ವಿಜಯ್ ಪರ ಬ್ಯಾಟ್ ಬೀಸಿದ ಕಮಲ್ ಹಾಸನ್ - ಪ್ರಕಾಶ್ ರಾಜ್; ತಮಿಳುನಾಡು ರಾಜ್ಯಪಾಲರ ಧೋರಣೆಗೆ ಸಿಡಿಸಿಡಿ!
ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅತಿಹೆಚ್ಚು ಸ್ಥಾನ ಗೆದ್ದಿದ್ದರೂ, ಬಹುಮತಕ್ಕೆ 10 ಸೀಟುಗಳ ಕೊರತೆ ಎದುರಾಗಿದೆ. ಈ ನಡುವೆ ಸರ್ಕಾರ ರಚನೆಗೆ ಮುನ್ನವೇ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದೀಗ ರಾಜ್ಯಪಾಲರ ನಡೆಯನ್ನು ಖಂಡಿಸಿ, ವಿಜಯ್ ಪರವಾಗಿ ಕಮಲ್ ಹಾಸನ್ ಮತ್ತು ಪ್ರಕಾಶ್ ರಾಜ್ ನಿಂತಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
-
ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಭರ್ಜರಿ ಗೆಲುವನ್ನು ಪಡೆದುಕೊಂಡಿದೆ. ಸರ್ಕಾರ ರಚನೆಗೆ ಬೇಕಾದ ಬಹುಮತಕ್ಕೆ 10 ಸೀಟ್‌ಗಳ ಕೊರತೆ ಇದೆ. ಈ ಮಧ್ಯೆ ಸರ್ಕಾರ ರಚನೆಗೆ ಮುಂದಾಗಿರುವ ವಿಜಯ್‌ಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಶಾಕ್ ನೀಡಿದ್ದಾರೆ. ಸರ್ಕಾರ ರಚನೆಗೂ ಮುನ್ನ ಬಹುಮತ ಸಾಬೀತುಪಡಿಸುವಂತೆ ವಿಜಯ್‌ಗೆ ರಾಜ್ಯಪಾಲರು ಹೇಳಿದ್ದಾರೆ.
ಈ ಮಧ್ಯೆ ರಾಜ್ಯಪಾಲರ ನಡೆಯನ್ನು ವಿಜಯ್ ಅವರ ರಾಜಕೀಯ ಎದುರಾಳಿಗಳಾದ ನಟ ಕಮಲ್ ಹಾಸನ್ ಮತ್ತು ಪ್ರಕಾಶ್ ರಾಜ್ ಖಂಡಿಸಿದ್ದಾರೆ. ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕಮಲ್ ಹಾಸನ್ ಮೊದಲು ತಮ್ಮ ಆಪ್ತ ಎಂ ಕೆ ಸ್ಟಾಲಿನ್ ನಡೆಯನ್ನು ಹೊಗಳಿದ್ದಾರೆ.
ಗಣಿತದಲ್ಲಿ ಕಡಿಮೆ ಅಂಕ, ತಮಿಳಿನಲ್ಲಿ ಟಾಪರ್: ದಳಪತಿ ವಿಜಯ್ 10ನೇ ತರಗತಿ ಅಂಕಪಟ್ಟಿ ವೈರಲ್
"ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜನರು ಯಾವುದೇ ಒಂದು ಪಕ್ಷಕ್ಕೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಅಧಿಕಾರವನ್ನು ನೀಡಿಲ್ಲ. ತಮಿಳುನಾಡಿನ ಇತಿಹಾಸದಲ್ಲೇ ಇಂತಹ ಫಲಿತಾಂಶ ಹಿಂದೆಂದೂ ಬಂದಿರಲಿಲ್ಲ. ನನ್ನ ಸಹೋದರರಾದ ಎಂ. ಕೆ. ಸ್ಟಾಲಿನ್ ಅವರು, 'ನಾವು ಜನರ ತೀರ್ಪನ್ನು ಗೌರವಿಸುತ್ತೇವೆ; ನಾವು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ' ಎಂದು ಘೋಷಿಸಿದ್ದಾರೆ. ಅವರ ಈ ರಾಜಕೀಯ ಪರಿಪಕ್ವತೆಯನ್ನು ನಾನು ಗೌರವಿಸುತ್ತೇನೆ" ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಉಂಟಾದ ಹಾನಿ
ನಂತರ ವಿಜಯ್ ಪರ ಬ್ಯಾಟ್ ಬೀಸಿರುವ ಕಮಲ್ ಹಾಸನ್, "ಪ್ರಸ್ತುತ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಈಗ ಇದೇ ಕರ್ತವ್ಯವನ್ನು ಪೂರೈಸಬೇಕು. ಇದು ಕೇವಲ ಬೇಡಿಕೆಯಲ್ಲ, ಬದಲಾಗಿ ಅವರ ಸಾಂವಿಧಾನಿಕ ಜವಾಬ್ದಾರಿಯ ನೆನಪಿಸುವಿಕೆ. ಶ್ರೀ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು 108 ಸ್ಥಾನಗಳನ್ನು ಗೆದ್ದಿದೆ. ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡದಿರುವುದು ತಮಿಳುನಾಡು ಜನರ ತೀರ್ಪಿಗೆ ಮಾಡುವ ಅಪಮಾನವಾಗುತ್ತದೆ. ಗೆದ್ದಿರುವ 233 ಸದಸ್ಯರು ಇನ್ನೂ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದು ರಾಜ್ಯಕ್ಕೆ ಮಾಡಿದ ಅವಮಾನ; ಪ್ರಜಾಪ್ರಭುತ್ವಕ್ಕೆ ಉಂಟಾದ ಹಾನಿ" ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಕಮಲ್ ಹಾಸನ್ ಮಾಡಿರುವ ಟ್ವೀಟ್
தமிழ்நாடு சட்டமன்றத் தேர்தலில் தனித்து ஆட்சியமைக்கும் அதிகாரத்தை மக்கள் எந்தக் கட்சிக்கும் வழங்கவில்லை. இந்த முடிவு தமிழ்நாட்டு வரலாற்றில் முன்னெப்போதும் நிகழாதது.
— Kamal Haasan (@ikamalhaasan) May 7, 2026
என் சகோதரர் திரு. @mkstalin அவர்கள் ‘மக்கள் தீர்ப்பை மதிக்கிறோம்; பொறுப்பான எதிர்க்கட்சியாகச் செயல்படுவோம்’ என்று…
ಬೊಮ್ಮಾಯಿ ಪ್ರಕರಣ ಉಲ್ಲೇಖ
"ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ, "ಬಹುಮತವನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸಬೇಕೇ ಹೊರತು ರಾಜಭವನದಲ್ಲಿ ಅಲ್ಲ. ನಾನು ಮಾತನಾಡುತ್ತಿರುವುದು ಪಕ್ಷ ರಾಜಕೀಯವಲ್ಲ. ಇದು ಒಬ್ಬ ಭಾರತೀಯ ನಾಗರಿಕನ ಧ್ವನಿ. ತಮಿಳುನಾಡು ಜನರ ತೀರ್ಪನ್ನು ಗೌರವಿಸಲೇಬೇಕು" ಎಂದು ಕಮಲ್ ಹಾಸನ್ ಅವರು ತಿಳಿಸಿದ್ದಾರೆ.
ಪ್ರಕಾಶ್ ರಾಜ್ ಏನಂದ್ರು?
ನೆಟ್ಟಿಗರೊಬ್ಬರು, "ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಬೇಕು. ನೇಮಕಗೊಂಡ ವ್ಯಕ್ತಿ ಚುನಾಯಿತ ಶಾಸಕರೊಂದಿಗೆ ಆಟವಾಡುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದರು. ಅದನ್ನು ರೀ-ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್, "ರಾಜ್ಯಪಾಲರ ಈ ನಡವಳಿಕೆ ಅಸಹ್ಯಕರ.. ಸ್ವೀಕಾರಾರ್ಹವಲ್ಲ ಮತ್ತು ಸಂವಿಧಾನಬಾಹಿರ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು... ಆದರೆ ವಿಜಯ್ ಅವರಿಗೆ ಜನಾದೇಶ ಸಿಕ್ಕಿದೆ. ಅವರಿಗೆ ಸದನದ ಮೇಲೆ ತಮ್ಮ ಹಕ್ಕನ್ನು ಪಡೆಯಲು ಅವಕಾಶ ನೀಡಬೇಕು" ಎಂದು ಹೇಳಿದ್ದಾರೆ.
ನಟ ಪ್ರಕಾಶ್ ರಾಜ್ ಟ್ವೀಟ್
This Governor s behaviour is Disgusting .. unacceptable and unconstitutional. We may have differences … but Vijay has got the mandate . He should be allowed to claim his right on the floor of the house. #justasking https://t.co/T72CVedXhJ
— Prakash Raj (@prakashraaj) May 7, 2026
ನಟ ಕಮಲ್ ಹಾಸನ್ ಅವರು ಡಿಎಂಕ ಪರ ಚುನಾವಣಾ ಪ್ರಚಾರ ಮಾಡಿದರೆ, ಪ್ರಕಾಶ್ ರಾಜ್ ಅವರು ವಿಜಯ್ ರಾಜಕೀಯ ಪ್ರವೇಶವನ್ನು ಪ್ರಶ್ನೆ ಮಾಡಿದ್ದರು. ಚುನಾವಣಾ ಸಮಯದಲ್ಲಿ ಎದುರಾಳಿಗಳಾಗಿದ್ದ ಈ ಇಬ್ಬರು ಇದೀಗ ಸರ್ಕಾರ ರಚನೆಯಲ್ಲಿ ಆಗುತ್ತಿರುವ ತೊಂದರೆಯನ್ನು ಗಮನಿಸಿ, ವಿಜಯ್ ಪರವಾಗಿ ಮಾತನಾಡಿದ್ದಾರೆ.