ಕೊಲ್ಕತ್ತಾ: ಖಾಸಗಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಪ್ರತಿಕ್ರಿಯೆ ನೀಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ರಾತ್ರಿಯಲ್ಲಿ ಹುಡುಗಿಯನ್ನು ಹೊರಗೆ ಹೋಗಲು ಬಿಡಬಾರದು ಎಂದು ಮಮತಾ ಹೇಳಿದರು. ಈ ಘಟನೆಯಲ್ಲಿ ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಖಾಸಗಿ ವೈದ್ಯಕೀಯ ಕಾಲೇಜಿನ ಜವಾಬ್ದಾರಿಯಾಗಿರುವುದರಿಂದ ತನ್ನ ಸರ್ಕಾರವನ್ನು ಎಳೆದುತರುವುದು ಅನ್ಯಾಯ ಎಂದು ಅವರು ಹೇಳಿದರು.
ವಿಶೇಷವಾಗಿ, ರಾತ್ರಿಯ ವೇಳೆ ಹೆಣ್ಣು ಮಗುವನ್ನು ಹೊರಗೆ ಬರಲು ಬಿಡಬಾರದು. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಈ ಘಟನೆ ಆಘಾತಕಾರಿಯಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಿದರು. ಇದು ಆಘಾತಕಾರಿ ಘಟನೆ... ಇಂತಹ ಅಪರಾಧಗಳನ್ನು ನಾವು ಸಹಿಸುವುದಿಲ್ಲ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಪೊಲೀಸರು ಇತರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯಾರನ್ನೂ ಬಿಡುವುದಿಲ್ಲ" ಎಂದು ಅವರು ಹೇಳಿದರು. ಪ್ರತಿ ಬಾರಿ ಅತ್ಯಾಚಾರ ಘಟನೆ ನಡೆದಾಗಲೂ ತಮ್ಮ ಸರ್ಕಾರವನ್ನು ಏಕೆ ಪ್ರಶ್ನಿಸಲಾಗುತ್ತದೆ? ಒಡಿಶಾದಲ್ಲಿ ಕಳೆದ ತಿಂಗಳು ಸಾಕಷ್ಟು ಅತ್ಯಾಚಾರ ನಡೆದಿದೆ. ಆದರೆ ಆ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಅವರು ಕಿಡಿ ಕಾರಿದರು.
ಶುಕ್ರವಾರ ಸಂಜೆ, ಕೋಲ್ಕತ್ತಾದಿಂದ ಸುಮಾರು 170 ಕಿಲೋಮೀಟರ್ ದೂರದಲ್ಲಿರುವ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ 23 ವರ್ಷದ ಮೇಲೆ ಆಸ್ಪತ್ರೆಯ ಹಿಂದಿನ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಒಡಿಶಾದ ಜಲೇಶ್ವರ ಮೂಲದವಳಾದ ವಿದ್ಯಾರ್ಥಿನಿ ದುರ್ಗಾಪುರದ ಶಿವಪುರ ಪ್ರದೇಶದ ಐಕ್ಯೂ ಸಿಟಿ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಳು. ಆಕೆ ತನ್ನ ಸ್ನೇಹಿತರೊಬ್ಬರ ಜೊತೆ ಕ್ಯಾಂಪಸ್ ಹೊರಗೆ ಊಟಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಆಕೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse case: ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಘಟನೆಗೆ ಸಂಬಂಧಿಸಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿ ಜೊತೆಗಿದ್ದ ಸ್ನೇಹಿತ ಸೇರಿದಂತೆ ಇತರ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಮೂವರನ್ನು ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.