ನವದೆಹಲಿ: ದೆಹಲಿ ಕೆಂಪು ಕೋಟೆ (Delhi Blast) ಬಳಿ ಸಂಭವಿಸಿದ ಕಾರು ಸ್ಫೋಟದ ದೃಶ್ಯ ಇದೀಗ ಲಭ್ಯವಾಗಿದೆ. ಸಿಗ್ನಲ್ ಬಳಿ ನಿಂತಿದ್ದು ಕಾರು (Viral Video) ಸ್ಫೋಟಗೊಂಡು ಬೆಂಕಿಯ ಜ್ವಾಲೆ ಸುತ್ತಲೂ ಹರಡಿತು. ಹುಂಡೈ i20 ಕಾರನ್ನು ಚಲಾಯಿಸುತ್ತ ಉಗ್ರ ಡಾ. ಉಮರ್ ನಬಿ ಕಾರನ್ನು ಸ್ಫೋಟಿಸಿದ್ದಾನೆ. ಈ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರಂಭಿಸಿದೆ. ಘಟನೆಯ 15 ಸೆಕೆಂಡುಗಳ ಕ್ಲಿಪ್ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಜನದಟ್ಟಣೆಯ ಪ್ರದೇಶವನ್ನು ತೋರಿಸುತ್ತದೆ. ಸಿಗ್ನಲ್ ಬಳಿ ಘಟನೆ ನಡೆದಿದ್ದರಿಂದ ಡಜನ್ಗಟ್ಟಲೆ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು.
ಸೋಮವಾರ ಸಂಜೆ 6.50ಕ್ಕೆ ಸ್ಫೋಟ ಸಂಭವಿಸಿದ್ದು, ಹಲವಾರು ವಾಹನಗಳು ಸುಟ್ಟುಹೋಗಿವೆ. ಮೂವರು ವೈದ್ಯರು ಸೇರಿದಂತೆ ಎಂಟು ಜನರನ್ನು ಬಂಧಿಸಿ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ಈ ಸ್ಫೋಟ ಸಂಭವಿಸಿದೆ, ಜೊತೆಗೆ ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಮತ್ತು ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಹರಡಿರುವ "ವೈಟ್ ಕಾಲರ್" ಭಯೋತ್ಪಾದಕ ಮಾಡ್ಯೂಲ್ ಅನ್ನು ಪತ್ತೆಹಚ್ಚಲಾಯಿತು.
ಸ್ಫೋಟದ ಸಿಸಿಟಿವಿ ದೃಶ್ಯ
ಸೋಮವಾರ ಬಂಧಿಸಲ್ಪಟ್ಟವರಲ್ಲಿ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ ಸೇರಿದ ಡಾ. ಮುಜಮ್ಮಿಲ್ ಗನೈ ಮತ್ತು ಡಾ. ಶಾಹೀನ್ ಸಯೀದ್ ಸೇರಿದ್ದಾರೆ, ಅಲ್ಲಿಂದ 360 ಕೆಜಿ ಅಮೋನಿಯಂ ನೈಟ್ರೇಟ್ ಪತ್ತೆಯಾಗಿದೆ. ಕೆಂಪು ಕೋಟೆ ಬಳಿ ಸ್ಫೋಟಗೊಂಡ ಕಾರನ್ನು ಚಲಾಯಿಸುತ್ತಿದ್ದ ಡಾ. ಉಮರ್ ನಬಿ ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೂ ಸಂಪರ್ಕ ಹೊಂದಿದ್ದರು. ನಬಿ ಸ್ಫೋಟದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: ದೆಹಲಿ ಕಾರು ಸ್ಫೋಟ; ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿ-ಗೃಹ ಸಚಿವ ಅಮಿತ್ ಶಾ
ಮೂಲಗಳ ಪ್ರಕಾರ, ಹುಂಡೈ i20 ಕಾರಿನಲ್ಲಿ ಅಮೋನಿಯಂ ನೈಟ್ರೇಟ್ ಮತ್ತು ಇಂಧನ ತೈಲವನ್ನು ಒಳಗೊಂಡಿರುವ ಸ್ಫೋಟಕ ಸಂಯುಕ್ತವಾದ ANFO ಅನ್ನು ಅನಿರ್ದಿಷ್ಟ ಪ್ರಮಾಣದಲ್ಲಿ ಪ್ಯಾಕ್ ಮಾಡಲಾಗಿತ್ತು. ಬಾಂಬ್ ಅನ್ನು ಡಿಟೋನೇಟರ್ ಮೂಲಕ ಸ್ಫೋಟಿಸಲಾಗಿದೆ ಎಂದು ಹೇಳಲಾಗಿದೆ. ದೆಹಲಿ ಪೊಲೀಸರು ಹೆಚ್ಚಿನ ಕಟ್ಟೆಚ್ಚರ ವಹಿಸಿದ್ದು, ನಗರದಾದ್ಯಂತ ಬೃಹತ್ ತಪಾಸಣೆ ನಡೆಸಲಾಗುತ್ತಿದೆ. ದೆಹಲಿಯ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಅರೆಸೈನಿಕ ಪಡೆಗಳ ಜೊತೆಗೆ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಬಿಗಿ ಭದ್ರತಾ ಕ್ರಮಗಳ ಭಾಗವಾಗಿ ನಗರವನ್ನು ಪ್ರವೇಶಿಸುವ ಮತ್ತು ಹೊರಡುವ ವಾಹನಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದು, ವಿಧಿವಿಜ್ಞಾನ ತಜ್ಞರು ಸೇರಿದಂತೆ ಹಲವಾರು ತಂಡಗಳು ಸ್ಫೋಟದ ಕಾರಣವನ್ನು ತನಿಖೆ ನಡೆಸುತ್ತಿವೆ. ಭಯೋತ್ಪಾದಕ ದಾಳಿಯ ಸಾಧ್ಯತೆ ಸೇರಿದಂತೆ ವಿವಿಧ ದೃಷ್ಟಿ ಕೋನಗಳಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.