ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

''ವಿಮಾನದಲ್ಲಿ ಹೆಚ್ಚಿ ಕಮ್ಮಿಯಾದರೆ ನಿಮ್ಮನ್ನು ಯಾರು ಉಳಿಸುತ್ತಾರೆ?ʼʼ-ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್‌ ಹಳೆಯ ಸಂದರ್ಶನ ವೈರಲ್

Smit Machchhar: ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಗಂಭೀರ ಘಟನೆಯ ಬಳಿಕ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ 2025ರಲ್ಲಿ ನೀಡಿದ್ದ ಪಾಡ್‌ಕಾಸ್ಟ್ ಸಂದರ್ಶನದ ಮಾತುಗಳು ವೈರಲ್ ಆಗಿವೆ. ತುರ್ತು ಪರಿಸ್ಥಿತಿಯಲ್ಲಿ ತರಬೇತಿ ಪಡೆದ ಸಿಬ್ಬಂದಿ ಮತ್ತು ಪ್ರಯಾಣಿಕರ ಸಹಾಯದ ಮಹತ್ವವನ್ನು ಅವರು ಆಗಲೇ ವಿವರಿಸಿದ್ದರು. ಇದೀಗ ವಿಮಾನದಲ್ಲೇ ನಡೆದ ಅಪಾಯಕಾರಿ ಸಂಘರ್ಷದ ವೇಳೆ ಗಾಯಗೊಂಡಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬುಕ್‌ಗೆ ತಲುಪಿಸಲು ಅವರು ನೆರವಾದ ಘಟನೆ ಆ ಮಾತುಗಳಿಗೆ ಹೊಸ ಅರ್ಥ ನೀಡಿದೆ.

ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ (ಸಂಗ್ರಹ ಚಿತ್ರ)

ನವದೆಹಲಿ, ಅ. 1: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆತೆರಳುತ್ತಿದ್ದ ಫ್ಲೈದುಬೈ (Flydubai) ವಿಮಾನದಲ್ಲಿ ಬುಧವಾರ (ಸೆಪ್ಟೆಂಬರ್‌ 30) ನಡೆದ ಭಯಾನಕ ಕಾಕ್‌ಪಿಟ್ ಘಟನೆಯ ಬಳಿಕ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಒಂದು ವರ್ಷದ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

2025ರ ಅಕ್ಟೋಬರ್‌ನಲ್ಲಿ Bonafide Banter ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಮಚ್ಚಾರ್‌, ವಿಮಾನದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ತರಬೇತಿ ಪಡೆದ ಸಿಬ್ಬಂದಿಯ ಮಹತ್ವವನ್ನು ವಿವರಿಸಿದ್ದರು.

ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗಿನ ಸಂದರ್ಶನ:



“ನಾವು ಆಕಾಶದಲ್ಲಿರುವಾಗ ಏನಾದರೂ ಸಂಭವಿಸಿದರೆ ಯಾರು ಉಳಿಸುತ್ತಾರೆ?” ಎಂದು ಅವರು ಸಂದರ್ಶನದಲ್ಲಿ ಪ್ರಶ್ನಿಸಿದ್ದರು. ʼʼವಿಮಾನದಲ್ಲಿ ವೈದ್ಯರು ಪ್ರಯಾಣಿಸುತ್ತಿದ್ದರೆ ಅದೃಷ್ಟ. ಆದರೆ ವೈದ್ಯರಿಲ್ಲದಿದ್ದರೂ, ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕ್ಯಾಬಿನ್ ಸಿಬ್ಬಂದಿಗೆ ತರಬೇತಿ ನೀಡಲಾಗಿರುತ್ತದೆʼʼ ಎಂದು ಅವರು ಹೇಳಿದ್ದರು.

“ಅವರು ಶಸ್ತ್ರಚಿಕಿತ್ಸೆ ಮಾಡುವಷ್ಟು ತರಬೇತಿ ಪಡೆದಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ನಿಮ್ಮ ಜೀವ ಉಳಿಸುವಷ್ಟು ಸಹಾಯ ಮಾಡಲು ಅವರಿಗೆ ತರಬೇತಿ ಇದೆ” ಎಂದಿದ್ದರು. ಕ್ಯಾಬಿನ್ ಸಿಬ್ಬಂದಿಯನ್ನು ಪ್ರಯಾಣಿಕರು ಸಾಮಾನ್ಯವಾಗಿ ಹೇಗೆ ನೋಡುತ್ತಾರೆ ಎಂಬುದರ ಬಗ್ಗೆಯೂ ಮಚ್ಚಾರ್‌ ಮಾತನಾಡಿದ್ದರು. ತುರ್ತು ಪರಿಸ್ಥಿತಿ ಎದುರಾದಾಗ ಮಾತ್ರ ಅವರ ನಿಜವಾದ ಮಹತ್ವ ಅರ್ಥವಾಗುತ್ತದೆ ಎಂದು ಹೇಳಿದ್ದರು.

“ಎಲ್ಲವೂ ಸರಿಯಾಗಿರುವಾಗ ಸಿಬ್ಬಂದಿಯ ಬಗ್ಗೆ ಜನರ ದೃಷ್ಟಿಕೋನವೇ ಬೇರೆ. ಆದರೆ ಪರಿಸ್ಥಿತಿ ಕೈಮೀರಿದಾಗ ನಿಮಗೆ ಅವರ ಅಗತ್ಯವಿರುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಒಂದು ವರ್ಷದ ಬಳಿಕ ಅದೇ ಮಾತುಗಳಿಗೆ ಹೊಸ ಅರ್ಥ

ಮಚ್ಚಾರ್‌ ಅವರ ಈ ಮಾತುಗಳನ್ನು ಹೇಳಿ ಸುಮಾರು ಒಂದು ವರ್ಷದ ಬಳಿಕ, ಫ್ಲೈದುಬೈಯ FZ1073 ವಿಮಾನದಲ್ಲಿ ನಿಜಕ್ಕೂ ಗಂಭೀರ ಪರಿಸ್ಥಿತಿ ಎದುರಾಯಿತು. ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನದ ಕಾಕ್‌ಪಿಟ್‌ನಲ್ಲಿ ಮಚ್ಚಾರ್‌ ಮತ್ತು ಸಹಪೈಲಟ್ ನಡುವೆ ಗಂಭೀರ ಸಂಘರ್ಷ ನಡೆದಿದೆ. ಈ ವೇಳೆ ಕೋ-ಪೈಲಟ್‌ ಮಚ್ಚಾರ್‌ ಅವರಿಗೆ ಇರಿದು ಗಾಯಗೊಳಿಸಿದ್ದಾನೆ. ಗಾಯಗೊಂಡ ಮಚ್ಚಾರ್‌ ಸಹಾಯಕ್ಕಾಗಿ ಕೂಗಿಕೊಂಡಿದ್ದರು.

ಇಸ್ರೇಲ್‌ನ ಅಧಿಕಾರಿಗಳ ಪ್ರಕಾರ, ಸಹಪೈಲಟ್ ವಿಮಾನದ ನಿಯಂತ್ರಣವನ್ನು ಪಡೆದು ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಲು ಪ್ರಯತ್ನಿಸಿದ್ದ. ಆದರೆ ಈ ಪ್ರಯತ್ನಕ್ಕೆ ಮಚ್ಚಾರ್‌ ತಡೆ ಒಡ್ಡಿದ್ದರು.

ಹೈಜಾಕ್‌ ಆತಂಕದ ನಡುವೆಯೂ ನೂರಾರು ಜನರ ಜೀವ ಉಳಿಸಿದ ಭಾರತೀಯ ಪೈಲಟ್; ಸ್ಮಿತ್ ಮಚ್ಚರ್‌ಗೆ ಕಾರ್ಯಕ್ಕೆ ಮೋದಿ ಮೆಚ್ಚುಗೆ

ಘಟನೆಯ ವೇಳೆ ವಿಮಾನವು ಸುಮಾರು 33,000 ಅಡಿಯಿಂದ 17,000 ಅಡಿಗೆ ಕೇವಲ 30 ಸೆಕೆಂಡ್‌ಗಳಲ್ಲಿ ಇಳಿದಿತ್ತು ಎಂದು ಪ್ರತ್ಯಕ್ಷದರ್ಶಿಗಳ ಹೇಳಿದ್ದಾರೆ.

ಪ್ರಯಾಣಿಕನೇ ಮುಂದೆ ಬಂದ

ಈ ವೇಳೆ ವಿಮಾನದಲ್ಲಿದ್ದ ಇಸ್ರೇಲ್‌ ಪ್ರಯಾಣಿಕರೊಬ್ಬರು - ವೃತ್ತಿಯಲ್ಲಿ ಪ್ಲಂಬರ್ ಆಗಿದ್ದು, ಯಾವುದೇ ಹಾರಾಟದ ಅನುಭವವಿಲ್ಲದಿದ್ದರೂ ಕಾಕ್‌ಪಿಟ್‌ಗೆ ತೆರಳಿ ಸಂಘರ್ಷದಲ್ಲಿ ಮಧ್ಯ ಪ್ರವೇಶಿಸಿ ಸಹಪೈಲಟ್‌ನನ್ನು ನಿಯಂತ್ರಿಸಲು ನೆರವಾದರು. ನಂತರ ವಿಮಾನದಲ್ಲೇ ಇದ್ದ ಕೆಲ ಆಫ್-ಡ್ಯೂಟಿ ಪೈಲಟ್‌ಗಳು ವಿಮಾನವನ್ನು ನಿಯಂತ್ರಿಸಿದರು. ಅಂತಿಮವಾಗಿ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು.

ಗಾಯಗೊಂಡಿದ್ದರೂ ಮಚ್ಚಾರ್‌ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿಯಾಗಿದೆ. ನಂತರ ಅವರನ್ನು ತಬುಕ್‌ನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಹಲ್ಲೆ ನಡೆಸಿದ ಸಹಪೈಲಟ್‌ನನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ.

ಯಾರು ನಿಮ್ಮನ್ನು ಉಳಿಸುತ್ತಾರೆ? ಮಚ್ಚಾರ್‌ ಪ್ರಶ್ನೆಗೆ ಸಿಕ್ಕ ಉತ್ತರ

ಒಂದು ವರ್ಷದ ಹಿಂದೆ ಸಂದರ್ಶನದಲ್ಲಿ “ಆಕಾಶದಲ್ಲಿ ಏನಾದರೂ ಸಂಭವಿಸಿದರೆ ನಿಮ್ಮನ್ನು ಯಾರು ಉಳಿಸುತ್ತಾರೆ?” ಎಂದು ಪ್ರಶ್ನಿಸಿದ್ದ ಮಚ್ಚಾರ್‌ ಇದೀಗ ಅಂತಹುದೇ ತುರ್ತು ಪರಿಸ್ಥಿತಿಯನ್ನು ಎದುರಿಸಿ ಬದುಕುಳಿದಿದ್ದಾರೆ. ಅವರ ಹಳೆಯ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ವಿಮಾನಯಾನದಲ್ಲಿ ತರಬೇತಿ ಪಡೆದ ಸಿಬ್ಬಂದಿ, ಪ್ರಯಾಣಿಕರ ಸಹಕಾರ ಮತ್ತು ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ತೆಗೆದುಕೊಳ್ಳುವ ನಿರ್ಧಾರಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ ಹಲವು ನಾಯಕರು ಮಚ್ಚಾರ್‌ ಅವರ ಧೈರ್ಯವನ್ನು ಶ್ಲಾಘಿಸಿ ಅವರನ್ನು ‘ಹೀರೋ’ ಎಂದು ಕರೆದಿದ್ದಾರೆ.