ನವದೆಹಲಿ, ಜು. 18: ಸತ್ಯಾಗ್ರಹ ನಿರತ ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ (Sonam Wangchuk) ಅವರನ್ನು ಜಂತರ್ ಮಂತರ್‌ನಿಂದ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಹೋರಾಟ ನಿಲ್ಲುವುದಿಲ್ಲ ಎಂದು ಕಾಕ್ರೋಚ್ ಜನತಾ ಪಕ್ಷ (CJP Founder) ಘೋಷಿಸಿದೆ. ಇದೀಗ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಶನಿವಾರದಿಂದಲೇ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸುವುದಾಗಿ ಘೋಷಿಸಿದ್ದಾರೆ.
"ಸೋನಂ ವಾಂಗ್ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಕರೆದೊಯ್ದರೆ ಹೋರಾಟ ಕೊನೆಗೊಳ್ಳುತ್ತದೆ ಎಂದು ಸರ್ಕಾರ ಭಾವಿಸಿದೆ. ಆದರೆ ಅದು ಸಾಧ್ಯವಿಲ್ಲ. ಇಂದಿನಿಂದ ನಾನು ಅನಿರ್ದಿಷ್ಟಾವಧಿ ಉಪವಾಸ ಆರಂಭಿಸುತ್ತಿದ್ದೇನೆ. ಜುಲೈ 20ರಂದು ನಡೆಯಲಿರುವ 'ಸಂಸತ್ತಿನತ್ತ ನಡೆಯೋಣ' ಮೆರವಣಿಗೆ ನಿಗದಿಯಂತೆ ನಡೆಯಲಿದೆ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ" ಎಂದು ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ.
ಆರೋಗ್ಯ ಹದಗೆಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲು
20 ದಿನಗಳಿಂದ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ದೆಹಲಿ ಪೊಲೀಸರು ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಕ್ರಮ
ಸೋನಂ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಉಚ್ಚ ನ್ಯಾಯಾಲಯ, ಪ್ರತಿದಿನ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಹಾಗೂ ಅಗತ್ಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. "ಪ್ರತಿಯೊಬ್ಬ ನಾಗರಿಕನ ಜೀವ ಅಮೂಲ್ಯ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಈ ಆದೇಶದಂತೆ ಹಾಗೂ ವೈದ್ಯರ ಸಲಹೆಯ ಮೇರೆಗೆ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸ್ಥಳಾಂತರದ ವೇಳೆ ಕೆಲ ಪ್ರತಿಭಟನಾಕಾರರು ಅಡ್ಡಿಪಡಿಸಲು ಯತ್ನಿಸಿದ್ದರಿಂದ ಸ್ವಲ್ಪ ಗೊಂದಲ ಉಂಟಾದರೂ, ಯಾವುದೇ ಬಲ ಪ್ರಯೋಗ ಮಾಡದೆ ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಜೆಪಿ ಎಕ್ಸ್ ಪೋಸ್ಟ್:
ಆಸ್ಪತ್ರೆಗೆ ಸ್ಥಳಾಂತರಿಸುವ ವೇಳೆ ಆರೋಪ–ಪ್ರತ್ಯಾರೋಪ
ಸೋನಂ ವಾಂಗ್ಚುಕ್ ಅವರನ್ನು ಜಂತರ್ ಮಂತರ್‌ನಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತು. ಪ್ರತಿಭಟನಾಕಾರರ ಆರೋಪದ ಪ್ರಕಾರ, ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿ, ವಾಂಗ್ಚುಕ್ ಅವರನ್ನು ಬಲವಂತವಾಗಿ ಕರೆದೊಯ್ಯಲಾಗಿದೆ. ಅಲ್ಲದೆ, ಅಭಿಜಿತ್ ದೀಪ್ಕೆ ಅವರ ಮೇಲೂ ಹಲ್ಲೆ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.
"ಸತ್ತರೂ ಭೂತವಾಗಿ ಬಂದು ಕಾಡುತ್ತೇನೆ"; ಜುಲೈ 20ಕ್ಕೆ ಸಂಸತ್ ಚಲೋಗೆ ಸೋನಂ ವಾಂಗ್ಚುಕ್ ಕರೆ
ದೆಹಲಿ ಪೊಲೀಸರು ಈ ಆರೋಪಗಳನ್ನು ತಳ್ಳಿಹಾಕಿದ್ದು, ದೆಹಲಿ ಉಚ್ಚ ನ್ಯಾಯಾಲಯದ ಆದೇಶ ಹಾಗೂ ವೈದ್ಯರ ಸಲಹೆಯಂತೆ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸರ ಪ್ರಕಟಣೆಯ ಪ್ರಕಾರ, ಪ್ರತಿಭಟನಾಕಾರರು ಸ್ಥಳಾಂತರಕ್ಕೆ ಅಡ್ಡಿಪಡಿಸಲು ಯತ್ನಿಸಿದ ಪರಿಣಾಮ ಸ್ವಲ್ಪ ಗೊಂದಲ ಉಂಟಾಯಿತು. ಆದರೂ ಪೊಲೀಸರು ಅತ್ಯಂತ ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಿ ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಶಾಂತಿಯುತವಾಗಿ ಸ್ಥಳ ಖಾಲಿ ಮಾಡುವಂತೆ ಮನವಿ ಮಾಡಿದ್ದಾರೆ.
ಪತ್ನಿಯ ಮನವಿ
ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ, ತಮ್ಮ ಕುಟುಂಬದ ಸದಸ್ಯರು ಹಾಗೂ ಕಳೆದ ಇಪ್ಪತ್ತು ದಿನಗಳಿಂದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿರುವ ವೈದ್ಯರ ಅನುಮತಿಯಿಲ್ಲದೆ ಬಾಯಿಮೂಲಕ ಅಥವಾ ಶಿರಾಮಾರ್ಗದ ಮೂಲಕ ಯಾವುದೇ ಚಿಕಿತ್ಸೆಯನ್ನು ನೀಡಬಾರದು ಎಂದು ಆಸ್ಪತ್ರೆ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಪ್ರತಿಭಟನೆಯ ಹಿನ್ನೆಲೆ
ಸೋನಂ ವಾಂಗ್ಚುಕ್ ಹಾಗೂ ಅವರ ಬೆಂಬಲಿಗರು ನೀಟ್ ಪದವಿ ಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದಾರೆ.
ಈ ಹೋರಾಟದ ಭಾಗವಾಗಿ ಜುಲೈ 20ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ದಿನವೇ "ಸಂಸತ್ತಿನತ್ತ ನಡೆಯೋಣ" ಎಂಬ ಶಾಂತಿಯುತ ಮೆರವಣಿಗೆ ನಡೆಸಲು ಕರೆ ನೀಡಲಾಗಿದೆ. ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವಕರು ಹಾಗೂ ಬೆಂಬಲಿಗರು ಈ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.