ನವದೆಹಲಿ: ನೈಋತ್ಯ ಮುಂಗಾರು ಈ ಬಾರಿ ಕೇರಳಕ್ಕೆ ಪ್ರವೇಶಿಸುವುದು ವಿಳಂಬವಾಗಿದೆ. ಈ ಸಲವೂ ಮೇ 26ರ ಹೊತ್ತಿಗೆ ಮುಂಗಾರು ಪ್ರವೇಶ ಆಗಲಿದೆ ಎಂದು ಮೊದಲು IMD ಹೇಳಿತ್ತು. ಆದರೆ ಇದೀಗ ಮತ್ತೆ ವಿಳಂಬವಾಗಿದೆ. , ಈ ಸಲ (monsoon entry into Kerala) ನೈಋತ್ಯ ಮಾನ್ಸೂನ್ ಜೂ.3-4ಕ್ಕೆ ಕೇರಳಕ್ಕೆ ಪ್ರವೇಶ ಆಗಲಿದೆ. ಅದಕ್ಕೂ ಮೊದಲು ಮಾನ್ಸೂನ್ ಪ್ರಭಾವ ಇಲ್ಲ ಎಂದು ಹೇಳಲಾಗಿತ್ತು. ಆದರೆ ಜೂ.3ರ ಹೊತ್ತಿಗೂ ಮುಂಗಾರು ಪ್ರವೇಶ ಆಗುವುದು ಅನುಮಾನವಿದ್ದಂತೆ ಇದೆ. ಮುಂಗಾರು ಪ್ರವೇಶದ ನಿಖರ ದಿನಾಂಕವನ್ನ ಹೇಳಲು ಸಾಧ್ಯವಾಗುತ್ತಿಲ್ಲ.
ಕೇರಳಕ್ಕೆ ಮಾನ್ಸೂನ್ ಆಗಮಿಸಿತು ಎಂದು ಗೊತ್ತಾಗಲು ವಾತಾವರಣದಲ್ಲಿ ಮೂರು ಸ್ಥಿತಿಗಳು ಒಂದೇಸಲಕ್ಕೆ ಉಂಟಾಗಬೇಕು. ಕೇರಳದಾದ್ಯಂತ ಗೊತ್ತುಪಡಿಸಿದ ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ ಶೇ.60ರಷ್ಟು ಮಳೆಯಾಗಬೇಕು..ಅರೇಬಿಯನ್ ಸಮುದ್ರದ ಮೇಲೆ ಒಂದು ನಿರ್ದಿಷ್ಟ ವೇಗದ ಪಶ್ಚಿಮ ಮಾರುತಗಳು ಮತ್ತು ಉಪಗ್ರಹದಿಂದ ಪತ್ತೆಯಾದ ಸಾಕಷ್ಟು ಮೋಡದ ಹೊದಿಕೆ ಕಂಡುಬರಬೇಕು. ಹೀಗಾದಾಗ ಮಾನ್ಸೂನ್ ಕಾಲಿಟ್ಟಿದೆ ಎಂದು ಅರ್ಥೈಸಿಕೊಳ್ಳಲಾಗುತ್ತಿದೆ. ಆದರೆ ಸದ್ಯದ ಮಟ್ಟಿಗೆ ಪಶ್ಚಿಮ ಮಾರುತಗಳದ್ದೇ ಸಮಸ್ಯೆ ಕಾಣಿಸುತ್ತಿದೆ. ಕೇರಳದ ಕರಾವಳಿ ತೀರದ ಮೇಲಿನ ಗಾಳಿಗಳು ತುಂಬ ದುರ್ಬಲವಾಗಿವೆ. ಮುಂಗಾರು ಮಳೆಯನ್ನ ತರುವಷ್ಟು ಸಮರ್ಥವಾಗಿಲ್ಲ. ಹಾಗಿದ್ದಾಗ್ಯೂ ತೇವಾಂಶವನ್ನ ಒಳಗೊಂಡಿದ್ದು, ಕೇರಳದಲ್ಲಿ ಅಲ್ಲಲ್ಲಿ ಮಳೆ ತರುತ್ತಿವೆ. ಲಕ್ಷದ್ವೀಪದಲ್ಲೂ ಚದುರಿದ ಮಳೆಯಾಗುತ್ತಿದೆ. ಆದರೆ ಇದನ್ನ ಅಧಿಕೃತವಾಗಿ ಮುಂಗಾರು ಆರಂಭ ಎಂದು ಘೋಷಿಸಲು ಸಾಧ್ಯವಿಲ್ಲ.
ಎಲ್ ನಿನೋ ಪ್ರಭಾವ
ಭಾರತೀಯ ಹವಾಮಾನ ಇಲಾಖೆ ದಕ್ಷಿಣ-ಪಶ್ಚಿಮ ಮುಂಗಾರು ಮಳೆಯ ಮುನ್ಸೂಚನೆಯನ್ನು ಪರಿಷ್ಕರಿಸಿದ್ದು, ಈ ವರ್ಷದ ಹಂಗಾಮಿ ಮಳೆಯ ಪ್ರಮಾಣವನ್ನು ದೀರ್ಘಾವಧಿ ಸರಾಸರಿ (LPA)ಯ ಶೇ. 92 ರಿಂದ ಶೇ. 90ಕ್ಕೆ ಇಳಿಸಿದೆ. ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈಯಲ್ಲಿನ ತಾಪಮಾನ ಹೆಚ್ಚಾಗುವುದು ಅಥವಾ ಸಮುದ್ರ ಮೇಲ್ಮೈ ತಾಪಮಾನ ಸರಾಸರಿಗಿಂತ ಅಧಿಕವಾಗುವುದೇ ಎಲ್ ನಿನೋ ಸ್ಥಿತಿ. ಹೀಗಾದಾಗ ಸಾಮಾನ್ಯವಾಗಿ ಸಮಭಾಜಕದ ಉದ್ದಕ್ಕೂ ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ("ಪೂರ್ವ ಮಾರುತಗಳು") ಕಡಿಮೆ ಮಟ್ಟದ ಮೇಲ್ಮೈ ಮಾರುತಗಳು ದುರ್ಬಲಗೊಳ್ಳುತ್ತವೆ ಅಥವಾ ಕೆಲವು ಸಂದರ್ಭಗಳಲ್ಲಿ, ಇನ್ನೊಂದು ದಿಕ್ಕಿನಲ್ಲಿ ಬೀಸಲಾರಂಭಿಸುತ್ತವೆ (ಪಶ್ಚಿಮದಿಂದ ಪೂರ್ವಕ್ಕೆ ಅಥವಾ "ಪಶ್ಚಿಮ ಮಾರುತಗಳು"). ಇದು ಭಾರತ, ಆಸ್ಟ್ರೇಲಿಯಾ ಮತ್ತಿತರ ದೇಶಗಳಲ್ಲಿ ಬರಗಾಲ ಪರಿಸ್ಥಿತಿ ತಂದರೆ, ಪೆರು, ಅಮೆರಿಕದ ದಕ್ಷಿಣ ಭಾಗ ಮತ್ತಿತರ ಕಡೆಗಳಲ್ಲಿ ತೀವ್ರ ಮಳೆಯನ್ನ ತರುತ್ತದೆ. ಪ್ರವಾಹ ಪರಿಸ್ಥಿತಿಯನ್ನೂ ಉಂಟು ಮಾಡಬಹುದು.
Karnataka Weather: ಯೆಲ್ಲೋ ಅಲರ್ಟ್; ರಾಜ್ಯಾದ್ಯಂತ ಮುಂದಿನ 4 ದಿನ ಭರ್ಜರಿ ಮಳೆ ಸಾಧ್ಯತೆ!
ಎಲ್ ನಿನೋ ಈ ಮಳೆಯ ಪ್ರಮಾಣವನ್ನ ಕಡಿಮೆ ಮಾಡುತ್ತದೆ. ಭಾರತದ ಮಾನ್ಸೂನ್ ಏಷ್ಯಾದ ಭೂಪ್ರದೇಶ ಮತ್ತು ಸುತ್ತಮುತ್ತಲಿನ ಸಾಗರಗಳ ನಡುವಿನ ಬಲವಾದ ತಾಪಮಾನ ವ್ಯತ್ಯಾಸವನ್ನು ಅವಲಂಬಿಸಿದೆ. ಎಲ್ ನಿನೊ ಸಮಯದಲ್ಲಿ, ವಾತಾವರಣದ ಪರಿಚಲನೆ ಮಾದರಿಗಳು ಬದಲಾಗುತ್ತವೆ. ಸಾಮಾನ್ಯವಾಗಿ ಭಾರತಕ್ಕೆ ಮಳೆ ತರುವ ತೇವಾಂಶ-ಸಹಿತ ಗಾಳಿಯನ್ನು ದುರ್ಬಲಗೊಳಿಸುತ್ತವೆ. ಭಾರತದಲ್ಲಿ ಈ ಮುಂಗಾರು ವಿಫಲವಾದರೆ, ವಿಳಂಬವಾದರೆ ಅದರ ಒಟ್ಟಾರೆ ಜನಜೀವನ, ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.