ನವದೆಹಲಿ, ನ.27: ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ನಾಲ್ಕು ದಿನಗಳ ಕಾಲ ಸಂಸತ್ ಕಲಾಪವನ್ನು (Parliament session) ಮರುಆರಂಭಿಸಲು ಲೋಕಸಭೆ ಮತ್ತು ರಾಜ್ಯಸಭೆ ಸಚಿವಾಲಯಗಳು ಆದೇಶ ಹೊರಡಿಸಿವೆ. ನವೆಂಬರ್ 30ರಂದು ಲೋಕಸಭೆ ಮತ್ತು ಡಿಸೆಂಬರ್ 2ರಂದು ರಾಜ್ಯಸಭೆ ಸೇರಲಿವೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ. ಆದರೆ, ಈ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸಿವೆ.
ಈ ಕುರಿತು ಅಧಿಕೃತವಾಗಿ ಎಕ್ಸ್ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು, ನ. 30ರಂದು ಲೋಕಸಭೆ, ಡಿ. 02ರಂದು ರಾಜ್ಯಸಭೆ ವಿಶೇಷ ಅಧಿವೇಶನ ಕರೆಯುವಂತೆ ಗೌರವಾನ್ವಿತ ಸಭಾಪತಿಗಳಿಗೆ ಮತ್ತು ರಾಜ್ಯಸಭೆಯ ಅಧ್ಯಕ್ಷರಿಗೆ ಕೋರಲಾಗಿದೆ. ಕಲಾಪಗಳ ಅಗತ್ಯತೆಗೆ ಅನುಗುಣವಾಗಿ ಉಭಯ ಸದನಗಳ ಅಧಿವೇಶನವು 2026 ಡಿಸೆಂಬರ್ 3 ರಂದು ಮುಕ್ತಾಯಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಸಚಿವ ಕಿರಣ್ ರಿಜಿಜು ಮಾಡಿರುವ ಪೋಸ್ಟ್ ನೋಡಿ:
ʼಸಂವಿಧಾನದ ಮೇಲಿನ ದಾಳಿ, ಹೋರಾಟ ಶುರು’
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಸೀಟುಗಳನ್ನು ಗರಿಷ್ಠ 850ಕ್ಕೆ ಹೆಚ್ಚಿಸುವ ಮತ್ತು ಮಹಿಳಾ ಮೀಸಲಾತಿ ಜಾರಿಗೆ ಅನುವು ಮಾಡಿಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸರ್ಕಾರ ಮತ್ತೆ ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಆರೋಪಿಸಿದ್ದಾರೆ. ಏಪ್ರಿಲ್ 14ರ ಅಂಬೇಡ್ಕರ್ ಜಯಂತಿಯಂದು ಡಿಲಿಮಿಟೇಷನ್ ಮಸೂದೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದರೂ, ಏಪ್ರಿಲ್ 17ರಂದು ಮಸೂದೆ ಪಾಸ್ ಆಗಿರಲಿಲ್ಲ ಎಂಬುದನ್ನು ನೆನಪಿಸಿದ್ದಾರೆ. ಈಗ ಸಂವಿಧಾನ ದಿನದಂದು, 105 ದಿನಗಳ ‘ಆಪರೇಷನ್ ಲೋಟಸ್’ ಬಳಿಕ ವಿಶೇಷ ಅಧಿವೇಶನ ಕರೆದಿರುವುದು ಸಂವಿಧಾನದ ಅವಮಾನ ಮತ್ತು ದಾಳಿ ಎಂದು ಗುಡುಗಿದ್ದು, “ಹೋರಾಟ ಶುರುವಾಗಿದೆ” ಎಂದಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ, ಭಾರತೀಯ ಪ್ರಜಾಪ್ರಭುತ್ವ, ದೇಶದ ಏಕತೆ ಮತ್ತು ಸಂಸತ್ನ ಸಮಗ್ರತೆಯನ್ನು ಉಳಿಸಲು ಈ ಹೋರಾಟ ಅನಿವಾರ್ಯ ಎಂದು ಹೇಳಿದ್ದಾರೆ.
334A ವಿಧಿ ತೆಗೆದರೆ ಮಹಿಳಾ ಮೀಸಲಾತಿ ತಕ್ಷಣ ಜಾರಿ: ಚಿದಂಬರಂ
ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಹೊಸ ಮಹಿಳಾ ಮೀಸಲಾತಿ ಮಸೂದೆಯ ಅಗತ್ಯವನ್ನೇ ಪ್ರಶ್ನಿಸಿದ್ದಾರೆ. 2023ರ ಸೆಪ್ಟೆಂಬರ್ 20 ಮತ್ತು 21ರಂದು ಸಂವಿಧಾನ (106ನೇ ತಿದ್ದುಪಡಿ) ಕಾಯ್ದೆಯನ್ನು ಉಭಯ ಸದನಗಳೂ ಅಂಗೀಕರಿಸಿದ್ದು, ಕಾಂಗ್ರೆಸ್ ಅದಕ್ಕೆ ಬೆಂಬಲ ನೀಡಿತ್ತು ಎಂದಿದ್ದಾರೆ. 2023ರ ತಿದ್ದುಪಡಿಯ 334A ವಿಧಿಯ ಮೂಲಕ ಮಹಿಳಾ ಮೀಸಲಾತಿಯನ್ನು ಮುಂದಿನ ಜನಗಣತಿ ನಂತರದ ಡಿಲಿಮಿಟೇಷನ್ಗೆ ಜೋಡಿಸಲಾಗಿದೆ. ಬಿಜೆಪಿ 334A ವಿಧಿಯನ್ನು ತೆಗೆದುಹಾಕುವ ಪ್ರಸ್ತಾವ ಮುಂದಿಟ್ಟರೆ, ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸಬಹುದು ಎಂದು ಚಿದಂಬರಂ ಹೇಳಿದ್ದಾರೆ.
‘ಸಂಸದ್ ಚೋರಿ’ ಆರೋಪ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಡಿಲಿಮಿಟೇಷನ್ ಮಸೂದೆಯನ್ನು ‘ಸಂಸದ್ ಚೋರಿ’ ಪ್ರಯತ್ನ ಎಂದು ಟೀಕಿಸಿದ್ದು, ಸಂವಿಧಾನ ದಿನದಂದೇ ಈ ಮಸೂದೆ ತರುವ ಯತ್ನವನ್ನು ತಡೆಯುತ್ತೇವೆ ಎಂದಿದ್ದಾರೆ. ಆರ್ಜೆಡಿ ಸಂಸದ ಮನೋಜ್ ಕುಮಾರ್ ಝಾ ಅವರು ಸಂಖ್ಯಾಬಲ ಸಿದ್ಧಪಡಿಸಿಕೊಂಡಿರುವ ಕುರಿತು ವ್ಯಂಗ್ಯವಾಡಿದ್ದಾರೆ. ಬಿಜೆಪಿಯಿಂದ ದೂರವಿರುವ ಕೆಲ ಪಕ್ಷಗಳ ನಿಲುವಿನಲ್ಲಿ ಬದಲಾವಣೆಯಾಗಬಹುದೇ ಎಂಬ ಸುಳಿವನ್ನು ಕಾಂಗ್ರೆಸ್ ಸಂಸದ ಕಾರ್ತಿ ಪಿ. ಚಿದಂಬರಂ ನೀಡಿದ್ದಾರೆ.
ಬಿಜೆಪಿ ವಾದವೇನು?
ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ವಿಚಾರದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬದ್ಧರಾಗಿದ್ದಾರೆ ಎಂದು ಅಮಿತ್ ಶಾ ಹೇಳಿದ್ದು, ಮೀಸಲಾತಿ ಜಾರಿಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. 2023ರ ಸೆಪ್ಟೆಂಬರ್ನಲ್ಲಿ ಸಂವಿಧಾನ (106ನೇ ತಿದ್ದುಪಡಿ) ಕಾಯ್ದೆ ನಾರಿ ಶಕ್ತಿ ವಂದನ್ ಅಧಿನಿಯಮ ಅಂಗೀಕಾರಗೊಂಡರೂ, ಜನಗಣತಿ ಮತ್ತು ನಂತರದ ಡಿಲಿಮಿಟೇಷನ್ ಪ್ರಕ್ರಿಯೆಯಿಂದಾಗಿ ಅದು ಇನ್ನೂ ಜಾರಿಯಾಗಿಲ್ಲ.
ಈ ವರ್ಷದ ಆರಂಭದಲ್ಲಿ ಮಂಡಿಸಲಾದ ಸಂವಿಧಾನ 131ನೇ ತಿದ್ದುಪಡಿ ಮಸೂದೆಯು ಲೋಕಸಭಾ ಸೀಟುಗಳನ್ನು ಗರಿಷ್ಠ 850ಕ್ಕೆ ಏರಿಸಲು ಮತ್ತು ಮುಂದಿನ ಜನಗಣತಿ ಆಧರಿತ ಡಿಲಿಮಿಟೇಷನ್ಗೆ ಮೊದಲೇ ಮಹಿಳಾ ಮೀಸಲಾತಿ ಜಾರಿಗೊಳಿಸಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಿತ್ತು. ಆದರೆ ಮರುದಿನ ನಡೆದ ಮತದಾನದಲ್ಲಿ ಅಗತ್ಯ ಮೂರನೇ ಎರಡರಷ್ಟು ಬಹುಮತ ಸಿಕ್ಕಿರಲಿಲ್ಲ.
ಈಗಿರುವ 543 ಸದಸ್ಯರ ಲೋಕಸಭೆಯಲ್ಲೇ ತಕ್ಷಣ 33% ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂದು ಇಂಡಿಯಾ ಒಕ್ಕೂಟ ಒತ್ತಾಯಿಸುತ್ತಿದೆ. ಜನಸಂಖ್ಯೆ ಆಧಾರಿತ ಡಿಲಿಮಿಟೇಷನ್ನಿಂದ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಸೀಟುಗಳು ಸಿಕ್ಕಿ, ಜನಸಂಖ್ಯೆ ನಿಯಂತ್ರಿಸಿದ ತಮಿಳುನಾಡು ಮತ್ತು ಕೇರಳದಂತಹ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂಬ ಆತಂಕವನ್ನು ವಿಪಕ್ಷಗಳು ವ್ಯಕ್ತಪಡಿಸಿವೆ. ಆದರೆ ವಿಸ್ತರಣೆಯಿಂದ ದಕ್ಷಿಣದ ರಾಜ್ಯಗಳ ಸೀಟುಗಳು 129ರಿಂದ 195ಕ್ಕೆ ಏರಿ, ಶೇ. 24ರಷ್ಟು ಪಾಲು ಉಳಿಯುತ್ತದೆ ಎಂದು ಅಮಿತ್ ಶಾ ಈ ಹಿಂದೆ ಸ್ಪಷ್ಟಪಡಿಸಿದ್ದರು.