ಕೋಲ್ಕತಾ, ಮಾ. 28: ರಾಮನವಮಿ (Ram Navami) ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ವಾಗ್ವಾದ ಹಿಂಸಾಚಾರಕ್ಕೆ ತಿರುಗಿದ ನಂತರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ (Murshidabad) ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟಾಗಿದೆ. ಎರಡೂ ಸಮುದಾಯದ ಕಡೆಯವರು ಕಲ್ಲು ತೂರಾಟ (Stone pelting) ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ.
ರಘುನಾಥಗಂಜ್‌ನಲ್ಲಿ ತಮ್ಮ ಮೆರವಣಿಗೆಯ ಮೇಲೆ ಕಲ್ಲು ಎಸೆಯಲಾಗಿದೆ ಎಂದು ಹಿಂದೂ ಸಮುದಾಯದವರು ಆರೋಪಿಸಿದರೆ, ರ‍್ಯಾಲಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಲಾಗಿದೆ ಎಂದು ಮುಸ್ಲಿಮರು ಆರೋಪಿಸಿದ್ದಾರೆ.
ಸ್ಥಳೀಯ ಪೊಲೀಸರು ಮತ್ತು ಕೇಂದ್ರ ಪಡೆಗಳನ್ನು ಪ್ರದೇಶದಲ್ಲಿ ನಿಯೋಜಿಸಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಮುರ್ಷಿದಾಬಾದ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ:
ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿವಾಸಿಗಳಿಗೆ ಶಾಂತವಾಗಿರಲು ಕರೆ ನೀಡಲಾಗಿದ್ದು, ಪ್ರದೇಶದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಪುರುಲಿಯಾದ ಪ್ಯಾರಾದಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ರಾಮನವಮಿ ರ‍್ಯಾಲಿಯಲ್ಲಿ ಭಾಗವಹಿಸಲು ಹಿಂದೂಗಳ ಗುಂಪೊಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಮುಸ್ಲಿಂ ಸಮುದಾಯದವರು ಅಡ್ಡಿಪಡಿಸಿದ್ದಾರೆ. ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದಾರೆ ಎಂದು ಪುರುಲಿಯಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ತಿವಾರಿ ಹೇಳಿದ್ದಾರೆ.
JNU ಕ್ಯಾಂಪಸ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ; ವಿದ್ಯಾರ್ಥಿಗಳು, ಪೊಲೀಸರಿಗೆ ಗಂಭೀರ ಗಾಯ
ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಎರಡು ಸಮುದಾಯಗಳ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದರು. ಕೇಂದ್ರ ಪಡೆಗಳು ಮತ್ತು ರಾಜ್ಯ ಪೊಲೀಸರ ಜಂಟಿ ತುಕಡಿ ಸ್ಥಳಕ್ಕೆ ತಲುಪಿದ ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಬಿಜೆಪಿ ಮುಖಂಡರು ಘಟನೆಯನ್ನು ಖಂಡಿಸಿದ್ದು, ಶಾಂತವಾಗಿ ಸಾಗುತ್ತಿದ್ದ ಹಿಂದೂ ಸಮುದಾಯದವರ ಮೇಲೆ ಮುಸ್ಲಿಮರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಪ್ರಚಾರದ ಅಬ್ಬರದ ನಡುವೆ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.