ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆನ್‌ಲೈನ್‌ ಗೇಮಿಂಗ್‌ನಲ್ಲಿ 3 ಲಕ್ಷ ರೂ. ಕಳೆದುಕೊಂಡ ಬಾಲಕ: ಮುಂದೆ ನಡೆದಿದ್ದು ಕೇಳಿದ್ರೆ ಶಾಕ್‌ ಆಗ್ತೀರಾ!

ಆನ್‌ಲೈನ್ ಗೇಮಿಂಗ್‌ನಲ್ಲಿ ಸುಮಾರು ₹3 ಲಕ್ಷ ಕಳೆದುಕೊಂಡ 11ನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾಲ ತೀರಿಸಲು ತನ್ನದೇ ಅಪಹರಣದ ನಕಲಿ ಕಥೆ ಸೃಷ್ಟಿಸಿ ತಂದೆಯಿಂದ ₹2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಎಐ ತಂತ್ರಜ್ಞಾನ ಬಳಸಿ ಗಾಯಗೊಂಡಿರುವಂತೆ ನಕಲಿ ಫೋಟೋ ಸೃಷ್ಟಿಸಿ ತಂದೆಗೆ ಕಳುಹಿಸಿದ್ದ ಬಾಲಕ, ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಾಲಕನನ್ನು ಸ್ನೇಹಿತನ ಮನೆಯಲ್ಲಿ ಪತ್ತೆಹಚ್ಚಿದ್ದಾರೆ.

ಆನ್‌ಲೈನ್ ಗೇಮಿಂಗ್‌

ಲಖನೌ: ಆನ್‌ಲೈನ್ ಗೇಮ್‌ (online game) ಗಳಲ್ಲಿ ಸುಮಾರು 3 ಲಕ್ಷ ರೂ. ಕಳೆದುಕೊಂಡ 11ನೇ ತರಗತಿಯ ವಿದ್ಯಾರ್ಥಿಯೊಬ್ಬ, ಸಾಲ ತೀರಿಸಲು ತನ್ನದೇ ಅಪಹರಣದ ಸುಳ್ಳು ಕಥೆ ಸೃಷ್ಟಿಸಿ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ತಯಾರಿಸಿದ ಚಿತ್ರವನ್ನು ಬಳಸಿ ತಂದೆಯಿಂದಲೇ ಹಣ ಕೇಳಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ (Uttar Pradesh)ದ ಗೋರಖ್‌ಪುರದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

16 ವರ್ಷದ ಈ ಅಪ್ರಾಪ್ತ ಬಾಲಕ, ದೆಹಲಿಯಲ್ಲಿರುವ ತನ್ನ ಗೆಳತಿಯ ನೆರವಿನೊಂದಿಗೆ ಎಐ ತಂತ್ರಜ್ಞಾನವನ್ನು ಬಳಸಿ ತಾನು ಗಾಯಗೊಂಡಿರುವಂತೆ, ಮುಖದ ಮೇಲೆ ರಕ್ತ ಮತ್ತು ಬಾಯಿಗೆ ಟೇಪ್‌ ಅಂಟಿಸಿರುವಂತೆ ನಕಲಿ ಫೋಟೋವನ್ನು ತಯಾರಿಸಿದ್ದಾನೆ. ತಾನು ನಿಜವಾಗಿಯೂ ಅಪಹರಣಕ್ಕೊಳಗಾಗಿದ್ದೇನೆ ಎಂದು ಬಿಂಬಿಸಲು ಬಾಲಕ ಈ ತಂತ್ರ ಹೂಡಿದ್ದನು.

ನಂತರ ಈ ಕೃತಕ ಚಿತ್ರವನ್ನು ವಾಟ್ಸಾಪ್‌ ಮೂಲಕ ತನ್ನ ತಂದೆಗೆ ಕಳುಹಿಸಿದ ಬಾಲಕ, ತಕ್ಷಣವೇ 1 ಲಕ್ಷ ರೂ. ವರ್ಗಾಯಿಸುವಂತೆ ಮತ್ತು ಹಣ ನೀಡದಿದ್ದರೆ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ತಂದೆ ಹಣ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ, 2 ಲಕ್ಷ ರೂ. ನಗದನ್ನು ತಂದೊಪ್ಪಿಸುವಂತೆ ತಾಕೀತು ಮಾಡಿದ್ದಾನೆ.

ಈ ಆಘಾತಕಾರಿ ಸಂದೇಶದಿಂದ ಬೆಚ್ಚಿಬಿದ್ದ ತಂದೆ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದು, ಪೊಲೀಸರು ಕ್ಷಿಪ್ರ ತನಿಖೆಯನ್ನು ಆರಂಭಿಸಿದರು.

Crime News: ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು; ಸಹೋದರನ ಸಣ್ಣ ಅನುಮಾನದಿಂದ ಬೆಳಕಿಗೆ ಬಂತು ಭಯಾನಕ ಸಂಚು

ಪೋಲೀಸರ ಮಾಹಿತಿಯ ಪ್ರಕಾರ, ಸಂತ ಕಬೀರ್ ನಗರ ಜಿಲ್ಲೆಯ ಬಟ್ಟೆ ವ್ಯಾಪಾರಿಯ ಮಗನಾಗಿರುವ ಈ ಬಾಲಕ, ತನ್ನ ಆನ್‌ಲೈನ್ ಗೇಮಿಂಗ್ ಚಟಕ್ಕಾಗಿ ಸ್ನೇಹಿತರು ಮತ್ತು ಪರಿಚಿತರಿಂದ ಭಾರಿ ಪ್ರಮಾಣದ ಹಣವನ್ನು ಸಾಲವಾಗಿ ಪಡೆದಿದ್ದನು. ಸಾಲಗಾರರು ಹಣವನ್ನು ವಾಪಸ್ ನೀಡುವಂತೆ ಒತ್ತಡ ಹೇರಲು ಪ್ರಾರಂಭಿಸಿದಾಗ, ಹಣ ಸಂಗ್ರಹಿಸಲು ಈತ ಈ ಅಪಹರಣದ ಸಂಚನ್ನು ರೂಪಿಸಿದ್ದಾನೆ.

ಮಂಗಳವಾರ ಸಂಜೆ, ಸಿಕ್ಕರಿಗಂಜ್‌ಗೆ ಹೋಗುತ್ತಿರುವುದಾಗಿ ಮನೆಯಲ್ಲಿ ಹೇಳಿ ಹೊರಟ ಬಾಲಕ ತನ್ನ ಮೊಬೈಲ್ ಫೋನ್ ಅನ್ನು ಫ್ಲೈಟ್ ಮೋಡ್‌ಗೆ ಹಾಕಿದ್ದಾನೆ. ನಂತರ, ತನ್ನ ಸ್ನೇಹಿತನ ವೈ-ಫೈ ನೆಟ್‌ವರ್ಕ್‌ಗೆ ಫೋನ್ ಸಂಪರ್ಕಿಸಿ ತಂದೆಗೆ ಅಪಹರಣ ಹಾಗೂ ಹಣ ಕಳಿಸುಂತೆ ಸಂದೇಶವನ್ನು ರವಾನಿಸಿದ್ದಾನೆ.

ಪೊಲೀಸರು ತಕ್ಷಣವೇ ಮೊಬೈಲ್ ಸಂಖ್ಯೆಯನ್ನು ಸರ್ವೇಲನ್ಸ್ ವ್ಯಾಪ್ತಿಗೆ ತಂದು, ಸ್ಥಳವನ್ನು ಸಿಕ್ಕರಿಗಂಜ್ ಎಂದು ಪತ್ತೆ ಮಾಡಿದ್ದಾರೆ. ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ಸ್ಥಳಕ್ಕೆ ತಲುಪಿದ ಪೊಲೀಸ್ ತಂಡ, ಬಾಲಕನು ತನ್ನ ಸ್ನೇಹಿತನ ಮನೆಯಲ್ಲಿ ಆರಾಮವಾಗಿ ತಂಗಿರುವುದನ್ನು ಪತ್ತೆ ಹಚ್ಚಿದೆ.

ಪ್ರಕರಣದ ಕುರಿತು ಬುಧವಾರ ಸಂಜೆ ಮಾತನಾಡಿದ ಹೆಚ್ಚುವರಿ ಎಸ್‌ಪಿ (ದಕ್ಷಿಣ) ದಿನೇಶ್ ಕುಮಾರ್ ಪುರಿ, ಗೇಮಿಂಗ್‌ ಸಾಲವನ್ನು ತೀರಿಸಲು ಹಣ ಹೊಂದಿಸಲು ತಾನೇ ಈ ಅಪಹರಣದ ಕಥೆಯನ್ನು ಹೆಣೆದಿರುವುದಾಗಿ ಬಾಲಕ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಸಂಚಿನಲ್ಲಿ ಭಾಗಿಯಾಗಿರುವ ಇತರರ ಪಾತ್ರದ ಕುರಿತಾಗಿಯೂ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.