ನವದೆಹಲಿ, ಸೆ. 6: ವಿದ್ಯಾರ್ಥಿಗಳಿದ್ದ ಪಿಜಿ ಕಟ್ಟಡ ಕುಸಿದು ಬಿದ್ದ ಪರಿಣಾಮ (Building Collapses) ಓರ್ವ ಮೃತಪಟ್ಟು, ಸುಮಾರು 40ರಿಂದ 50 ಜನರು ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದಕ್ಷಿಣ ದೆಹಲಿಯ (Delhi) ಸತ್ಯ ನಿಕೇತನ ಪ್ರದೇಶದಲ್ಲಿ ಈ ಭೀಕರ ದುರಂತ ನಡೆದಿದೆ. ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ಗೆ ಕರೆದೊಯ್ಯಲಾಗಿದೆ. ಕುಸಿದು ಬಿದ್ದ ಕಟಗಟಡದೊಳಗೆ ಸಿಲುಕಿದ ಸುಮಾರು 10 ವಿದ್ಯಾರ್ಥಿಗಳನ್ನು ಹೊರ ಕರೆತರಲಾಗಿದೆ.
ಸ್ಥಳೀಯರು ಕೂಡ ರಕ್ಷಣಾ ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ. ಕೈಯಿಂದಲೇ ಅವಶೇಷಗಳನ್ನು ತೆರವುಗೊಳಿಸಿದ ಸಾರ್ವಜನಿಕರು, ಒಳಗೆ ಸಿಲುಕಿರುವವರನ್ನು ಹುಡುಕಿದ್ದಾರೆ. ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವ ಅಥವಾ ಗಾಯಗೊಂಡಿರುವ ಜನರ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಕುಸಿದ ಪಿಜಿ ಕಟ್ಟಡ:
ಕುಸಿತದ ಮೊದಲು ಭೂಕಂಪದಂತೆ ಶಬ್ಧ ಕೇಳಿ ಬಂತು ಎಂದು ಸ್ಥಳೀಯರು ಹೇಳಿದ್ದಾರೆ. ನಂತರ ಒಳಗೆ ಸಿಲುಕಿದ್ದ ಜನರು ನಮ್ಮನ್ನು ಉಳಿಸಿ ಎಂದು ಕೂಗಲು ಪ್ರಾರಂಭಿಸಿದರು. ಅವಶೇಷಗಳೊಳಗಿನಿಂದ ಇನ್ನೂ ಶಬ್ದಗಳು ಬರುತ್ತಿವೆ. ವಿದ್ಯಾರ್ಥಿಗಳು ತಮ್ಮನ್ನು ಉಳಿಸುವಂತೆ ಮನವಿ ಮಾಡುತ್ತಿದ್ದಾರೆ. 25ರಿಂದ 30 ವಿದ್ಯಾರ್ಥಿಗಳು ಸಿಲುಕಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಾಲ್ಕಂತಸ್ತಿನ ಕಟ್ಟಡ ಕುಸಿತ, 9 ಮಂದಿ ಸಾವು: ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಶಂಕೆ
ಭೂಕಂಪವಾದಾಗ ಹೇಗೆ ಕಟ್ಟಡ ನಡುಗಲು ಪ್ರಾರಂಭಿಸುತ್ತೊ ಹಾಗೆಯೇ ಕಟ್ಟಡ ಅಲುಗಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇಡೀ ಕಟ್ಟಡವು ಒಂದು ದೊಡ್ಡ ಭೂಕಂಪದ ಕೇಂದ್ರಬಿಂದುವಿನಂತೆ ನಡುಗಿತು. ನಾವು ನಿಜವಾಗಿಯೂ ಭೂಕಂಪ ಸಂಭವಿಸಿದೆ ಎಂದೇ ಭಾವಿಸಿದೆವು ಎಂದು ಅವರು ಹೇಳಿದ್ದಾರೆ. ಆ ಪ್ರದೇಶದಲ್ಲಿ ಮತ್ತೊಂದು ಪಿಜಿ ಕಟ್ಟಡ ಕೂಡ ಕುಸಿಯುವ ಅಪಾಯದಲ್ಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಟ್ಟಡದಲ್ಲಿ ಸುಮಾರು 50 ರಿಂದ 60 ವಿದ್ಯಾರ್ಥಿಗಳಿದ್ದರು ಎಂದು ಮೂಲಗಳು ತಿಳಿಸಿವೆ. ತಮ್ಮ ಎನ್‌ಎಸ್‌ಯುಐ ಸಹೋದ್ಯೋಗಿಯೊಬ್ಬರು ಪಿಜಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗ ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ವಿನೋದ್ ಜಾಖರ್ ಹೇಳಿದ್ದಾರೆ.
ಇನ್ನು ಹಲವು ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಹಾಯದ ಭರವಸೆಯನ್ನು ಅವರು ನೀಡಿದ್ದಾರೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್), ದೆಹಲಿ ಅಗ್ನಿಶಾಮಕ ಸೇವೆಗಳು, ದೆಹಲಿ ಪೊಲೀಸ್, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ), ಕೇಂದ್ರೀಕೃತ ಅಪಘಾತ ಮತ್ತು ಆಘಾತ ಸೇವೆಗಳು (ಸಿಎಟಿಎಸ್) ಮತ್ತು ನಾಗರಿಕ ರಕ್ಷಣಾ ತಂಡಗಳು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಅವರು ಹೇಳಿದರು.