ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರು ಆರಾಮಾಗಿ ಓಡಾಡಿಕೊಂಡಿದ್ದಾರೆ; ಅನ್ಯಾಯ ಪ್ರಶ್ನಿಸುವವರು ಹೊಡೆತ ತಿನ್ನುತ್ತಿದ್ದಾರೆʼʼ: ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

Chalo Sansad: ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾರೂಪ ತಾಳಿದೆ. ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ. ಇದನ್ನು ಖಂಡಿಸಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ)

ದೆಹಲಿ, ಜು. 20: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯ ಜವಾಬ್ದಾರಿ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು, ಆತ್ಮಹತ್ಯೆ ಮಾಡಿಕೊಂಡ ನೀಟ್‌ ಆಕಾಂಕ್ಷಿಗಳ ಕುಟುಂಬಸ್ಥರಿಗೆ 1 ಕೋಟಿ ರುಪಾಯಿ ಪರಿಹಾರ ಒದಗಿಸಬೇಕು ಮತ್ತು ಸತ್ಯಾಗ್ರಹ ನಿರತ ಸಾಮಾಜಿಕ ಕಾರ್ಯಕರ್ತ ಸೋನಮ್‌ ವಾಂಗ್ಚುಕ್‌ ಅವರನ್ನು ಸ್ವತಂತ್ರವಾಗಿ ಬಿಡಬೇಕು ಎಂದು ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ (CJP) ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಹಿಂಸೆಯ ರೂಪ ತಾಳಿದೆ. ಅನುಮತಿ ನಿರಾಕರಿಸಿದ ಮೇಲೂ ಸಂಸತ್‌ಗೆ ಮುತ್ತಿಗೆ ಹಾಕಲು (Chalo Sansad) ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಲವಂತವಾಗಿ ತಡೆದು ನಿಲ್ಲಿಸಿದ್ದಾರೆ. ಈ ಕ್ರಮವನ್ನು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi) ಖಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪರೀಕ್ಷೆಯ ಅಕ್ರಮಗಳನ್ನು ಪ್ರಶ್ನಿಸುತ್ತಿರುವ ಯುವಜನತೆಯ ಬಾಯಿ ಮುಚ್ಚಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅವರ ಕಿಡಿಕಾರಿದ್ದಾರೆ. ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರು ಆರಾಮಾಗಿ ಓಡಾಡಿಕೊಂಡಿದ್ದರೆ, ಪ್ರತಿಭಟನೆ ನಡೆಸಿದವರ ಮೇಲೆ ಕೇಂದ್ರ ದಾಳಿ ನಡೆಸಿದೆ. ಪ್ರತಿಭಟನಾಕಾರರು ಬೀದಿ ಬೀದಿಗಳಲ್ಲಿ ಹೊಡೆತ ತಿನ್ನುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ವಿಡಿಯೊ ಸಂದೇಶ:



ಯುವ-ವಿರೋಧಿ ಪ್ರಧಾನ ಮಂತ್ರಿ

ನರೇಂದ್ರ ಮೋದಿ ಅವರನ್ನು ಭಾರತದ ಇತಿಹಾಸದಲ್ಲೇ ಅತೀ ದೊಡ್ಡ ಯುವ ಜನತೆ ವಿರೋಧಿ ಪ್ರಧಾನಿ ಎಂದು ರಾಹುಲ್‌ ಗಾಂಧಿ ಬಣ್ಣಿಸಿದರು. ಪದೇ ಪದೆ ಪ್ರಶ್ನೆ ಪತ್ರಿಕೆ ಅಕ್ರಮ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ರಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ʼʼವಿಫಲ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಹಿಂದೇಟು ಹಾಕುತ್ತಿದ್ದಾರೆʼʼ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಕೇಂದ್ರದ ಮುಂದೆ ಸಿಜೆಪಿ ಇಟ್ಟ ಬೇಡಿಕೆಗಳಿವು

ಧರ್ಮೇಂದ್ರ ಪ್ರಧಾನ್‌ ಅವಧಿಯಲ್ಲಿ ಇದುವರೆಗೆ 152 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಸುಮಾರು 7.5 ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ. ʼʼಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರು ಆರಾಮಾಗಿ ಓಡಾಡಿಕೊಂಡಿದ್ದಾರೆ. ಗಂಭೀರ ವಿಚಾರಗಳ ಬಗ್ಗೆ ಕಳವಳ ವ್ಯಕ್ತಪಡಸುವ ವಿದ್ಯಾರ್ಥಿಗಳು ಹಲ್ಲೆಗೆ ಒಳಗಾಗುತ್ತಿದ್ದಾರೆʼʼ ಎಂದು ರಾಹುಲ್‌ ಗಾಂಧಿ ಸೋಮವಾರದ ಪ್ರತಿಭಟನೆಯನ್ನು ಉದ್ದೇಶಿಸಿ ಹೇಳಿದ್ದಾರೆ.

ʼʼಯುವ ಜನತೆ ನ್ಯಾಯ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಕೇಂದ್ರ, ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಸ್ವಲ್ಪವೂ ಸರಿ ಇಲ್ಲ. ವಿದ್ಯಾರ್ಥಿಗಳ ವಿರುದ್ಧ ಆಶ್ರುವಾಯು ಪ್ರಯೋಗ, ಲಾಠಿಚಾರ್ಜ್‌ ನಡೆಸುವುದು ಪ್ರಜಾಪ್ರಭುತ್ವದ ರೀತಿಯಲ್ಲ. ಇದು ಭಾರತದ ಮಾರ್ಗವಲ್ಲʼʼ ಎಂದು ರಾಹುಲ್‌ ಗಾಂಧಿ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

"ದೆಹಲಿಯ ಬೀದಿಗಳಲ್ಲಿ ಹೋರಾಟ ನಡೆಸುತ್ತಿರುವ ಯುವ ಜನರು ಅಪರಾಧಿಗಳಲ್ಲ. ಅವರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಅವರನ್ನು ಗೌರವಿಸುವ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವುದು ಅವರ ಹಕ್ಕು" ಎಂದು ಹೇಳಿದ್ದಾರೆ.

ಸೋನಮ್ ವಾಂಗ್ಚುಕ್ ಕೋರಿಕೆ ಮೇರೆಗೆ ಉಪಾವಾಸ ಅಂತ್ಯಗೊಳಿಸಿದ ಅಭಿಜಿತ್ ದೀಪ್ಕೆ; ವಶಕ್ಕೆ ಪಡೆದ ಪೊಲೀಸರು

ರಾಹುಲ್‌ ಗಾಂಧಿಯನ್ನು 56 ವರ್ಷದ ಯುವಕ ಎಂದು ಮೋದಿ

ಸಂಸತ್‌ನ ಮುಂಗಾರು ಅಧಿವೇಶನಕ್ಕೂ ಮುನ್ನ ಮಾತನಾಡಿದ್ದ ಮೋದಿ, ರಾಹುಲ್‌ ಗಾಂಧಿ ಅವರನ್ನು 56 ವರ್ಷದ ಯುವಕ ಎಂದು ಕರೆದಿದ್ದರು. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸಗಿ ಬಾಹ್ಯಾಕಾಶ ಸಂಸ್ಥೆಯೊಂದು ಕಕ್ಷೆಗೆ ರಾಕೆಟ್ ಉಡಾವಣೆ ಮಾಡಿ ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ, ಪ್ರಧಾನಿ ಮೋದಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪರೋಕ್ಷ ಟಾಂಗ್ ನೀಡಿದ್ದರು. "28 ವರ್ಷದ ಯುವಕರ ಬಗ್ಗೆ ಮಾತನಾಡುತ್ತಿದ್ದೇನೆ, 56 ವರ್ಷದವರ ಬಗ್ಗೆ ಅಲ್ಲ" ಎಂದು ವ್ಯಂಗ್ಯವಾಡಿದ್ದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author