ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

“ಅಮೆರಿಕ, ಜಪಾನ್‌ನಲ್ಲೂ ಇಂತಹ ಘಟನೆ ನಡೆಯುತ್ತೆ”: ಬಿಹಾರ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಉಡಾಫೆಯ ಉತ್ತರ ನೀಡಿದ ಸಚಿವ

Bihar minister shocking remark: ಬಿಹಾರದಲ್ಲಿ 14 ಕೋಟಿ ಜನಸಂಖ್ಯೆ ಇದೆ. ಇಲ್ಲಿ ದುಷ್ಟರು, ಅಶಿಕ್ಷಿತರು, ಅಜ್ಞಾನಿಗಳು, ಅಸಭ್ಯರು ಮತ್ತು ಒರಟು ಸ್ವಭಾವದವರು ಇದ್ದಾರೆ. ಅಂತಹ ಕೆಲವರು ಕಾನೂನಿನ ಆಳ್ವಿಕೆಯನ್ನು ದುರ್ಬಲಗೊಳಿಸುವ ಮತ್ತು ಬಿಹಾರದ ಹೆಸರಿಗೆ ಕೆಟ್ಟ ಹೆಸರು ತರುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎಂದು ಸಚಿವ ಅಶೋಕ್ ಚೌಧರಿ ಹೇಳಿದ್ದಾರೆ.

ಬಿಹಾರ ಸಚಿವ ಅಶೋಕ್ ಚೌಧರಿ

ಪಾಟ್ನಾ, ಸೆ. 24: ಸಮಸ್ತಿಪುರ ಮತ್ತು ಜಮುಯಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ (Bihar assault case) ಪ್ರಕರಣ ಆರೋಪಗಳ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದ್ದಕ್ಕೆ, ಬಿಹಾರದ ಸಚಿವ ಅಶೋಕ್ ಚೌಧರಿ (Ashok Choudhary) ಉದ್ಧಟತನ ಮೆರೆದಿದ್ದಾರೆ. “ಯಾವುದೇ ಒಂದು ನಿರ್ದಿಷ್ಟ ಕಥನವನ್ನು ರೂಪಿಸಬೇಡಿ. ಇಂತಹ ಘಟನೆಗಳು ಅಮೆರಿಕ ಮತ್ತು ಜಪಾನ್‌ನಲ್ಲಿಯೂ ನಡೆಯುತ್ತವೆ” ಎಂದು ಅವರು ಹೇಳಿದರು.

ʼʼಬಿಹಾರದಲ್ಲಿ 14 ಕೋಟಿ ಜನಸಂಖ್ಯೆ ಇದೆ. ಇಲ್ಲಿ ದುಷ್ಟರು, ಅಶಿಕ್ಷಿತರು, ಅಜ್ಞಾನಿಗಳು, ಅಸಭ್ಯರು ಮತ್ತು ಒರಟು ಸ್ವಭಾವದವರು ಇದ್ದಾರೆ. ಅಂತಹ ಕೆಲವರು ಕಾನೂನಿನ ಆಳ್ವಿಕೆಯನ್ನು ದುರ್ಬಲಗೊಳಿಸುವ ಮತ್ತು ಬಿಹಾರದ ಹೆಸರಿಗೆ ಕೆಟ್ಟ ಹೆಸರು ತರುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆʼʼ ಎಂದು ಸಚಿವರು ಹೇಳಿದ್ದಾರೆ.

ಬಿಹಾರ ಘಟನೆ ಬಗ್ಗೆ ಸಚಿವರ ಹೇಳಿಕೆ:



ಸಮಸ್ತಿಪುರ ಜಿಲ್ಲೆಯಲ್ಲಿ ಹದಿಹರೆಯದ ಬಾಲಕಿಯೊಬ್ಬಳಿಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಕಿರುಕುಳ ನೀಡಿದ್ದು, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ದಿನಗಳಲ್ಲಿ ಬಿಹಾರದ ಜಮುಯಿ ಮತ್ತು ದರ್ಭಾಂಗದಲ್ಲಿ ವರದಿಯಾದ ಮಹಿಳೆಯರ ಮೇಲಿನ ಕಿರುಕುಳದ ಪ್ರಕರಣಗಳಿಗೂ ಈ ಘಟನೆ ಹೋಲಿಕೆಯಾಗುತ್ತದೆ ಎಂದು ವರದಿಯಾಗಿದೆ.

ಜಮುಯಿ ಲೈಂಗಿಕ ದೌರ್ಜನ್ಯ ಕೇಸ್: ಘಟನೆ ಕುರಿತು ನಾಲಿಗೆ ಹರಿಬಿಟ್ಟ ಬಿಹಾರ ಸಚಿವ!

ಪತ್ರಕರ್ತರು ಸಚಿವರನ್ನು ಪ್ರಶ್ನಿಸುತ್ತಾ, “ಸರ್ಕಾರಕ್ಕೆ ಇನ್ನು ಯಾವುದೇ ಅಧಿಕಾರವೇ ಉಳಿದಿಲ್ಲವೇ? ಜನರು ರಸ್ತೆಯಲ್ಲಿ ಹೇಗೆ ಓಡಾಡಬೇಕು?” ಎಂದು ಕೇಳಿದರು. ಅದಕ್ಕೆ ಸಚಿವ ಅಶೋಕ್ ಚೌಧರಿ, “ನೋಡಿ, ಯಾವುದೇ ನಿರ್ದಿಷ್ಟ ಕಥನವನ್ನು ರೂಪಿಸಬೇಡಿ” ಎಂದು ತಿರುಗೇಟು ನೀಡಿದರು.

ಜಮುಯಿಯಲ್ಲಿ 24 ಗಂಟೆಗಳಲ್ಲಿ ಮತ್ತು ಸಮಷ್ಟಿಪುರದಲ್ಲಿ 12 ಗಂಟೆಗಳಲ್ಲಿ ನಡೆದ ಘಟನೆಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು. ಇಂತಹ ಘಟನೆಗಳು ಪ್ರತಿದಿನ ನಡೆಯುತ್ತಿವೆ ಎಂದು ಪತ್ರಕರ್ತರು ಹೇಳಿದಾಗ, ಅಮೆರಿಕ, ಜಪಾನ್‌ನ ಉದಾಹರಣೆಗಳನ್ನು ಉಲ್ಲೇಖಿಸಿದ ಸಚಿವರು, ಪ್ರಪಂಚದಾದ್ಯಂತ ಇಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದರು.

“ಇಂತಹ ಘಟನೆಗಳು ಎಲ್ಲೆಡೆಯೂ ನಡೆಯುತ್ತವೆ. ಅಮೆರಿಕ ಮತ್ತು ಜಪಾನ್‌ನಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ. ಅಮೆರಿಕದಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ ಎಂಬುದೇನಿಲ್ಲ. ಅಮೆರಿಕ ನಮಗಿಂತ ಹೆಚ್ಚು ಅಭಿವೃದ್ಧಿ ಹೊಂದಿದ ದೇಶವಾಗಿದ್ದರೂ ಅಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ. ನಿಜವಾಗಿಯೂ ಮುಖ್ಯವಾದ ವಿಷಯವೆಂದರೆ, ಇಂತಹ ಕೃತ್ಯ ಎಸಗಿದವರನ್ನು ಸರ್ಕಾರ ರಕ್ಷಿಸಲು ಪ್ರಯತ್ನಿಸುತ್ತಿದೆಯೇ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆಯೇ ಎಂಬುದು. ಇದೇ ಪ್ರಮುಖ ಪ್ರಶ್ನೆ” ಎಂದು ಸಚಿವರು ತಿಳಿಸಿದ್ದಾರೆ.

ʼʼನಾಳೆಯಿಂದ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಯಾವುದೇ ಮುಖ್ಯಮಂತ್ರಿ ಅಥವಾ ವಿಶ್ವದ ಯಾವುದೇ ನಾಯಕ ಹೇಳಲು ಸಾಧ್ಯವಿಲ್ಲ. ಆದರೆ ಇಂತಹ ಘಟನೆಗಳು ನಡೆದರೆ, ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆʼʼ ಎಂದು ಸಚಿವ ಅಶೋಕ್ ಚೌಧರಿ ಹೇಳಿದ್ದಾರೆ.