ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿಯಲ್ಲಿ ಹಸಿರು ಪಟಾಕಿಗೆ ಸುಪ್ರೀಂ ಷರತ್ತುಬದ್ಧ ಅನುಮತಿ; ನವೆಂಬರ್ 7, 8ರಂದು ಮಾತ್ರ ಸಿಡಿಸಲು ಅವಕಾಶ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೆಹಲಿ ಮತ್ತು ಎನ್‌ಸಿಆರ್‌ ವಲಯದಲ್ಲಿ ವಾಯು ಮಾಲಿನ್ಯ ತಡೆ ಹಾಗೂ ಹಬ್ಬದ ಆಚರಣೆ ಎರಡನ್ನೂ ಸರಿದೂಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠವು ಈ ಆದೇಶ ಹೊರಡಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೆಹಲಿ ಮತ್ತು ಎನ್‌ಸಿಆರ್‌ ವಲಯದಲ್ಲಿ ವಾಯು ಮಾಲಿನ್ಯ ತಡೆ ಹಾಗೂ ಹಬ್ಬದ ಆಚರಣೆ ಎರಡನ್ನೂ ಸರಿದೂಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ (Supreme Court) ಮಹತ್ವದ ಆದೇಶ ಪ್ರಕಟಿಸಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಪಟಾಕಿಗಳ ಮೇಲೆ ಹೇರಲಾಗಿದ್ದ ಸಂಪೂರ್ಣ ನಿಷೇಧವನ್ನು ಸಡಿಲಗೊಳಿಸಿರುವ ನ್ಯಾಯಾಲಯ, ನಿಗದಿತ ಮಾರ್ಗಸೂಚಿಗಳ ಅಡಿಯಲ್ಲಿ ಪ್ರಮಾಣೀಕೃತ 'ಹಸಿರು ಪಟಾಕಿ'ಗಳ (Certified Green Crackers) ಮಾರಾಟ ಮತ್ತು ಬಳಕೆಗೆ ಷರತ್ತುಬದ್ಧ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. ಸಾರ್ವಜನಿಕರ ಆರೋಗ್ಯ ಮತ್ತು ಹಬ್ಬದ ಸಂಸ್ಕೃತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಾಲಯವು ಹಸಿರು ಪಟಾಕಿ ಬಳಕೆಗೆ ಕೇವಲ ಎರಡು ದಿನಗಳ ಕಾಲಾವಕಾಶ ನೀಡಿದ್ದು, ಕಠಿಣ ನಿಯಮಗಳನ್ನು ವಿಧಿಸಿದೆ.

ಮಾರ್ಗಸೂಚಿಗಳೇನು?

ಕೇವಲ ನವೆಂಬರ್ 7 ಮತ್ತು ನವೆಂಬರ್ 8ರಂದು ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶವಿರುತ್ತದೆ. ಅಷ್ಟೇ ಅಲ್ಲದೇ ನಿಗದಿತ ದಿನಗಳಂದು ಕೇವಲ ನಿಗದಿಪಡಿಸಿದ ಅವಧಿಯಲ್ಲಿ ಮಾತ್ರ ಪಟಾಕಿ ಸಿಡಿಸಬೇಕು. ಬೆಳಿಗ್ಗೆ6 ಗಂಟೆಯಿಂದ 7 ಗಂಟೆಯವರೆಗೆ ಹಾಗೂ ರಾತ್ರಿ: 8ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಹೊಡೆಯಲು ಅನುಮತಿ ಇದೆ. ಆಸ್ಪತ್ರೆಗಳು, ವೃದ್ಧಾಶ್ರಮಗಳು, ಆರೋಗ್ಯ ಕೇಂದ್ರಗಳು, ಮತ್ತು ಶಿಕ್ಷಣ ಸಂಸ್ಥೆಗಳ ಸುತ್ತಲಿನ 300 ಮೀಟರ್ ವ್ಯಾಪ್ತಿಯನ್ನು 'ಸೈಲೆನ್ಸ್ ಜೋನ್' ಎಂದು ಪರಿಗಣಿಸಲಾಗಿದ್ದು, ಇಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಅನಧಿಕೃತ ಪಟಾಕಿಗಳನ್ನು ಮಾರಾಟ ಮಾಡುವ ಅಥವಾ ತಯಾರಿಸುವ ವ್ಯಾಪಾರಿಗಳ ಭದ್ರತಾ ಠೇವಣಿಯನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆದೇಶಿಸಲಾಗಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ಇಂದಿನಿಂದ ಕಠಿಣ ಮಾಲಿನ್ಯ ನಿಯಮ ಜಾರಿ: ಹಳೆಯ ವಾಹನಗಳಿಗೆ ನಿಷೇಧ, ಶೇ. 50 ವರ್ಕ್ ಫ್ರಮ್ ಹೋಮ್ ಕಡ್ಡಾಯ

ಏನಿದು ಹಸಿರು ಪಟಾಕಿ?

ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR-NEERI) ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿಗಳು ಸಾಂಪ್ರದಾಯಿಕ ಪಟಾಕಿಗಳಿಗಿಂತ ಭಿನ್ನವಾಗಿವೆ. ಇವುಗಳಲ್ಲಿ ಬೇರಿಯಂ ನೈಟ್ರೇಟ್‌ನಂತಹ ಅಪಾಯಕಾರಿ ರಾಸಾಯನಿಕಗಳು ಇರುವುದಿಲ್ಲ. ಇವು ಸಾಮಾನ್ಯ ಪಟಾಕಿಗಳಿಗಿಂತ ಶೇಕಡಾ 30 ರಷ್ಟು ಕಡಿಮೆ ಮಾಲಿನ್ಯ ಉಂಟುಮಾಡುತ್ತವೆ ಹಾಗೂ ಹೊಗೆ ಮತ್ತು ಧೂಳನ್ನು ಗಣನೀಯವಾಗಿ ನಿಯಂತ್ರಿಸುತ್ತವೆ.

Vishakha Bhat Heggar

View all posts by this author