ನವದೆಹಲಿ, ಜ. 22: ಮಧ್ಯ ಪ್ರದೇಶದ ಧಾರ್‌ನಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣದಲ್ಲಿ (Bhojshala Complex) ಶುಕ್ರವಾರ (ಜನವರಿ 23) ಹಿಂದೂ ಮತ್ತು ಮುಸ್ಲಿಂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ (Supreme Court) ಗುರುವಾರ (ಜನವರಿ 22) ಆದೇಶಿಸಿದೆ. ಸರಸ್ವತಿ ಪೂಜೆ ಹಬ್ಬವು ಶುಕ್ರವಾರದ ನಮಾಜ್ ಜತೆಗೆ ಒಂದೇ ದಿನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸುಪ್ರೀ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ನಿಗದಿಪಡಿಸಿದ ಪ್ರದೇಶದಲ್ಲಿ ನಾಳೆ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಜುಮಾ ಪ್ರಾರ್ಥನೆಗಳನ್ನು ನಡೆಸಬೇಕು. ನಮಾಜ್ ಮುಗಿದ ತಕ್ಷಣ ಜನಸಮೂಹ ಚದುರಬೇಕು ಎಂದು ನ್ಯಾಯಾಲಯವು ಸೂಚಿಸಿದೆ. ಬಳಿತ ಅದೇ ಸ್ಥಳದಲ್ಲಿ ಸರಸ್ವತಿ ಪೂಜೆಗೆ ಅನುಕೂಲವಾಗುವಂತೆ ಇದೇ ರೀತಿಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಸುಪ್ರೀಂ ಹೇಳಿದೆ.
ಒಂದೇ ವೇದಿಕೆಯ ಮೇಲೆ ಹಿಂದೂ-ಮುಸ್ಲಿಂ ಜೋಡಿಯ ಮದುವೆ
ಮಧ್ಯಾಹ್ನ 1ರಿಂದ 3 ಗಂಟೆಯೊಳಗೆ ನಮಾಜ್ ಮಾಡಲು ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಅದೇ ಆವರಣದೊಳಗೆ ಪ್ರತ್ಯೇಕ ಹಾಗೂ ವಿಶೇಷ ಪ್ರದೇಶವನ್ನು, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳೊಂದಿಗೆ ಒದಗಿಸಬೇಕು. ಅದೇ ರೀತಿಯಲ್ಲಿ, ಬಸಂತ್ ಪಂಚಮಿ ಸಂದರ್ಭದಲ್ಲಿ ಹಿಂದೂ ಸಮುದಾಯವು ಸಂಪ್ರದಾಯಬದ್ಧ ಆಚರಣೆಗಳನ್ನು ನಡೆಸಲು ಪ್ರತ್ಯೇಕ ಸ್ಥಳದ ವ್ಯವಸ್ಥೆ ಕಲ್ಪಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಭೋಜಶಾಲಾ ಕಾಂಪ್ಲೆಕ್ಸ್ ಎಂಬುದು 11ನೇ ಶತಮಾನದ ಸ್ಮಾರಕವಾಗಿದ್ದು, ಭಾರತೀಯ ಪುರಾತತ್ವ ಸಮೀಕ್ಷೆಯ ರಕ್ಷಣೆಯಲ್ಲಿದೆ. ಈ ಸ್ಥಳವು ಬಹುಕಾಲದಿಂದ ಧಾರ್ಮಿಕ ವಿವಾದಕ್ಕೆ ಕಾರಣವಾಗಿದೆ. ಹಿಂದೂಗಳು ಇದನ್ನು ಸರಸ್ವತಿ ದೇವಿಗೆ ಸಮರ್ಪಿತ ದೇವಾಲಯವೆಂದು ಪರಿಗಣಿಸಿದರೆ, ಇತ್ತ, ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಹೇಳಿಕೊಳ್ಳುತ್ತಾರೆ.
ಭೋಜ್ ಉತ್ಸವ ಕಮಿಟಿ ಜನವರಿ 23ರಂದು ದಿನಪೂರ್ತಿ ಸರಸ್ವತಿ ಪೂಜೆ ನಡೆಸಲು ಅಧಿಕಾರಿಗಳಿಂದ ಅನುಮತಿ ಕೋರಿತ್ತು. ಇದೇ ವೇಳೆ ಆ ದಿನದ ಮಹತ್ವವನ್ನು ಉಲ್ಲೇಖಿಸಿ, ಮುಸ್ಲಿಂ ಸಮುದಾಯವು ಮಧ್ಯಾಹ್ನ 1ರಿಂದ 3 ಗಂಟೆಗಳವರೆಗೆ ಶುಕ್ರವಾರದ ನಮಾಜ್ ಸಲ್ಲಿಸಲು ಅನುಮೋದನೆ ನೀಡುವಂತೆ ಮನವಿ ಪತ್ರವನ್ನು ಸಲ್ಲಿಸಿತ್ತು.
ಕಳೆದ 23 ವರ್ಷಗಳಿಂದ ಜಾರಿಯಲ್ಲಿರುವ ವ್ಯವಸ್ಥೆಯಂತೆ, ಭಾರತೀಯ ಪುರಾತತ್ವ ಸಮೀಕ್ಷೆಯು ಮಂಗಳವಾರ ಹಿಂದೂಗಳಿಗೆ ಭೋಜಶಾಲಾ ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುತ್ತದೆ. ಅದೇ ರೀತಿ ಶುಕ್ರವಾರ ಮುಸ್ಲಿಂ ಸಮುದಾಯಕ್ಕೆ ನಮಾಜ್ ಸಲ್ಲಿಸಬಹುದುದಾಗಿದೆ.
ಇದೇ ರೀತಿಯ ಪರಿಸ್ಥಿತಿ 2016ರಲ್ಲೂ ಬಂದಿತ್ತು. ಆ ವರ್ಷ ಬಸಂತ್ ಪಂಚಮಿ ಶುಕ್ರವಾರ ಬಂದ ಹಿನ್ನೆಲೆಯಲ್ಲಿ, ವಿವಾದಿತ ಸ್ಥಳದಲ್ಲಿ ಪ್ರಾರ್ಥನಾ ಸಮಯದ ವಿಚಾರವಾಗಿ ಧಾರ್‌ನಲ್ಲಿ ಪ್ರತಿಭಟನೆಗಳು ಹಾಗೂ ಘರ್ಷಣೆಗಳು ನಡೆದಿದ್ದವು. ಇನ್ನು ಪರಿಸ್ಥಿತಿಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಕ್ಷಿಪ್ರ ಕಾರ್ಯ ಪಡೆ ಸೇರಿದಂತೆ ಸುಮಾರು 8,000 ಪೊಲೀಸ್ ಸಿಬ್ಬಂದಿಯನ್ನು ಧಾರ್ ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ. ನಗರದಾದ್ಯಂತ ಸಿಸಿಟಿವಿ ಕ್ಯಾಮರಾ, ವಾಹನ ಗಸ್ತು ಹೆಚ್ಚಿಸಲಾಗಿದ್ದು ಸಾಮಾಜಿಕ ಮಾಧ್ಯಮ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.