ನವದೆಹಲಿ: ನ್ಯಾಯಾಲಯದ ಕಲಾಪಗಳ ಆಡಿಯೋ ಹಾಗೂ ವಿಡಿಯೊಗಳನ್ನು ಅನುಮತಿಯಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೋಸ್ಟ್ ಮಾಡುವುದು ಅಥವಾ ಹಂಚಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ (Supreme Court) ಮಧ್ಯಂತರ ತಡೆ ವಿಧಿಸಿದೆ. ನ್ಯಾಯಾಲಯದ ಗೌರವ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸ ಕಾಪಾಡುವ ಉದ್ದೇಶದಿಂದ ಈ ಮಹತ್ವದ ಆದೇಶ ಹೊರಡಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ ಈ ಮಧ್ಯಂತರ ಆದೇಶ ನೀಡಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಸಂಬಂಧಿತ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅಥವಾ ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅವರ ಪೂರ್ವಾನುಮತಿ ಇಲ್ಲದೆ ನ್ಯಾಯಾಲಯದ ಕಲಾಪಗಳ ಆಡಿಯೋ-ವಿಡಿಯೊಗಳನ್ನು ಕತ್ತರಿಸುವುದು, ತಿದ್ದುಪಡಿ ಮಾಡುವುದು, ಹಂಚುವುದು, ಮರುಹಂಚಿಕೆ ಮಾಡುವುದು, ಅಪ್‌ಲೋಡ್ ಮಾಡುವುದು ಅಥವಾ ಅದರಿಂದ ಹಣ ಗಳಿಸುವುದು ನಿಷೇಧಿಸಲಾಗಿದೆ.
ಆದರೆ, ಈ ಆದೇಶವು ನ್ಯಾಯಾಲಯದ ವರದಿಗಾರಿಕೆ ಮೇಲೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ 'ಗ್ಯಾಗ್ ಆರ್ಡರ್' ಎಂದು ಪರಿಗಣಿಸಬಾರದು ಎಂದು ಪೀಠ ತಿಳಿಸಿದೆ.
'ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳ ದುರುಪಯೋಗ ಹೆಚ್ಚಾಗಿದೆ'
ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಲಯದ ಕಲಾಪಗಳ ಆಯ್ದ ಭಾಗಗಳನ್ನು ಸಂದರ್ಭದಿಂದ ಹೊರಗೆ ತೆಗೆದು ವೈರಲ್ ಮಾಡುವುದರಿಂದ ನ್ಯಾಯಾಲಯದ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ, "ನ್ಯಾಯಾಲಯದ ವಿಡಿಯೊಗಳನ್ನು ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದನ್ನೇ ನಾವು ತಡೆಯುತ್ತಿದ್ದೇವೆ. ಲೈವ್‌ಸ್ಟ್ರೀಮ್ ಅಥವಾ ಆಡಿಯೋ-ವಿಡಿಯೊ ಪ್ರದರ್ಶನಕ್ಕೂ ಪೂರ್ವಾನುಮತಿ ಕಡ್ಡಾಯ" ಎಂದು ಹೇಳಿದರು.
'ನ್ಯಾಯಾಲಯ 24x7 ಮನರಂಜನಾ ವಾಹಿನಿಯಲ್ಲ'
"ನ್ಯಾಯಾಲಯವು 24 ಗಂಟೆಯ ಮನರಂಜನಾ ವಾಹಿನಿಯಲ್ಲ. ವರ್ಚುವಲ್ ವಿಚಾರಣೆಯ ಲಿಂಕ್‌ಗಳನ್ನು ನಿಯಂತ್ರಣವಿಲ್ಲದೆ ಹಂಚಲಾಗುತ್ತಿದೆ. ಇದಕ್ಕೂ ನಿಯಂತ್ರಣ ಅಗತ್ಯ" ಎಂದು ನ್ಯಾಯಮೂರ್ತಿ ಬಾಗ್ಚಿ ಅಭಿಪ್ರಾಯಪಟ್ಟರು.
Meta, X ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್
ನ್ಯಾಯಾಲಯದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ Meta, X ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
AI ದುರುಪಯೋಗದ ಎಚ್ಚರಿಕೆ
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೃತಕ ಬುದ್ಧಿಮತ್ತೆ (AI) ಬಳಸಿ ನ್ಯಾಯಾಧೀಶರು ಅಥವಾ ವಕೀಲರ ಮಾತುಗಳನ್ನು ಬದಲಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯ ನ್ಯಾಯಮೂರ್ತಿಯ ಅಸಮಾಧಾನ
ಇತ್ತೀಚೆಗೆ ಜುಲೈ 20ರ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದ ತುರ್ತು ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ತಾವು ನಿರಾಕರಿಸಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸ್ಪಷ್ಟಪಡಿಸಿದರು.
"ಯಾವುದೇ ಅರ್ಜಿ ಸಲ್ಲಿಕೆಯಾಗಿರಲಿಲ್ಲ. ಕೇವಲ ಒಂದು ಮನವಿ ಪತ್ರ ಬಂದಿತ್ತು. ಅದನ್ನೇ ಅರ್ಜಿ ಎಂದು ಮಾಧ್ಯಮಗಳು ವರದಿ ಮಾಡಿವೆ. ನಾನು ಹೇಳದ ಮಾತುಗಳನ್ನು ನನ್ನ ಹೆಸರಿನಲ್ಲಿ ಪ್ರಸಾರ ಮಾಡಲಾಗುತ್ತಿದೆ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.