ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಲೂನ್ ಸಿಬ್ಬಂದಿಯ ಎಡವಟ್ಟು: ಮಾಡೆಲ್‌ನ ಕೂದಲು ಹೆಚ್ಚು ತುಂಡರಿಸಿದ್ದಕ್ಕೆ ಬಿತ್ತು 25 ಲಕ್ಷ ರುಪಾಯಿ ದಂಡ!

ಸುಪ್ರೀಂ ಕೋರ್ಟ್ ಮಹಿಳೆಗೆ ‘ತಪ್ಪಾದ ಹೇರ್‌ಕಟ್’ ಪ್ರಕರಣದಲ್ಲಿ ನೀಡಲಾಗಿದ್ದ 2 ಕೋಟಿ ರುಪಾಯಿ ಪರಿಹಾರವನ್ನು 25 ಲಕ್ಷ ರುಪಾಯಿಗೆ ಕಡಿತಗೊಳಿಸಿದೆ. ಗ್ರಾಹಕ ನ್ಯಾಯಾಲಯವು ಮೊದಲು ದೊಡ್ಡ ಮೊತ್ತದ ಪರಿಹಾರ ನೀಡಿದ್ದರೂ, “ವೈಯಕ್ತಿಕ ಅಭಿಪ್ರಾಯ ಅಥವಾ ಭಾವನೆಗಳ ಆಧಾರದ ಮೇಲೆ ಅತಿಯಾದ ಪರಿಹಾರ ನೀಡಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್

ನವದೆಹಲಿ, ಫೆ. 12: ಸಾಮಾನ್ಯವಾಗಿ ನಾವು ಹೇರ್ ಸಲೂನ್‌ಗಳಿಗೆ (Hair Salon) ಹೋಗಿ ಕೂದಲಿನ ವಿನ್ಯಾಸ (Hair Style) ಮಾಡಿಸಿಕೊಳ್ಳುತ್ತೇವೆ. ಒಂದೊಮ್ಮೆ ಕೂದಲನ್ನು ಸರಿಯಾಗಿ ಕತ್ತರಿಸದಿದ್ದರೆ ಸ್ವಲ್ಪ ದಿನ ಬೇಸರಪಟ್ಟು ಸುಮ್ಮನಾಗುತ್ತೇವೆ. ಆದರೆ ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಒಂದು ಸಣ್ಣ ತಪ್ಪು ಒಬ್ಬ ಮಾಡೆಲ್‌ನ ಜೀವನವನ್ನೇ ಬದಲಿಸಿತು. ಆಕೆಯ ಸೂಚನೆಗೆ ವಿರುದ್ಧವಾಗಿ ಕೂದಲು ಕತ್ತರಿಸಿದ ಸಲೂನ್ ವಿರುದ್ಧ ಆಕೆ ನಡೆಸಿದ ಕಾನೂನು ಹೋರಾಟವು ಇಂದು ದೇಶಾದ್ಯಂತ ಚರ್ಚೆಯಾಗುತ್ತಿದೆ.

ಏನಿದು ಪ್ರಕರಣ?

ದೆಹಲಿಯ ಅತ್ಯಂತ ಪ್ರತಿಷ್ಠಿತ ಐಟಿಸಿ ಮೌರ್ಯ (ITC Maurya) ಹೋಟೆಲ್‌ನಲ್ಲಿರುವ ಸಲೂನ್‌ಗೆ 2018ರಲ್ಲಿ ಆಶ್ನಾ ರಾಯ್ ಎಂಬ ವೃತ್ತಿಪರ ಮಾಡೆಲ್ ಭೇಟಿ ನೀಡಿದ್ದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು, ಕೂದಲಿನ ವಿನ್ಯಾಸಕ್ಕೆ ಸಂಬಂಧಿಸಿದ ಅನೇಕ ಪ್ರತಿಷ್ಠಿತ ಕಂಪನಿಗಳ ರಾಯಭಾರಿಯಾಗಿದ್ದರು. ಅಂದು ಅವರು ಸಲೂನ್ ಸಿಬ್ಬಂದಿಗೆ ತಮ್ಮ ಕೂದಲನ್ನು ಒಂದು ನಿರ್ದಿಷ್ಟ ಶೈಲಿಯಲ್ಲಿ (Long layers) ಕತ್ತರಿಸಲು ಸ್ಪಷ್ಟವಾಗಿ ಸೂಚಿಸಿದ್ದರು. ಆದರೆ ಅಲ್ಲಿನ ಸಿಬ್ಬಂದಿ ಮಾಡೆಲ್ ನೀಡಿದ ಸೂಚನೆಯನ್ನು ಕಡೆಗಣಿಸಿ, ಕೇವಲ ನಾಲ್ಕು ಇಂಚುಗಳಷ್ಟು ಕೂದಲನ್ನು ಮಾತ್ರ ಉಳಿಸಿ ಮಿಕ್ಕೆಲ್ಲವನ್ನೂ ಅತ್ಯಂತ ಚಿಕ್ಕದಾಗಿ ಕತ್ತರಿಸಿದ್ದರು.

ಭಾರತೀಯ ವಾಯುಪಡೆಗೆ ಆನೆ ಬಲ; 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಕೇಂದ್ರದ ಅಸ್ತು!

ಮಾಡೆಲ್‌ ಅನುಭವಿಸಿದ ಸಂಕಷ್ಟ

ಆಶ್ನಾ ರಾಯ್ ಪ್ರಕಾರ, ಅವರ ಉದ್ದನೆಯ ಮತ್ತು ಸುಂದರವಾದ ಕೂದಲೇ ವೃತ್ತಿ ಜೀವನದ ಬಂಡವಾಳವಾಗಿತ್ತು. ಕೂದಲಿನ ವಿನ್ಯಾಸವು ಸಂಪೂರ್ಣವಾಗಿ ಕೆಟ್ಟುಹೋದ ಕಾರಣ, ಅವರು ಮಾಡಿಕೊಂಡಿದ್ದ ಅನೇಕ ದೊಡ್ಡ ಮೊತ್ತದ ಮಾಡೆಲಿಂಗ್ ಒಪ್ಪಂದಗಳು ತಕ್ಷಣವೇ ರದ್ದಾದವು. ಇದು ಅವರಿಗೆ ಆರ್ಥಿಕವಾಗಿ ಭಾರಿ ಹೊಡೆತ ನೀಡಿದ್ದಲ್ಲದೆ, ಅವರ ಆತ್ಮವಿಶ್ವಾಸವನ್ನು ಕುಗ್ಗಿಸಿತು. ಈ ಘಟನೆಯಿಂದಾಗಿ ಅವರು ತೀವ್ರ ಮಾನಸಿಕ ಆಘಾತ ಮತ್ತು ಖಿನ್ನತೆಗೆ ಒಳಗಾದರು. ಅಲ್ಲದೆ ಸಲೂನ್ ಮಾಡಿದ ತಪ್ಪನ್ನು ಸರಿಪಡಿಸಲು ನೀಡಿದ ಕೆಮಿಕಲ್ ಟ್ರೀಟ್‌ಮೆಂಟ್ನಿಂದಾಗಿ ಅವರ ತಲೆಬುರುಡೆಗೆ ಹಾನಿಯಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಕಾನೂನು ಹೋರಾಟ ಮತ್ತು ತೀರ್ಪು

ಈ ಸೇವಾ ನ್ಯೂನತೆಯ ವಿರುದ್ಧ ಆಶ್ನಾ ರಾಯ್ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗದ (NCDRC) ಮೊರೆ ಹೋದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, ಸಲೂನ್‌ನ ನಿರ್ಲಕ್ಷ್ಯವನ್ನು ಎತ್ತಿಹಿಡಿಯಿತು. ಹೋಟೆಲ್ ಆಡಳಿತ ಮಂಡಳಿಯು ಮಾಡೆಲ್‌ಗೆ 2 ಕೋಟಿ ರುಪಾಯಿ ಪರಿಹಾರ ನೀಡುವಂತೆ ಆದೇಶಿಸಿತು.

ಇದನ್ನು ಪ್ರಶ್ನಿಸಿ ಹೋಟೆಲ್ ಆಡಳಿತ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ, ಸೇವಾ ನ್ಯೂನತೆ ನಡೆದಿರುವುದು ನಿಜ, ಆದರೆ 2 ಕೋಟಿ ರುಪಾಯಿಗಳ ಪರಿಹಾರ ಮೊತ್ತವು ತುಂಬಾ ಹೆಚ್ಚಾಯಿತು ಎಂದು ಅಭಿಪ್ರಾಯಪಟ್ಟಿದೆ. ಪರಿಹಾರದ ಮೊತ್ತವನ್ನು ಲೆಕ್ಕ ಹಾಕುವಾಗ ಸಂತ್ರಸ್ತೆಯ ಆದಾಯದ ದಾಖಲೆಗಳು ಮತ್ತು ನೈಜ ನಷ್ಟವನ್ನು ಪರಿಗಣಿಸಬೇಕು ಎಂದು ಹೇಳಿದ ನ್ಯಾಯಾಲಯವು ಪರಿಹಾರ ಮೊತ್ತವನ್ನು 2 ಕೋಟಿ ರುಪಾಯಿಯಿಂದ 25 ಲಕ್ಷ ರುಪಾಯಿಗೆ ಇಳಿಸಿ ಆದೇಶ ಪ್ರಕಟಿಸಿದೆ.