ನವದೆಹಲಿ, ಮೇ 25: ಕಾಕ್ರೋಚ್ ಜನತಾ ಪಾರ್ಟಿಯ (Cockroach Janata Party) ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ತಿರಸ್ಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೀಡಿದ್ದರು ಎನ್ನಲಾದ ಹೇಳಿಕೆಗಳ ನಂತರ ಈ ತಿಂಗಳ ಆರಂಭದಲ್ಲಿ ವಿಡಂಬನಾತ್ಮಕ ಆನ್‌ಲೈನ್ ಅಭಿಯಾನ ಕಾಕ್ರೋಚ್ ಜನತಾ ಪಾರ್ಟಿ ಜನ್ಮ ತಾಳಿತ್ತು. ಕೇಂದ್ರೀಯ ತನಿಖಾ ದಳ (ಸಿಬಿಐ) ಸಿಜೆಪಿ ಪಕ್ಷದ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವಕೀಲ ರಾಜಾ ಚೌಧರಿ ಸಲ್ಲಿಸಿರುವ ಈ ಅರ್ಜಿಯು, ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಮಾಡಲಾದ ಮೌಖಿಕ ಅಭಿಪ್ರಾಯಗಳನ್ನು ಕೆಲವು ಚಳವಳಿಗೆ ಸಂಬಂಧಿಸಿದ ವ್ಯಕ್ತಿಗಳು ವಾಣಿಜ್ಯ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಈ ಅಭಿಯಾನದೊಂದಿಗೆ ಗುರುತಿಸಿಕೊಂಡಿರುವ ಕೆಲವು ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ನಕಲಿ ವಕೀಲರು ಮತ್ತು ನಕಲಿ ಕಾನೂನು ಪದವಿಗಳ ಕುರಿತು ತನಿಖೆ ನಡೆಸುವಂತೆಯೂ ಅದು ಒತ್ತಾಯಿಸಿದೆ.
ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿಗಳ (CJI) ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಎಮ್. ಪಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ಪ್ರಸ್ತಾಪಿಸಿದಾಗ, ನ್ಯಾಯಾಲಯವು ಈ ವಿಷಯವನ್ನು ತಕ್ಷಣದ ಹಸ್ತಕ್ಷೇಪ ಅಗತ್ಯವಿರುವ ತುರ್ತು ಪ್ರಕರಣವಾಗಿ ಪರಿಗಣಿಸಲು ನಿರಾಕರಿಸಿತು.
ಕಾಕ್ರೋಚ್ ಜನತಾ ಪಕ್ಷದ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್: ಸಂಸ್ಥಾಪಕ ಅಭಿಜೀತ್ ದಿಪ್ಕೆ ಹೇಳಿದ್ದೇನು?
ಇದರಲ್ಲಿ ಅಷ್ಟೊಂದು ಗಂಭೀರ ತುರ್ತು ಪರಿಸ್ಥಿತಿ ಕಾಣುತ್ತಿಲ್ಲ. ನಾವು ನಂತರ ನೋಡುತ್ತೇವೆ ಎಂದು ವಕೀಲರು ತುರ್ತು ವಿಚಾರಣೆಗೆ ಒತ್ತಾಯಿಸಿದ ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಹೇಳಿದರು. ವಾದವಿವಾದದ ಸಂದರ್ಭದಲ್ಲಿ, ವಕೀಲ ಎನ್.ಕೆ. ಗೋಸ್ವಾಮಿ ಅವರು ಈ ಅಭಿಯಾನವು ನ್ಯಾಯಾಂಗದ ಘನತೆ ಮತ್ತು ಪ್ರತಿಷ್ಠೆಗೆ ಹಾನಿ ಮಾಡುತ್ತಿದೆ ಎಂದು ವಾದಿಸಿದರು. ಆದರೆ, ಈ ವಿಷಯವನ್ನು ಅತಿಯಾಗಿ ದೊಡ್ಡದಾಗಿ ತೋರಿಸಲಾಗುತ್ತಿದೆ ಎಂದು ಪೀಠ ಹೇಳಿತು. ಜತೆಗೆ ಇದನ್ನು ತುಂಬಾ ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ ಎಂದು ಸೂಚಿಸಿತು.
ಮೇ 15ರಂದು ನಡೆದ ವಿಚಾರಣೆಯಲ್ಲಿ ವಕೀಲರೊಬ್ಬರಿಗೆ ಹಿರಿಯ (ಸೀನಿಯರ್) ಸ್ಥಾನಮಾನ ನೀಡುವ ಕುರಿತಾದ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಜಿರಳೆಗಳು ಮತ್ತು ಪರಾವಲಂಬಿಗಳು ಎಂಬ ಪದಗಳನ್ನು ಬಳಸಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಮಾಧ್ಯಮದಲ್ಲಿ ಮುನ್ನೆಲೆಗೆ ಬಂತು.
ಈ ವೃತ್ತಿಯಲ್ಲಿ ಯುವಜನತೆಗೆ ಉದ್ಯೋಗ ಸಿಗುತ್ತಿಲ್ಲ. ಕೆಲವರು ಸಾಮಾಜಿಕ ಮಾಧ್ಯಮದಲ್ಲಿದ್ದಾರೆ, ಕೆಲವರು ಆರ್‌ಟಿಐ ಕಾರ್ಯಕರ್ತರಾಗುತ್ತಾರೆ. ಆ ಮೂಲಕ ಜಿರಳೆಗಳಂತೆ ಉದ್ಯೋಗ ಪಡೆದುಕೊಳ್ಳುತ್ತಾರೆ ಎಂದು ವಿಚಾರಣೆಯ ಸಮಯದಲ್ಲಿ ಸಿಜೆಐ ಹೇಳಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ತಮ್ಮ ಹೇಳಿಕೆಗಳು ನಕಲಿ ಅರ್ಹತೆಗಳು ಮತ್ತು ನಕಲಿ ಪದವಿಗಳನ್ನು ಬಳಸಿಕೊಂಡು ವೃತ್ತಿಗಳನ್ನು ಪ್ರವೇಶಿಸುವ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡಿವೆಯೇ ಹೊರತು ಸಾಮಾನ್ಯವಾಗಿ ನಿರುದ್ಯೋಗಿ ಯುವಕರನ್ನು ಗುರಿಯಾಗಿರಿಸಿಕೊಂಡಿಲ್ಲ ಎಂದು ನಂತರ ಸಿಜೆಐ ಸ್ಪಷ್ಟಪಡಿಸಿದ್ದರು.