ನವದೆಹಲಿ: ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ಡಿಪೋಗಳು ಮತ್ತು ರೈಲ್ವೆ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ತಕ್ಷಣ ಬೀದಿ ನಾಯಿ(Stray dogs)ಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್(Supreme Court) ಖಡಕ್ ಆದೇಶ ಹೊರಡಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (UTs) ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್, ಬೀದಿನಾಯಿಗಳಿಗೆ ನಾಯಿಗಳನ್ನು ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರ ಅದೇ ಸ್ಥಳಗಳಿಗೆ ಮತ್ತೆ ಬಿಡುವಂತಿಲ್ಲ. ಅವುಗಳನ್ನು ಸುರಕ್ಷಿತ ಶ್ವಾನ ಕೇಂದ್ರಗಳಿಗೆ ಕಳಿಸಬೇಕೆಂದು ತನ್ನ ಆದೇಶದಲ್ಲಿ ತಿಳಿಸಿದೆ.
ಬೀದಿ ನಾಯಿಗಳ ವಿಚಾರಕ್ಕೆ ಕಳೆದ ಕೆಲವು ತಿಂಗಳಿಂದ ದೇಶಾದ್ಯಂತ ಭುಗಿಲೆದ್ದಿರುವ ಪರ ವಿರೋಧ ಚರ್ಚೆಗಳ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು NV ಅಂಜಾರಿಯಾ ಅವರ ಪೀಠವು, ಸಾರ್ವಜನಿಕ ಸ್ಥಳಗಳಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಸೆರೆಹಿಡಿಯಬೇಕು, ಸಂತಾನಹರಣ ಚಿಕಿತ್ಸೆ ಮತ್ತು ಲಸಿಕೆ ಹಾಕಬೇಕು. ಅವುಗಳನ್ನು ಮತ್ತೆ ಅದೇ ಪ್ರದೇಶದಲ್ಲಿ ಬಿಡಲಾಗುವುದಿಲ್ಲ ಏಕೆಂದರೆ ಅವುಗಳನ್ನು ಮತ್ತೆ ಬಿಡುವುದರಿಂದ ನ್ಯಾಯಾಲಯದ ನಿರ್ದೇಶನದ ಉದ್ದೇಶವೇ ವಿಫಲವಾಗುತ್ತದೆ ಎಂದಿದ್ದಾರೆ.
ವಿಶೇಷವಾಗಿ ಬೀದಿ ನಾಯಿಗಳ ಕಾಟ ತಡೆಯಲು ಮತ್ತು ಕಡಿತವನ್ನ ತಡೆಗಟ್ಟಲು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಾಲೇಜುಗಳಿಗೆ ಬೇಲಿ ಹಾಕಬೇಕು. ಬೇಲಿ ಅಗತ್ಯವಿರುವ ಎಲ್ಲ ಸಂಸ್ಥೆಗಳನ್ನು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 2 ವಾರಗಳ ಅವಧಿಯಲ್ಲಿ ಗುರುತಿಸಬೇಕು ಎಂದು ನಿರ್ದೇಶಿಸಿದೆ.ಅಲ್ಲದೇ ಇಂದಿನಿಂದ 3 ವಾರಗಳಲ್ಲಿ ಕ್ರಮಗಳ ಸ್ಥಿತಿ ಮತ್ತು ಅನಸರಣೆಗೆ ಕುರಿತು ಎಲ್ಲಾ ರಾಜ್ಯಗಳು ಅಫಿಡವಿಟ್ ಸಲ್ಲಿಸಬೇಕು ಎಂದು ಹೇಳಿದೆ.
ಬೀದಿ ಶ್ವಾನಗಳ ತೆರವು ಕಾರ್ಯಾಚರಣೆಯ ಉಸ್ತುವಾರಿಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಮತ್ತು ಸ್ಥಳೀಯ ಪುರಸಭೆ ಅಧಿಕಾರಿಗಳು ಮತ್ತು ಪಂಚಾಯತ್‌ಗಳು ಕನಿಷ್ಠ ಮೂರು ತಿಂಗಳ ಕಾಲ ಆವರ್ತಕ ತಪಾಸಣೆಗಳನ್ನು ನಡೆಸಿ ನ್ಯಾಯಾಲಯಕ್ಕೆ ವರದಿ ಮಾಡಬೇಕು. ಇದಲ್ಲದೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಂದ ಬೀಡಾಡಿ ಹಸುಗಳು ಮತ್ತು ಪ್ರಾಣಿಗಳನ್ನು ತೆರವುಗೊಳಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಇತರ ರಸ್ತೆ ಮಾಲೀಕತ್ವದ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ (NHAI) ಮತ್ತು ಇತರ ರಸ್ತೆ-ಮಾಲೀಕತ್ವದ ಏಜೆನ್ಸಿಗಳು, ಅಮಿಕಸ್ ಕ್ಯೂರಿಯಾಗಿ ಪೀಠಕ್ಕೆ ಸಹಾಯ ಮಾಡುತ್ತಿರುವ ಹಿರಿಯ ವಕೀಲ ಗೌರವ್ ಅಗರ್ವಾಲ್ ಅವರು ನ್ಯಾಯಾಲಯದ ಮುಂದೆ ಇಟ್ಟಿರುವ ಸಲಹೆಗಳನ್ನು ಆದೇಶದಲ್ಲಿ ಸೇರಿಸಲಾಗುವುದು. ಸಾರ್ವಜನಿಕರ ಓಡಾಟ ಹೆಚ್ಚಾಗಿರುವ ಈ ಪ್ರದೇಶಗಳಲ್ಲಿ ನಾಯಿಗಳಿಂದಾಗಬಹುದಾದ ತೊಂದರೆಗಳನ್ನು ಪರಿಗಣಿಸಿ ಈ ನಿರ್ದೇಶನ ನೀಡಲಾಗಿದೆ. ಈ ಆದೇಶದ ಅನ್ವಯ, ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಬೇಕಿದೆ ಎಂದು ಕೋರ್ಟ್ ಹೇಳಿದೆ.