ನವದೆಹಲಿ, ಜೂ. 11: ಮಧ್ಯಪ್ರದೇಶದಲ್ಲಿ (Madhya Pradesh) ನಡೆಯಲಿರುವ ರಾಜ್ಯಸಭಾ ಚುನಾವಣೆ ಪ್ರಕ್ರಿಯೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಆದರೆ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರ ತಿರಸ್ಕಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಶುಕ್ರವಾರ (ಜೂ. 12) ವಿಚಾರಣೆ ನಡೆಸಲು ಸ್ವೀಕರಿಸಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್ ಚಂದೂರ್ಕರ್ ಅವರ ಪೀಠವು ಚುನಾವಣಾ ಫಲಿತಾಂಶ ಘೋಷಣೆಯನ್ನು ತಡೆಯುವ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿತು. ಭಾರತ ಚುನಾವಣಾ ಆಯೋಗ vs ಅಶೋಕ್ ಕುಮಾರ್ (2000) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಕಾನೂನು ತೀರ್ಪು ಸ್ಪಷ್ಟವಾಗಿದೆ ಎಂದು ಪೀಠ ತಿಳಿಸಿತು. ಅದರ ಪ್ರಕಾರ, ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿಕ ನ್ಯಾಯಾಲಯಗಳು ಸಾಮಾನ್ಯವಾಗಿ ಅದರಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿತು.
ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭಾ ಚುನಾವಣಾ ನಾಮಪತ್ರ ತಿರಸ್ಕೃತವಾಗಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ತುರ್ತು ವಿಚಾರಣೆಯ ವೇಳೆ ಅವರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಜರಾಗಿ, ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನ ಮಧ್ಯಂತರ ಆದೇಶ ನೀಡುವಂತೆ ಕೋರಿದರು. ಇದನ್ನು ನಿರಾಕರಿಸಿದ ಸುಪ್ರೀಂ, ಅರ್ಜಿಯಲ್ಲಿರುವ ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿದ ನಂತರ ನಾಳೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುತ್ತೇವೆ ಎಂದು ತಿಳಿಸಿತು.
ಟಿಎಂಸಿಯ ಮೂರನೇ ವಿಕೆಟ್ ಪತನ; ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಪ್ರಕಾಶ್ ಬರೈಕ್
ಗುರುವಾರ (ಜೂ. 11) ರಾಜ್ಯಸಭೆ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದೆ. ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ಈಗಾಗಲೇ ತಿರಸ್ಕೃತವಾಗಿರುವುದರಿಂದ, ನಾಮಪತ್ರ ಹಿಂಪಡೆಯುವ ಗಡುವು ಮುಗಿದ ನಂತರ ಬಿಜೆಪಿ ಅಭ್ಯರ್ಥಿಗಳು ಯಾವುದೇ ಸ್ಪರ್ಧೆಯಿಲ್ಲದೆ ಆಯ್ಕೆಯಾದವರಾಗಿ ಘೋಷಣೆಯಾಗುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್ ಆತಂಕವಾಗಿದೆ. ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಮಾನ್ಯವಾಗದಿದ್ದರೆ ಬಿಜೆಪಿಗೆ ಎದುರಾಳಿಗಳೇ ಇರುವುದಿಲ್ಲ. ಮತದಾನ ನಡೆಸುವ ಅಗತ್ಯವಿಲ್ಲದೆ ಅವರನ್ನು ಅವಿರೋಧವಾಗಿ ಆಯ್ಕೆಯಾದವರಾಗಿ ಘೋಷಿಸಬಹುದು ಎಂಬುದು ಕಾಂಗ್ರೆಸ್ ವಾದ.
ಹೀಗಾಗಿ ಪಕ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ವಾದ-ವಿವಾದಗಳನ್ನು ಆಲಿಸಿದ ನಂತರ, ಚುನಾವಣಾ ವಿಷಯಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪವನ್ನು ನಿಯಂತ್ರಿಸುವ ಕಾನೂನು ನಿಲುವು ಇತ್ಯರ್ಥವಾಗಿದೆ ಎಂದು ಪೀಠ ಪುನರುಚ್ಚರಿಸಿತು. ಅಶೋಕ್ ಕುಮಾರ್ ಪ್ರಕರಣದಲ್ಲಿ ಕಾನೂನು ಇತ್ಯರ್ಥವಾಗಿದೆ. ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ, ನ್ಯಾಯಾಲಯಗಳು ಸಾಮಾನ್ಯವಾಗಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳಲ್ಲಿ ಒಂದಕ್ಕೆ ಕಾಂಗ್ರೆಸ್‌ನ ಏಕೈಕ ಅಭ್ಯರ್ಥಿಯಾಗಿರುವ ನಟರಾಜನ್, ಜೂನ್ 9 ರಂದು ಚುನಾವಣಾ ಅಧಿಕಾರಿ ಮತ್ತು ಮಧ್ಯಪ್ರದೇಶ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಶರ್ಮಾ ಅವರ ನಾಮಪತ್ರವನ್ನು ತಿರಸ್ಕರಿಸಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.