Supreme Court: ಜನಪ್ರಿಯತೆಯು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಗುರಾಣಿಯಲ್ಲ: ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು?
Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಅರೋಪಿಗಳಾದ ದರ್ಶನ್ ಮತ್ತು ಇತರ 6 ಮಂದಿಗೆ ನೀಡಿದ್ದ ಜಾಮೀನನ್ನು ದುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹಲವು ವಿಚಾರಗಳನ್ನು ಪ್ರಸ್ತಾವಿಸಿದ್ದು, ಜಾಮೀನು ರದ್ದು ಮಾಡಿದೆ.


ದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಡೆ ಇದ್ದ ನಟ ದರ್ಶನ್‌ಗೆ (Actor Darshan Thogudeepa) ಸುಪ್ರೀಂ ಕೋರ್ಟ್ (Supreme Court) ದೊಡ್ಡ ಶಾಕ್ ನೀಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿ ಆಗಸ್ಟ್ 14ರಂದು ಆದೇಶ ಹೊರಡಿಸಿದೆ. 2024 ಡಿಸೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ನ್ಯಾ. ಜೆ.ಬಿ. ಪರ್ದಿವಾಲಾ ಹಾಗೂ ನ್ಯಾ. ಆರ್. ಮಹದೇವನ್ ಅವರ ಪೀಠ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿದ್ದು, ದರ್ಶನ್ ಮತ್ತು ಗ್ಯಾಂಗ್‌ಗೆ ಮತ್ತೆ ತಲೆನೋವು ತಂದಿತ್ತಿದೆ.
ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ಬೆನ್ನಲ್ಲೇ ಬೆಂಗಳೂರಿನ ಹೊಸಕೆರೆ ಹಳ್ಳಿಯ ಅಪಾರ್ಟ್‌ಮೆಂಟ್‌ನಿಂದ ದರ್ಶನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಳಿಕ ಜೈಲಿಗೆ ಕಳುಹಿಸಲಾಗುತ್ತದೆ. ಸದ್ಯ ಈ ಪ್ರಕ್ರಿಯೆ ನಡೆಯುತ್ತಿದೆ. ಈ ಮಧ್ಯೆ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಎತ್ತಿದ ಪ್ರಶ್ನೆ ಗಮನ ಸೆಳೆದಿದೆ.
ಈ ಸುದ್ದಿಯನ್ನೂ ಓದಿ: Darshan Thoogudeepa: ಬಳ್ಳಾರಿ ಜೈಲಿಗೆ ಹೋಗಲಿದ್ದಾರಾ ದರ್ಶನ್? ʼದಾಸʼನ ಮುಂದಿನ ನಡೆ ಏನು?
ಸುಪ್ರೀಂ ಕೋರ್ಟ್ ಹೇಳಿದ್ದೇನು?
- ಜನಪ್ರಿಯತೆಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಗುರಾಣಿಯಾಗಲು ಸಾಧ್ಯವಿಲ್ಲ. ಜಾಮೀನು ನೀಡಲು ಪ್ರಭಾವ, ಸಂಪನ್ಮೂಲಗಳು ಮತ್ತು ಸಾಮಾಜಿಕ ಸ್ಥಾನಮಾನವು ಆಧಾರವಾಗುವುದಿಲ್ಲ.
- ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಲಾಗಿದೆ.
- ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ ಫೈವ್ ಸ್ಟಾರ್ ಟ್ರೀಟ್‌ಮೆಂಟ್ ನೀಡಲಾಗಿದೆ. ಜೈಲು ಸುಪರಿಂಟೆಂಡೆಂಟ್‌ನನ್ನು ಸಸ್ಪೆಂಡ್ ಮಾಡಬೇಕಿತ್ತು. ಇನ್ನು ಮುಂದೆ ರಾಜಾತಿಥ್ಯದ ಯಾವುದೇ ಫೋಟೊ ಕಂಡುಬಂದರೆ, ಆರೋಪಿ ಜೈಲಲ್ಲಿ ಕುಳಿತು ಸಿಗರೇಟ್ ಸೇದಿದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
- ಸೆಲೆಬ್ರಿಟಿಗಳು ಸಾಮಾಜಿಕವಾಗಿ ಮಾದರಿಗಳಾಗಿ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅವರು ತಮ್ಮ ಖ್ಯಾತಿಯಿಂದ ಸಾರ್ವಜನಿಕ ನಡವಳಿಕೆ ಮತ್ತು ಸಾಮಾಜಿಕ ಮೌಲ್ಯಗಳ ಮೇಲೆ ಗಣನೀಯ ಪ್ರಭಾವ ಬೀರುತ್ತಾರೆ.
- ಪಿತೂರಿ ಮತ್ತು ಕೊಲೆಯಂತಹ ಗಂಭೀರ ಆರೋಪಗಳಿದ್ದರೂ ಅಂತಹ ವ್ಯಕ್ತಿಗೆ ವಿನಾಯತಿ ನೀಡುವುದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುತ್ತದೆ.
- ದರ್ಶನ್ ಅವರ ಪೂರ್ವಾಪರಗಳು, ಪ್ರಭಾವ, ಜೈಲಿನಲ್ಲಿನ ದುರ್ವರ್ತನೆ ಮತ್ತು ಅವರ ವಿರುದ್ಧದ ಆರೋಪಗಳಿಂದ ಜಾಮೀನು ನೀಡಲು ಸಾಧ್ಯವಿಲ್ಲ.
- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಗೆ ತನ್ನ ಸ್ಥಾನಮಾನ ಕಾರಣದಿಂದಾಗಿ ಕಾನೂನು ಹೊಣೆಗಾರಿಕೆಯಿಂದ ವಿನಾಯಿತಿ ದೊರೆಯುವುದಿಲ್ಲ.
- ಸಂವಿಧಾನದ 14ನೇ ವಿಧಿಯು ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವುದನ್ನು ಖಾತರಿಪಡಿಸುತ್ತದೆ. ಜನಪ್ರಿಯತೆ, ಅಧಿಕಾರ ಅಥವಾ ಸವಲತ್ತುಗಳನ್ನು ಲೆಕ್ಕಿಸದೆ ಎಲ್ಲ ಪ್ರಜೆಗಳನ್ನು ಸಮಾನವಾಗಿ ಪರಿಗಣಿಸುತ್ತದೆ.
ʼʼದರ್ಶನ್ ಬೆನ್ನು ನೋವಿನ ನೆಪ ನೀಡಿ, ಅದಕ್ಕೆ ಸರ್ಜರಿ ಆಗಬೇಕು ಎಂಬ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಆದರೆ ಬೆನ್ನು ನೋವಿಗೆ ಯಾವುದೇ ಚಿಕಿತ್ಸೆ ಪಡೆದಿಲ್ಲ ಮಾತ್ರವಲ್ಲ ಸರ್ಜರಿಯನ್ನೂ ಮಾಡಿಸಿಕೊಂಡಿಲ್ಲ. ಇದರ ನಡುವೆ ವಿದೇಶಕ್ಕೆ ತೆರಳಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆʼʼ ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದ್ದರು.