ದಿಸ್‌ಪುರ, ಜ. 20: ದನವನ್ನು ಕದ್ದು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದ ಶಂಕೆಯಿಂದ ಗುಂಪೊಂದು ದಾಳಿ ನಡೆಸಿದ ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ (Assam) ಕೊಕ್ರಜಾರ್‌ನಲ್ಲಿ ಸೋಮವಾರ (ಜನವರಿ 19) ನಡೆದಿದೆ. ಮೃತಪಟ್ಟ ಹಾಗೂ ಗಾಯಗೊಂಡವರು ರಸ್ತೆ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ಕಾರ್ಮಿಕರು ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಕಾಮಗಾರಿಯ ಸ್ಥಳ ಪರಿಶೀಲನೆಯ ನಂತರ ಕಾರ್ಮಿಕರು ವಾಹನದಲ್ಲಿ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಾಹನವು ಗೌರಿ ನಗರ-ಮಾಶಿಂಗ್ ರಸ್ತೆಯನ್ನು ತಲುಪಿದಾಗ, ಸ್ಥಳೀಯರ ಗುಂಪೊಂದು ವಾಹನದಲ್ಲಿ ಇದ್ದವರು ದನಗಳ್ಳರು ಎಂದು ಶಂಕಿಸಿ ಹಲ್ಲೆ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯ ನಂತರ ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಉದ್ವಿಗ್ನ ಸ್ಥಿತಿ:
ಘಟನೆ ವಿವರ
ಜನರ ಗುಂಪು ಅಡ್ಡಗಟ್ಟಿದ್ದರಿಂದ ವಾಹನ ಅಪಘಾತಕ್ಕೀಡಾಯಿತು. ನಂತರ ಗುಂಪೊಂದು ದಾಳಿ ಮಾಡಿ ವಾಹನಕ್ಕೆ ಬೆಂಕಿ ಹಚ್ಚಿತು. ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಂಭೀರ ಗಾಯಗಳಿಂದ ಸಿಖ್ನಾ ಜ್ವ್ಲಾವ್ ಬಿಸ್ಮಿತ್ ಅಲಿಯಾಸ್ ರಾಜಾ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.
ಪ್ರಭಾತ್ ಬ್ರಹ್ಮ, ಜುಬಿರಾಜ್ ಬ್ರಹ್ಮ, ಸುನಿಲ್ ಮುರ್ಮು ಹಾಗೂ ಮಹೇಶ್ ಮುರ್ಮು ಎಂಬ ನಾಲ್ವರು ಗಂಭೀರ ಗಾಯಗೊಂಡಿದ್ದು, ಕೊಕ್ರಜಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯು ಪ್ರದೇಶದ ಕೆಲವು ಭಾಗಗಳಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಿತು. ಪ್ರದೇಶವು ಸಹಜ ಸ್ಥಿತಿಗೆ ಮರಳಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಬೆಂಗಳೂರು ಮೂಲದ ಮಹಿಳಾ ಇನ್ಫ್ಲುಯೆನ್ಸರ್‌ಗೆ ಹರಿಯಾಣದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ
ಮಂಗಳವಾರ (ಜನವರಿ 20) ಸ್ಥಳೀಯರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿ ಪ್ರಮುಖ ಹೆದ್ದಾರಿಯನ್ನು ತಡೆದು, ಮೃತ ವ್ಯಕ್ತಿಗೆ ನ್ಯಾಯ ಒದಗಿಸಬೇಕು ಮತ್ತು ಘಟನೆಗೆ ಕಾರಣರಾದವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಪ್ರಕರಣದಲ್ಲಿ ಇದುವರೆಗೆ ಹತ್ತೊಂಬತ್ತು ಜನರನ್ನು ಬಂಧಿಸಲಾಗಿದೆ.
ಹಾವೇರಿಯಲ್ಲಿ ಗಾಂಜಾ ಮಾರಾಟ; ಮೂವರು ಆರೋಪಿಗಳ ಬಂಧನ
ಹಾವೇರಿ- ಗುತ್ತಲ ರಸ್ತೆ ಬದಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹಾವೇರಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲಾ ಎಸ್‌ಪಿ ಯಶೋದಾ ವಂಟಗೋಡಿ ನಿರ್ದೇಶನದಂತೆ ಹಾವೇರಿ ಶಹರ ಠಾಣೆ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದೆ. ಆರೋಪಿಗಳಿಂದ 7935 ಗ್ರಾಂ ಅಂದರೆ ಅಂದಾಜು 3,17,400 ರೂ. ಮೌಲ್ಯದ ಗಾಂಜಾ ಜತೆಗೆ 3,370 ರುಪಾಯಿ ನಗದು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲೋಹಿತ ಕೃಷ್ಣಪ್ಪ ಮುನಿಯಪ್ಪನವರ (23), ಮಹೇಶ ಅಶೋಕ ಮೈಲಮ್ಮನವರ (23) ಹಾಗೂ ಮನೋಜ ಕರಿಯಪ್ಪ ಚಾರಿ (21) ಬಂಧಿತರು. ಆರೋಪಿಗಳಲ್ಲಿ ಇಬ್ಬರು ಪೇಂಟಿಂಗ್ ಕೆಲಸ ಮತ್ತೊಬ್ಬ ಕೂಲಿ ಕೆಲಸ ಮಾಡಿಕೊಂಡಿದ್ದರೆಂದು ತನಿಖೆಯಿಂದ ತಿಳಿದು ಬಂದಿದೆ.