ಕೋಲ್ಕತ್ತಾ, ಮೇ 6: ಬಿಜೆಪಿಯ ಜೈಂಟ್-ಸ್ಲೇಯರ್ ಎಂದು ಕರೆಯಲ್ಪಡುವ ಸುವೇಂದು ಅಧಿಕಾರಿ (Suvendu Adhikari) ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಅವರು ತಮ್ಮ ಮಾಜಿ ಮಾರ್ಗದರ್ಶಕಿ, 15 ವರ್ಷ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ (Mamatha Banerjee) ಅವರನ್ನು ಸೋಲಿಸಿದ್ದು ಈ ನಿರ್ಧಾರಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಇತ್ತೀಚಿನ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ನಂತರ ಸರ್ಕಾರ ರಚನೆ ಕುರಿತು ಚರ್ಚಿಸಲು ಶುಕ್ರವಾರ (ಮೇ 8) ಕೋಲ್ಕತ್ತಾದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಪಕ್ಷದ ರಾಜ್ಯ ಪ್ರಧಾನ ಕಚೇರಿಯು 207 ವಿಜೇತ ಅಭ್ಯರ್ಥಿಗಳಿಗೆ ಆತಿಥ್ಯ ವಹಿಸಲು ಸಾಧ್ಯವಾಗದ ಕಾರಣ ಸಭೆಗೆ ಪರ್ಯಾಯ ಸ್ಥಳವನ್ನು ಹುಡುಕಲಾಗುತ್ತಿದೆ ಎನ್ನಲಾಗಿದೆ.
ಈ ಸಭೆಯಲ್ಲಿ ಸುವೇಂದು ಅಧಿಕಾರಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಆಯ್ಕೆ ಕೈ ಎತ್ತುವ ಸರಳ ವಿಧಾನದಿಂದ ನಡೆಯಲಿದೆ ಎಂದು ಹೇಳಲಾಗಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅಧಿಕಾರಿಯ ಹೆಸರನ್ನು ಪ್ರಸ್ತಾಪಿಸಲಿದ್ದಾರೆ. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಸುವೇಂದು ಅಧಿಕಾರಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನಂತರ ಸುವೇಂದು ಅಧಿಕಾರಿ, ಭಟ್ಟಾಚಾರ್ಯ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ರಾಜಭವನಕ್ಕೆ ತೆರಳಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಹೀನಾಯ ಸೋಲಿನ ಬೆನ್ನಲ್ಲೇ ಟಿಎಂಸಿಯಿಂದ ಗೂಂಡಾಗಿರಿ; ಹಿಂಸಾಚಾರದಲ್ಲಿ ಮೂವರ ಸಾವು
ಪ್ರಮಾಣ ವಚನ ಸ್ವೀಕಾರ ಸಮಾರಂಭವು ಶನಿವಾರ (ಮೇ 9) ನಡೆಯಲಿದೆ ಎಂದು ಭಟ್ಟಾಚಾರ್ಯ ದೃಢಪಡಿಸಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನಾಚರಣೆಯಾದ ರವೀಂದ್ರ ಜಯಂತಿಯಂದೇ ವಚನ ಸ್ವೀಕಾರ ಸಮಾರಂಭ ನಡೆಯಲಿರುವುದು ವಿಶೇಷ.
ಪ್ರಧಾನಿ ಮೋದಿ ಭಾಗಿ
ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾತರಕ್ಕೆ ಬಂದಿದ್ದು, ಈ ಐತಿಹಾಸಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆಯಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಮತ್ತು ಮಿತ್ರ ಪಕ್ಷಗಳು ಸಹ ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಈ ಹಿಂದೆ, ಬಂಗಾಳದ ಮುಂದಿನ ಮುಖ್ಯಮಂತ್ರಿ ಮೂಲತಃ ಬಂಗಾಳಿಯಾಗಿರುತ್ತಾರೆ. ಅವರು ಬಂಗಾಳದಲ್ಲಿ ಜನಿಸಿ, ಬಂಗಾಳಿ ಮಾಧ್ಯಮದಲ್ಲಿ ಶಿಕ್ಷಣ ಪಡೆದು, ಬಂಗಾಳಿ ಭಾಷೆಯನ್ನು ಮಾತನಾಡುತ್ತಾರೆ ಎಂದು ಹೇಳಿದ್ದರು. ಅಧಿಕಾರಿ ಈ ಮಾನದಂಡಗಳಿಗೆ ಸರಿ ಹೊಂದುತ್ತಾರೆ.
ರಾಜ್ಯದಲ್ಲಿನ ತಳಮಟ್ಟದ ಸಂಪರ್ಕ ಮತ್ತು ಆಡಳಿತಾತ್ಮಕ ಅನುಭವಕ್ಕೆ ಹೆಸರುವಾಸಿಯಾದ ಅಧಿಕಾರಿ, ಈ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿಯಾಗಿದ್ದರು ಮತ್ತು ಮುಖ್ಯಮಂತ್ರಿ ಹುದ್ದೆಗೆ ಅತ್ಯಂತ ಪ್ರಮುಖ ಆಕಾಂಕ್ಷಿಯಾಗಿದ್ದರು.
ಮಮತಾ ಬ್ಯಾನರ್ಜಿಗೇ ಸೋಲುಣಿಸಿದ ನಾಯಕ
2021ರಲ್ಲಿ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ನಂದಿಗ್ರಾಮದಲ್ಲಿ ಸೋಲಿಸಿದ್ದರು. 2026ರ ಬಂಗಾಳ ಚುನಾವಣೆಯಲ್ಲಿ ಬ್ಯಾನರ್ಜಿ ಅವರ ಭವಾನಿಪುರ ಭದ್ರಕೋಟೆಯನ್ನು ಹೆಚ್ಚಿನ ಅಂತರದಿಂದ ವಶಪಡಿಸಿಕೊಂಡರು.