ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟಿಎಂಸಿ ಭದ್ರ ಕೋಟೆಯಲ್ಲೇ ಮಮತಾ ಬ್ಯಾನರ್ಜಿ ಮಣಿಸಿದ ಬಿಜೆಪಿಯ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ

Suvendu Adhikari: ಸತತ 15 ವರ್ಷಗಳ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಬ್ರೇಕ್‌ ಹಾಕಿ ಇದೇ ಮೊದಲ ಬಾರಿ ಪಶ್ಚಿಮ ಬಂಗಾಳದಲಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಟಿಎಂಸಿಯ ಭದ್ರಕೋಟೆ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ ಸುವೇಂದು ಅಧಿಕಾರಿಗೆ ಇದೀಗ ಬಿಜೆಪಿ ಮುಖ್ಯಮಂತ್ರಿ ಪಟ್ಟ ನೀಡಿದೆ.

ಸುವೇಂದು ಅಧಿಕಾರಿ (ಸಂಗ್ರಹ ಚಿತ್ರ)

ಕೋಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬರೋಬ್ಬರಿ 207 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಟಿಎಂಸಿಯ 15 ವರ್ಷಗಳ ಆಡಳಿತಕ್ಕೆ ಬ್ರೇಕ್‌ ಹಾಕಿದೆ. ಇದೀಗ ಬಿಜೆಪಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯನ್ನು ಘೋಷಿಸಿದೆ. ಭವಾನಿಪುರದಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಸೋಲಿಸಿದ ಸುವೇಂದು ಅಧಿಕಾರಿಗೆ (Suvendu Adhikari) ಸಿಎಂ ಪಟ್ಟ ಕಟ್ಟಲಾಗಿದೆ. ಶನಿವಾರ (ಮೇ 9) ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಕೋಲ್ಕತ್ತಾದಲ್ಲಿ ಅಮಿತ್‌ ಶಾ ನಾಯಕತ್ವದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸುವೇಂದು ಅಧಿಕಾರಿ ಅವರನ್ನು ಘೋಷಿಸಲಾಯಿತು. ಸಿಎಂ ರೇಸ್‌ನಲ್ಲಿ ಸುವೇಂದು ಅಧಿಕಾರಿ ಜತೆಗೆ ಬಿಜೆಪಿ ನಾಯಕಿಯರಾದ ಅಗ್ನಿಮಿತ್ರ ಪಾಲ್ ಮತ್ತು ರೂಪಾ ಗಂಗೂಲಿ, ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ, ದಿಲೀಪ್‌ ಘೋಷ್‌ ಇದ್ದರು. ಅಂತಿಮವಾಗಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆಯಾದರು.

ಸುವೇಂದು ಅದಿಕಾರಿಗೆ ಸಿಎಂ ಪಟ್ಟ:



ರವೀಂದ್ರನಾಥ ಟ್ಯಾಗೋರ್ ಜನ್ಮದಿನದಂದೇ ಸರ್ಕಾರ ರಚನೆ

ಮೇ 9 ಪಶ್ಚಿಮ ಬಂಗಾಳದ ಸಾಹಿತಿ, ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನ. ಈ ವಿಶೇಷ ದಿನಂದೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಈ ದಿನಾಂಕವನ್ನು ರಾಜ್ಯದಲ್ಲಿ ಹೊಸ ಆರಂಭವನ್ನು ಗುರುತಿಸಲು ಪರಿಗಣಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ವಿಶೇಷ ಸ್ಥಾನವಿದೆ. ಹೀಗಾಗಿ ಅವರ ಜನ್ಮದಿನದಂದೇ ಪರಮಾಣ ವಚನ ಸ್ವೀಕಾರ ಸಮಾರಂಭ ನಡೆಸುವುದಾಗಿ ಬಿಜೆಪಿ ಈ ಹಿಂದೆಯೇ ತಿಳಿಸಿತ್ತು. ಸುವೇಂದು ಅಧಿಕಾರಿ ಜತೆ ಎಷ್ಟು ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

ರಾಜಕೀಯ ಗುರು ಮಮತಾ ಬ್ಯಾನರ್ಜಿ ವಿರುದ್ಧವೇ ತೊಡೆ ತಟ್ಟಿದ ಸುವೇಂದು ಅಧಿಕಾರಿ; ಹೋರಾಟದ ಹಾದಿ ಹೇಗಿತ್ತು?

ಕೆಲವೇ ಹೊತ್ತಲ್ಲಿ ಬಿಜೆಪಿ ನಾಯಕರು ಲೋಕ ಭವನಕ್ಕೆ ತೆರಳಿ ಸರ್ಕಾರ ರಚಿಸುವ ಬಗ್ಗೆ ಹಕ್ಕು ಮಂಡಿಸಲಿದ್ದಾರೆ. ಸೋತಿದ್ದರೂ ರಾಜೀನಾಮೆ ನೀಡಲ್ಲ ಎಂದು ಪಟ್ಟು ಹಿಡಿದಿದ್ದ ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗವಾಗಿದ್ದು, ಮೇ 7ರಂದು ರಾಜ್ಯಪಾಲ ಆರ್‌.ಎನ್‌. ರವಿ ಪಶ್ಚಿಮ ಬಂಗಾಳ ಸರ್ಕಾರವನ್ನು ವಿಸರ್ಜಿಸಿದ್ದಾರೆ.

ಸುವೇಂದು ಅಧಿಕಾರಿ ಹಿನ್ನೆಲೆ

ವಿಶೇಷ ಎಂದರೆ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಭದ್ರಕೋಟೆ ಕುಸಿಯುವಂತೆ ಮಾಡಿದ ಸುವೇಂದು ಅಧಿಕಾರಿ ಈ ಹಿಂದೆ ಮಮತಾ ಬ್ಯಾನರ್ಜಿ ಅವರ ಟಿಎಂಸಿಯಲ್ಲಿದ್ದರು. ಮಮತಾ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. 2020ರ ಡಿಸೆಂಬರ್‌ನಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ, ಈಗ ಬಿಜೆಪಿಯಲ್ಲಿ ಪ್ರಭಾವಿ ಮತ್ತು ಪ್ರಬಲ ನಾಯಕನಾಗಿ ಬೆಳೆದಿದ್ದಾರೆ.

1970ರಲ್ಲಿ ರಾಜಕೀಯ ಕುಟುಂಬದಲ್ಲಿ ಜನಿಸಿದ ಸುವೇಂದು ಅಧಿಕಾರಿ ಸ್ನಾತಕೋತ್ತರ ಪದವೀಧರರು. ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಸುವೇಂದು ಅವರ ತಂದೆ ಶಿಶಿರ್‌ ಅಧಿಕಾರಿ ಕಾಂಗ್ರೆಸ್‌ನ ನಾಯಕರಾಗಿದ್ದರು. ಹಿಂದಿನಿಂದಲೂ ಹೋರಾಟದ ಹಾದಿಯಲ್ಲಿ ನಡೆಯುತ್ತಿದ್ದ ಸುವೇಂದು ಅಧಿಕಾರಿ ಇದೀಗ ಸಿಎಂ ಪಟ್ಟಕ್ಕೇರಿದ್ದು, ರಾಜ್ಯದ ಚಿತ್ರಣವನ್ನು ಹೇಗೆ ಬದಲಾಯಿಸಲಿದ್ದಾರೆ ಎನ್ನುವುದನನು ಕಾದು ನೋಡಬೇಕಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author