ಚೆನ್ನೈ, ಮೇ 21: ತಮಿಳುನಾಡು ರಾಜಕೀಯದಲ್ಲಿ (Tamil Nadu Politics) ಕಾಂಗ್ರೆಸ್‌ಗೆ ಐತಿಹಾಸಿಕ ದಿನ. 60 ವರ್ಷಗಳ ನಂತರ ಪಕ್ಷದ ನಾಯಕರೊಬ್ಬರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 1967ರ ನಂತರ ಮೊದಲ ಬಾರಿಗೆ ಕಾಂಗ್ರೆಸ್ (Congress), ತಮಿಳುನಾಡು ಸರ್ಕಾರದ ಭಾಗವಾಗಿದೆ. ಆದರೆ ಕಾಂಗ್ರೆಸ್ ಶಾಸಕ ಎಸ್. ರಾಜೇಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ವಿವಾದ ಉಂಟಾಯಿತು. ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸುತ್ತಿದ್ದ ರಾಜ್ಯಪಾಲ (Governor) ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ರಾಜೇಶ್ ಅವರಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಕಿಳ್ಳಿಯೂರು ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಶಾಸಕ ಎಸ್. ರಾಜೇಶ್, ವಿಜಯ್ ನೇತೃತ್ವದ ಟಿವಿಕೆ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಇಬ್ಬರು ಕಾಂಗ್ರೆಸ್ ನಾಯಕರಲ್ಲಿ ಇವರು ಒಬ್ಬರು. ಕುಮಾರ್ ತಮ್ಮ ಪ್ರಮಾಣವಚನವನ್ನು ಮುಗಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರಾದ ಕಾಮರಾಜ್, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಶ್ಲಾಘಿಸಿದರು. ಇದಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದರು.
ಇಲ್ಲಿದೆ ವಿಡಿಯೊ:
ಕಾಂಗ್ರೆಸ್ ನಾಯಕರ ಹೆಸರುಗಳನ್ನು ಪ್ರಮಾಣ ವಚನದ ವೇಳೆ ಹೇಳುವುದು ತರವಲ್ಲ ಎಂದು ರಾಜ್ಯಪಾಲರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಈ ವೇಳೆ ಮುಗುಳ್ನಗುತ್ತಾ ಎಸ್ ರಾಜೇಶ್ ಕುಮಾರ್ ತಮ್ಮ ಪ್ರಮಾಣವಚನ ದಾಖಲೆಗೆ ಸಹಿ ಹಾಕಲು ಮುಂದಾದರು.
ತಮಿಳುನಾಡು ಸಿಎಂ ವಿಜಯ್ ಕೊಠಡಿಯೊಳಗೆ ವಿಡಿಯೊ ಚಿತ್ರೀಕರಣ: ಹುಟ್ಟಿಕೊಳ್ತು ಹೊಸ ವಿವಾದ
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎಸ್. ರಾಜೇಶ್ ಕುಮಾರ್ ಅವರು, ಕಾಮರಾಜ್ (ತಮಿಳುನಾಡಿನ ದಿವಂಗತ ಕಾಂಗ್ರೆಸ್ ಹಿರಿಯ) ಅವರ ಹೆಸರು ಚಿರಾಯುವಾಗಲಿ, ಭಾರತ ರತ್ನ ರಾಜೀವ್ ಗಾಂಧಿ (ಮಾಜಿ ಪ್ರಧಾನಿ) ಮತ್ತು ಜನನಾಯಕ ರಾಹುಲ್ ಗಾಂಧಿ ಚಿರಾಯುವಾಗಲಿ ಎಂದು ಹೇಳಿದ್ದಾರೆ.
ವಿಜಯ್ ನೇತೃತ್ವದ ಪಕ್ಷವು ಫಲಿತಾಂಶಗಳಲ್ಲಿ ಬಹುಮತದ ಕೊರತೆಯನ್ನು ಅನುಭವಿಸಿದ ನಂತರ ತಮಿಳುನಾಡು ವಿಧಾನಸಭೆಯಲ್ಲಿ ಐದು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಕೂಡಲೇ ಟಿವಿಕೆಗೆ ಬೆಂಬಲ ಘೋಷಿಸಿತ್ತು. ಈ ಮೂಲಕ ದೀರ್ಘಕಾಲದ ಮಿತ್ರ ಪಕ್ಷ ಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತು. ಕಾಂಗ್ರೆಸ್ 20 ವರ್ಷಗಳ ಕಾಲ ಡಿಎಂಕೆ ಮಿತ್ರ ಪಕ್ಷವಾಗಿದ್ದರೂ, ಆ ಸರ್ಕಾರದಲ್ಲಿ ಎಂದಿಗೂ ಸಚಿವ ಸ್ಥಾನ ದೊರೆತಿರಲಿಲ್ಲ.
ಮೇ 10 ರಂದು ಒಂಬತ್ತು ಸಚಿವರೊಂದಿಗೆ ಜೋಸೆಫ್ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗುರುವಾರ (ಮೇ 21) ಅವರು 21 ಟಿವಿಕೆ ಶಾಸಕರು ಮತ್ತು ಇಬ್ಬರು ಕಾಂಗ್ರೆಸ್ ಶಾಸಕರನ್ನು ಸೇರಿಸಿಕೊಂಡು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದರು.