ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪರಂದೂರು ವಿಮಾನ ನಿಲ್ದಾಣ ಯೋಜನೆ ಕೈಬಿಟ್ಟ ತಮಿಳುನಾಡು ಸರ್ಕಾರ: ಪ್ರತಿಭಟನಾಕಾರರ ಜತೆ ನಿಲ್ಲುವುದಾಗಿ ಸಿಎಂ ವಿಜಯ್ ಘೋಷಣೆ

Airport project dropped: ಪರಂದೂರು ವಿಮಾನ ನಿಲ್ದಾಣ ಯೋಜನೆಯನ್ನು ತಮಿಳುನಾಡು ಸರ್ಕಾರ ಕೈಬಿಟ್ಟಿದ್ದು, ಪ್ರತಿಭಟನಾಕಾರರ ಜತೆ ನಿಲ್ಲುತ್ತೇನೆ ಎಂದು ಮುಖ್ಯಮಂತ್ರಿ ವಿಜಯ್ ಹೇಳಿದ್ದಾರೆ. 2024ರ ಅಕ್ಟೋಬರ್‌ನಲ್ಲಿ ವಿಕ್ರವಾಂಡಿಯಲ್ಲಿ ನಡೆದ ಸಭೆಯೊಂದರಲ್ಲಿ ತಾವು ಈ ಯೋಜನೆಯನ್ನು ವಿರೋಧಿಸಿದ್ದ ಕ್ರಮವನ್ನು ವಿಜಯ್ ನೆನಪಿಸಿಕೊಂಡರು.

ತಮಿಳುನಾಡು ಸಿಎಂ ವಿಜಯ್ (ಸಂಗ್ರಹ ಚಿತ್ರ)

ಚೆನ್ನೈ, ಆ. 24: ತಮಿಳುನಾಡು ರಾಜಧಾನಿ ಚೆನ್ನೈ (Chennai) ಬಳಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ತಮಿಳುನಾಡಿನ ಟಿವಿಕೆ (TVK) ಸರ್ಕಾರ ಕೈ ಬಿಟ್ಟಿದೆ. ಈ ನಿರ್ಧಾರ ಇದೀಗ ತಮಿಳುನಾಡಿನ ಆಡಳಿತಾರೂಢ ಟಿವಿಕೆ ಮತ್ತು ವಿರೋಧ ಪಕ್ಷ ಡಿಎಂಕೆ (DMK) ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಪರಂದೂರು ವಿಮಾನ ನಿಲ್ದಾಣ ಯೋಜನೆಯನ್ನು ಸರ್ಕಾರ ಕೈಬಿಟ್ಟಿದ್ದು, ಪ್ರತಿಭಟನಾಕಾರರ ಜತೆ ನಿಲ್ಲುವುದಾಗಿ ಎಂದು ಸಿಎಂ ವಿಜಯ್ (Vijay) ಹೇಳಿದ್ದಾರೆ.

ರಾಜ್ಯದ ರಾಜಧಾನಿಯಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಪರಂದೂರಿನಲ್ಲಿ ಪರಿಸರ ಕಾಳಜಿ ಮತ್ತು ಬಹು-ಬೆಳೆ ಕೃಷಿ ಭೂಮಿಗೆ ಎದುರಾಗುವ ಅಪಾಯವನ್ನು ಉಲ್ಲೇಖಿಸಿ ವಿಮಾನ ನಿಲ್ದಾಣ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರ ಪರವಾಗಿ ನಿಲ್ಲುವುದಾಗಿ ಟಿವಿಕೆ ಹಾಗೂ ಪಕ್ಷದ ಮುಖ್ಯಸ್ಥ ಮತ್ತು ಸಿಎಂ ವಿಜಯ್ ಇದೀಗ ಹೇಳಿದ್ದಾರೆ.

ಪರಂದೂರು ವಿಮಾನ ನಿಲ್ದಾಣ ಯೋಜನೆ ಕೈ ಬಿಟ್ಟ ಸಿಎಂ ವಿಜಯ್‌:



ಚುನಾವಣೆಗೂ ಮುನ್ನ ವಿಜಯ್‌ ಡಿಎಂಕೆಯ ಈ ಯೋಜನೆ ವಿರುದ್ಧ ತೀವ್ರ ಪ್ರಚಾರ ಮಾಡಿದ್ದರು. “ನಾವು ಪರಂದೂರು ವಿಮಾನ ನಿಲ್ದಾಣವನ್ನು ಕೈಬಿಡುತ್ತಿದ್ದೇವೆ. ಪ್ರಸ್ತಾವಿತ ವಿಮಾನ ನಿಲ್ದಾಣದ ವಿರುದ್ಧ ಪ್ರತಿಭಟನಾಕಾರರ ಜತೆ ನಾನು ದೃಢವಾಗಿ ನಿಲ್ಲುತ್ತೇನೆ” ಎಂದು ವಿಜಯ್ ಹೇಳಿದ್ದಾರೆ.

ಅಮಿತ್ ಶಾ ಬಳಿ ಮೇಕೆದಾಟು ಯೋಜನೆ ಪ್ರಸ್ತಾವಿಸಿದ ಡಿ.ಕೆ. ಶಿವಕುಮಾರ್: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮೌನಕ್ಕೆ ಡಿಎಂಕೆ ತರಾಟೆ

2024ರ ಅಕ್ಟೋಬರ್‌ನಲ್ಲಿ ವಿಕ್ರವಾಂಡಿಯಲ್ಲಿ ನಡೆದ ಸಭೆಯೊಂದರಲ್ಲಿ ತಾವು ಈ ಯೋಜನೆಯನ್ನು ವಿರೋಧಿಸಿದ್ದ ಕ್ರಮವನ್ನು ವಿಜಯ್ ನೆನಪಿಸಿಕೊಂಡರು. ಕೈಗಾರಿಕಾ ಅಭಿವೃದ್ಧಿಗೆ ವಿಮಾನ ನಿಲ್ದಾಣಗಳು ಅಗತ್ಯ ಎಂಬುದನ್ನು ಒಪ್ಪಿಕೊಂಡಿದ್ದ ಅವರು, ರೈತರ ಕಲ್ಯಾಣವನ್ನು ಬಲಿಗೊಟ್ಟು ಅವುಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು.

“ಆ ದಿನ ನಾನು ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು, ಪರಂದೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ವಿಮಾನ ನಿಲ್ದಾಣ ಯೋಜನೆಯನನು ಕೈ ಬಿಡುತ್ತಿದ್ದೇವೆ” ಎಂದು ವಿಜಯ್ ಹೇಳಿದ್ದಾರೆ. ಕಾಂಚೀಪುರಂ ಜಿಲ್ಲೆಯ ವ್ಯಾಪ್ತಿಗೆ ಬರುವ ಪರಂದೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ನಾಗರಿಕ ವಿಮಾನಯಾನ ಸಚಿವಾಲಯವು 2025ರ ಏಪ್ರಿಲ್‌ನಲ್ಲಿ ಅನುಮತಿ ನೀಡಿತ್ತು.

ಡಿಎಂಕೆ ತಿರುಗೇಟು

ಡಿಎಂಕೆ ಅಧಿಕಾರಾವಧಿಯಲ್ಲಿ ಪ್ರಾರಂಭಿಸಲಾಗಿದ್ದ ಈ ಉದ್ದೇಶಿತ ವಿಮಾನ ನಿಲ್ದಾಣ ಯೋಜನೆಯ ಬಗ್ಗೆ ಅನುಮಾನಗಳನ್ನು ಸೃಷ್ಟಿಸುವ ಬದಲು ನಮ್ಮ ದಾಖಲೆಗಳನ್ನು ತೆರೆದು ನೋಡಿ ಎಂದು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ವಿಜಯ್ ಅವರಿಗೆ ಸವಾಲು ಹಾಕಿದೆ. ಇದರಿಂದ ಈ ರಾಜಕೀಯ ಸಂಘರ್ಷ ಇನ್ನೂ ಕೊನೆಗೊಂಡಿಲ್ಲ ಎನ್ನುವುದು ಸಾಬೀತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಬಿಪ್ರಾಯ ಪಟ್ಟಿದ್ದಾರೆ.

ʼʼಮುಖ್ಯಮಂತ್ರಿ ಒಂದು ವೇಳೆ ನಮ್ಮ ಫೈಲ್‌ಗಳನ್ನು ತೆರೆಯದಿದ್ದರೆ, ನಾವು ಅವರ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸುತ್ತೇವೆʼʼ ಎಂದು ಡಿಎಂಕೆ ನಾಯಕ ದುರೈಮುರುಗನ್ ತಿಳಿಸಿದ್ದಾರೆ. ʼʼನಾವು ಅವರಿಗೆ ಫೈಲ್‌ಗಳನ್ನು ತೆರೆಯಲು ಅನುಮತಿ ನೀಡುತ್ತಿದ್ದೇವೆ. ಅವರು ಒಂದು ವಾರದೊಳಗೆ ಆ ಕೆಲಸ ಮಾಡದಿದ್ದರೆ, ಮುಖ್ಯಮಂತ್ರಿ ವಿಧಾನಸಭೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ವಿರೋಧ ಪಕ್ಷವು ಹಕ್ಕುಚ್ಯುತಿ ನಿರ್ಣಯ ಮಂಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆʼʼ ಎಂದು ಕೈ ಅವರು ಹೇಳಿದ್ದಾರೆ.