ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Tamil Nadu Prison Break: ಸಂಜೆ ಸಂಚು, ರಾತ್ರಿ ಪರಾರಿ! ಅಪಸ್ಮಾರದ ನಾಟಕವಾಡಿ ಜೈಲಿನಿಂದ ತಪ್ಪಿಸಿಕೊಂಡ 17 ಕೈದಿಗಳ ಪ್ಲ್ಯಾನ್‌ ರಿವೀಲ್‌

ತಮಿಳುನಾಡಿನ ಥೇಣಿ ಜಿಲ್ಲೆಯ ಉಪಕಾರಾಗೃಹದಿಂದ 17 ವಿಚಾರಣಾಧೀನ ಕೈದಿಗಳು ಪರಾರಿಯಾಗಲು ಕೆಲವೇ ಗಂಟೆಗಳಲ್ಲಿ ಸಂಚು ರೂಪಿಸಿದ್ದರು ಎನ್ನಲಾಗಿದೆ. 26 ವರ್ಷದ ಲಿಂಗ ಪ್ರಸಾದ್ ಯೋಜನೆಯನ್ನು ಸೂಚಿಸಿದ್ದು, ಮುತ್ತು ಎಳಂಗೋವನ್ ಅಪಸ್ಮಾರ ಬಂದಂತೆ ನಾಟಕವಾಡಿದ್ದಾನೆ. ಆತನ ನೆರವಿಗೆ ಜೈಲು ಸಿಬ್ಬಂದಿ ಧಾವಿಸಿದಾಗ, ಇತರ ಕೈದಿಗಳು ಗೊಂದಲ ಸೃಷ್ಟಿಸಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಕೀಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಎಲ್ಲ 17 ಕೈದಿಗಳನ್ನು 48 ಗಂಟೆಗಳೊಳಗೆ ಬಂಧಿಸಲಾಗಿದ್ದು, ಕರ್ತವ್ಯ ಲೋಪದ ಆರೋಪದಡಿ ಒಂಬತ್ತು ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ತಮಿಳುನಾಡು ಜೈಲಿನಿಂದ ಪರಾರಿಯಾದ ಕೈದಿಗಳು

ಚೆನ್ನೈ, ಅ. 29: ತಮಿಳುನಾಡಿನ ಥೇಣಿ ಜಿಲ್ಲೆಯ ಉಪಕಾರಾಗೃಹದಿಂದ 17 ವಿಚಾರಣಾಧೀನ ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಬಹಿರಂಗವಾಗಿದೆ (Tamil Nadu Prison Break). ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರಿಂದ ಆಕ್ರೋಶಗೊಂಡಿದ್ದ ಕೆಲವು ಕೈದಿಗಳು, ವೈದ್ಯಕೀಯ ತುರ್ತು ಪರಿಸ್ಥಿತಿಯ ನಾಟಕವಾಡಿ ಜೈಲಿನಿಂದ ತಪ್ಪಿಸಿಕೊಳ್ಳುವ ಯೋಜನೆ ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ತನಿಖೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮವಾರ (ಅಕ್ಟೋಬರ್‌ 26) ಸಂಜೆ ಸುಮಾರು 7 ಗಂಟೆಗೆ ಪರಾರಿಯಾಗುವ ಯೋಜನೆ ರೂಪುಗೊಂಡಿದ್ದು, ರಾತ್ರಿ 10 ಗಂಟೆಯ ವೇಳೆಗೆ ಅದನ್ನು ಕಾರ್ಯರೂಪಕ್ಕೆ ತರಲಾಗಿದೆ. ಮಧುರೈ ಮೂಲದ 26 ವರ್ಷದ ಲಿಂಗ ಪ್ರಸಾದ್ ಈ ಯೋಜನೆಯ ಪ್ರಮುಖ ರೂವಾರಿ ಎನ್ನಲಾಗಿದೆ.

ದರೋಡೆ ಪ್ರಕರಣಗಳನ್ನು ಎದುರಿಸುತ್ತಿರುವ ಮತ್ತೊಬ್ಬ 26 ವರ್ಷದ ಕೈದಿ ಮುತ್ತು ಎಳಂಗೋವನ್ ಅಪಸ್ಮಾರ (ಎಪಿಲೆಪ್ಸಿ) ಬಂದಂತೆ ನಟಿಸಿದ್ದಾನೆ. ಇದನ್ನು ನಿಜವಾದ ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಭಾವಿಸಿದ ಜೈಲು ಸಿಬ್ಬಂದಿ ಆತನ ನೆರವಿಗೆ ಧಾವಿಸಿದ್ದಾರೆ.

ಗೊಂದಲ ಸೃಷ್ಟಿಸಿ ಸಿಬ್ಬಂದಿಯ ಮೇಲೆ ಹಲ್ಲೆ!

ಈ ಸಂದರ್ಭದಲ್ಲಿ ಇತರ ಕೈದಿಗಳು ಕೂಗಾಟ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ. ಬಳಿಕ ತಮ್ಮ ಬ್ಲಾಕ್‌ನಿಂದ ಹೊರಬಂದ ಕೈದಿಗಳು, ಅಡುಗೆಮನೆಯ ಉಪಕರಣಗಳನ್ನು ಬಳಸಿ ಜೈಲು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರವೇಶದ್ವಾರದ ಬಳಿ ಇದ್ದ ಇತರ ಸಿಬ್ಬಂದಿಯನ್ನೂ ನಿಯಂತ್ರಣಕ್ಕೆ ತೆಗೆದುಕೊಂಡು, ಅವರಿಂದ ಕೀಗಳನ್ನು ಕಸಿದುಕೊಂಡು ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಹಲ್ಲೆಯ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕ್ಯಾಪ್ಟನ್ ಸ್ಮಿತ್ ಮಚ್ಚಾರ್

ಜಾಮೀನು ನಿರಾಕರಣೆಯೇ ಸಂಚಿಗೆ ಕಾರಣ?

ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯೇಂದ್ರ ಬಿಡಾರಿ ಎನ್‌ಡಿಟಿವಿಗೆ ನೀಡಿದ ಮಾಹಿತಿ ಪ್ರಕಾರ, ಕೈದಿಗಳ ವಿಚಾರಣೆಯಲ್ಲಿ ಈ ಯೋಜನೆಯು ಅದೇ ದಿನ ಸಂಜೆ ರೂಪುಗೊಂಡು ತಕ್ಷಣವೇ ಜಾರಿಯಾಗಿರುವ ಸಾಧ್ಯತೆ ಇದೆ. ಜಾಮೀನು ರದ್ದಾದ ಅಥವಾ ಜಾಮೀನು ದೊರೆಯದ ವಿಚಾರವಾಗಿ ಕೆಲವು ಕೈದಿಗಳು ಚರ್ಚಿಸುತ್ತಿದ್ದಾಗ ಲಿಂಗ ಪ್ರಸಾದ್ ಪರಾರಿಯಾಗುವ ಆಲೋಚನೆಯನ್ನು ಮುಂದಿಟ್ಟಿದ್ದಾನೆ ಎನ್ನಲಾಗಿದೆ.

ಜೈಲಿನ ಒಂದು ಬ್ಲಾಕ್‌ನಲ್ಲಿ ಒಟ್ಟು 32 ವಿಚಾರಣಾಧೀನ ಕೈದಿಗಳಿದ್ದರು. ಅವರಲ್ಲಿ 17 ಮಂದಿ ಪರಾರಿಯಾಗಿದ್ದು, ಉಳಿದ ಕೈದಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ.

48 ಗಂಟೆಗಳಲ್ಲಿ ಎಲ್ಲ 17 ಕೈದಿಗಳ ಬಂಧನ

ಪರಾರಿಯಾಗಿದ್ದ ಎಲ್ಲ 17 ಕೈದಿಗಳನ್ನು 48 ಗಂಟೆಗಳೊಳಗೆ ಬಂಧಿಸಲಾಗಿದೆ. ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ 9 ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇದೇ ವೇಳೆ, ತಮಿಳುನಾಡಿನ ಕಾರಾಗೃಹ ಇಲಾಖೆಯು ರಾಜ್ಯದಾದ್ಯಂತ ಜೈಲುಗಳ ಭದ್ರತಾ ಪರಿಶೀಲನೆಗೆ ಮುಂದಾಗಿದೆ. ಈ ತಿಂಗಳ ಅಂತ್ಯದೊಳಗೆ ಭದ್ರತಾ ಲೋಪಗಳನ್ನು ಗುರುತಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿರುವ ಕಾವಲು ಗೋಪುರಗಳಿಗೆ ಶಸ್ತ್ರಸಜ್ಜಿತ ಭದ್ರತೆ ಒದಗಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.

ಜೈಲಿನಿಂದ ಪರಾರಿಯಾಗಲು ದೀರ್ಘಕಾಲದ ಯೋಜನೆ ರೂಪಿಸಲಾಗಿತ್ತೇ ಅಥವಾ ಅಂದಿನ ಪರಿಸ್ಥಿತಿಯಲ್ಲಿ ತಕ್ಷಣವೇ ಸಂಚು ರೂಪಿಸಲಾಯಿತೇ ಎಂಬುದರ ಕುರಿತು ತನಿಖಾಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.