ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rupee Symbol: ರಾಷ್ಟ್ರೀಯ ಕರೆನ್ಸಿ ಚಿಹ್ನೆ ₹ ಬದಲಾಯಿಸಿದ ತಮಿಳುನಾಡು ಸರ್ಕಾರ; ಕೇಂದ್ರದ ವಿರುದ್ಧ ಮುಂದುವರಿದ ಭಾಷಾ ಸಮರ

Rupee Symbol: ತಮಿಳುನಾಡು ಸರ್ಕಾರ ಶುಕ್ರವಾರ (ಮಾ. 14) ಮಂಡನೆಯಾಗಲಿರುವ 2025ರ ಬಜೆಟ್‌ನಿಂದ ಅಧಿಕೃತ ರೂಪಾಯಿ ಚಿಹ್ನೆಯನ್ನು (₹) ತೆಗೆದು ಹಾಕಲು ನಿರ್ಧರಿಸಿದೆ. ಅದರ ಬದಲಿಗೆ ತಮಿಳು ಲಿಪಿಯನ್ನು ಅಳವಡಿಸಿಕೊಳ್ಳಲಿದೆ. ಸದ್ಯ ಈ ಬಗ್ಗೆ ಚರ್ಚೆ ಅರಂಭವಾಗಿದೆ.

ಕರೆನ್ಸಿ ಚಿಹ್ನೆ ₹ ಬದಲಾಯಿಸಿದ ತಮಿಳುನಾಡು ಸರ್ಕಾರ

ಎಂ.ಕೆ.ಸ್ಟಾಲಿನ್‌.

Profile Ramesh B Mar 13, 2025 3:36 PM

ಚೆನ್ನೈ: ತಮಿಳುನಾಡಿನಲ್ಲಿ ಭಾಷಾ ವಿವಾದ ಭುಗಿಲೆದ್ದಿದ್ದು, ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ನೇತೃತ್ವದ ಡಿಎಂಕೆ (DMK) ಸರ್ಕಾರ ಸಮರ ಸಾರಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ತಮಿಳುನಾಡು ಸರ್ಕಾರ ಶುಕ್ರವಾರ (ಮಾ. 14) ಮಂಡನೆಯಾಗಲಿರುವ 2025ರ ಬಜೆಟ್‌ನಿಂದ ಅಧಿಕೃತ ರೂಪಾಯಿ ಚಿಹ್ನೆಯನ್ನು (₹) ತೆಗೆದು ಹಾಕಲು ನಿರ್ಧರಿಸಿದೆ. ಅದರ ಬದಲಿಗೆ ತಮಿಳು ಲಿಪಿಯನ್ನು ಅಳವಡಿಸಿಕೊಳ್ಳಲಿದೆ (Rupee Symbol). ಗುರುವಾರ ಬಜೆಟ್‌ನ ಹೊಸ ಲೋಗೋವನ್ನು ರಿಲೀಸ್‌ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (National Education Policy-NEP)ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸರ್ಕಾರ ಕರೆನ್ಸಿ ಚಿಹ್ನೆಯನ್ನು ಬದಲಾಯಿಸುವ ನಿರ್ಧಾರಕ್ಕೆ ಬಂದಿದೆ.

ಇದುವರೆಗೆ ತಮಿಳುನಾಡು ಸರ್ಕಾರ ಬಜೆಟ್‌ನಲ್ಲಿ ಅಧಿಕೃತ ರೂಪಾಯಿ ಚಿಹ್ನೆ (₹)ಯನ್ನೇ ಬಳಸುತ್ತಿತ್ತು. ಇದೀಗ ಮೊದಲ ಬಾರಿಗೆ ಬಜೆಟ್‌ ಲೋಗೋದಲ್ಲಿ ಎಂ.ಕೆ.ಸ್ಟಾಲಿನ್‌ ಸರ್ಕಾರ ತಮಿಳು ಚಿಹ್ನೆಯನ್ನು ಬಳಸಲಿದೆ. ರೂಪಾಯಿ ಚಿಹ್ನೆ ಬದಲು ತಮಿಳು ಅಕ್ಷರ ಇರಲಿದ್ದು, ʼʼಎಲ್ಲರಿಗೆ ಎಲ್ಲವೂʼʼ ಎನ್ನುವ ಟ್ಯಾಗ್‌ಲೈನ್‌ ಇದೆ.



ಈ ಸುದ್ದಿಯನ್ನೂ ಓದಿ: Physical Abuse: ವಿದೇಶಿ ಮಹಿಳೆ ಮೇಲೆ ಬರ್ಬರ ಅತ್ಯಾಚಾರ; ಹಂಪಿ ಕೇಸ್‌ ಬೆನ್ನಲ್ಲೇ ದೇಶವನ್ನೇ ಬೆಚ್ಚಿ ಬೀಳಿಸುವ ಮತ್ತೊಂದು ಹೀನ ಕೃತ್ಯ!

ಹೊಸ ಲಾಂಛನವನ್ನು ಬಿಡುಗಡೆ ಮಾಡಿದ ಎಂ.ಕೆ.ಸ್ಟಾಲಿನ್ ಎಕ್ಸ್‌ನಲ್ಲಿ, "ಸಮಾಜದ ಎಲ್ಲ ವರ್ಗಗಳಿಗೆ ಪ್ರಯೋಜನವಾಗುವಂತೆ ತಮಿಳುನಾಡಿನ ವ್ಯಾಪಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವುದು ರಾಜ್ಯದ ಉದ್ದೇಶ" ಎಂದು ಹೇಳಿದ್ದಾರೆ. ಸ್ಥಳೀಯ ಭಾಷೆಯಲ್ಲಿ ರೂಪಾಯಿ ಚಿಹ್ನೆಯನ್ನು ಬಳಸುವ ಈ ನಿರ್ಧಾರವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಸೂತ್ರದ ವಿರುದ್ಧದ ರಾಜ್ಯದ ಬಲವಾದ ನಿಲುವಿನ ಸೂಚನೆ ಎನ್ನಲಾಗಿದೆ.

ತ್ರಿಭಾಷಾ ನೀತಿಯಡಿ, ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯ ಜತೆಗೆ ಹಿಂದಿ ಕಲಿಯಬೇಕಾಗುತ್ತದೆ. ಸದ್ಯ ತಮಿಳುನಾಡು ಈ ತ್ರಿಭಾಷಾ ನೀತಿಯನ್ನು ಅಳವಡಿಸಿಕೊಂಡಿಲ್ಲ.

ಡಿಎಂಕೆ ನಾಯಕರು ಹೇಳಿದ್ದೇನು?

ಈ ಹೊಸ ಬೆಳವಣಿಗೆ ಬಗ್ಗೆ ಡಿಎಂಕೆ ನಾಯಕ ಸರವಣನ್ ಅಣ್ಣಾದೊರೈ ಪ್ರತಿಕ್ರಿಯಿಸಿ, "ಇದರಲ್ಲಿ ಕಾನೂನುಬಾಹಿರವಾಗಿ ಏನೂ ಇಲ್ಲ. ಇದು ಕೇಂದ್ರದೊಂದಿಗಿನ ಮುಖಾಮುಖಿಯಲ್ಲ. ನಾವು ತಮಿಳಿಗೆ ಆದ್ಯತೆ ನೀಡುತ್ತೇವೆ. ಅದಕ್ಕಾಗಿಯೇ ಸರ್ಕಾರ ಇದನ್ನು ರೂಪಾಯಿ ಲೋಗೋ ಬದಲು ತಮಿಳು ಲಿಪಿ ಬಳಿಸಿದೆʼʼ ಎಂದಿದ್ದಾರೆ.

ಬಿಜೆಪಿಯಿಂದ ವಿರೋಧ

ಡಿಎಂಕೆ ಸರ್ಕಾರದ ಈ ನಿರ್ಧಾರಬ್ಬು ಬಿಜೆಪಿ ಬಲವಾಗಿ ವಿರೋಧಿಸಿದೆ. ಪಕ್ಷದ ರಾಜ್ಯ ಘಟಕದ ವಕ್ತಾರ ನಾರಾಯಣನ್ ತಿರುಪತಿ ಎನ್‌ಡಿಟಿವಿಗೆ ಜತೆ ಮಾತನಾಡಿ, ʼʼಡಿಎಂಕೆಯು ತಮಿಳುನಾಡು ಭಾರತದಿಂದ ಭಿನ್ನ ಎನ್ನುವುದನ್ನು ಪ್ರತಿಪಾದಿಸುತ್ತಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಡಲು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆʼʼ ಎಂದು ಆರೋಪಿಸಿದ್ದಾರೆ.

ತಮಿಳುನಾಡು ಸರ್ಕಾರ ಮತ್ತು ಕೇಂದ್ರ ನಡುವೆ ಸಮರ

ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಅಳವಡಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ಮತ್ತು ಕೇಂದ್ರದ ನಡುವೆ ವಿವಾದ ಭುಗಿಲೆದ್ದಿದೆ. ತಮಿಳುನಾಡು ಸರ್ಕಾರವು 3ನೇ ಭಾಷೆಯ ಅಗತ್ಯವನ್ನು ವಿರೋಧಿಸಿದರೆ, ದ್ವಿಭಾಷಾ ನೀತಿಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ತಮಿಳು ಮತ್ತು ಇಂಗ್ಲಿಷ್ ಬೋಧಿಸಲಾಗುತ್ತದೆ.