"ಇವಿಎಂಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಮತದಾರರು," ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು
ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದ್ದು, ಇತ್ತೀಚೆಗೆ ಲೋಕ ಸಭಾ ಚುನಾವಣೆ 2024 ಅನ್ನು ಗಮನಿಸಿ ನಡೆಸಲಾದ ಸಮೀಕ್ಷೆಯಲ್ಲಿ ಸಾರ್ವಜನಿಕರಲ್ಲಿ ಇವಿಎಂಗಳ ಮೇಲೆ ಬಲವಾದ ನಂಬಿಕೆ ಇರುವುದಾಗಿ ತೋರಿಸಿದೆ ಎಂದು ಬಿಜೆಪಿ ಹೇಳಿದೆ.
ರಾಹುಲ್ ಗಾಂಧಿ -
ನವದೆಹಲಿ: ಲೋಕಸಭಾ ಚುನಾವಣೆ (Lok Sabha Election) 2024ರ ಕುರಿತ ಇತ್ತೀಚಿಗೆ ನಡೆಸಿದ ಸಮೀಕ್ಷೆಯೊಂದು ಇವಿಎಂಗಳ (Electronic Voting Machines) ಮೇಲೆ ಸಾರ್ವಜನಿಕರಲ್ಲಿ ಬಲವಾದ ನಂಬಿಕೆ ಇದೆ ಎಂದು ತೋರಿಸಿದ್ದು, ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಗೆ ಬಿಜೆಪಿ(BJP) ತಿರುಗೇಟು ನೀಡಿದೆ. ‘ಎವಲೂಷನ್ ಆಫ್ ಎಂಡ್‌ಲೆಸ್ ಸರ್ವೆ ಆಫ್ ಕೆಎಪಿ ಆಫ್ ಸಿಟಿಜನ್' (Evaluation of Endline Survey of KAP (Knowledge, Attitude and Practice) of Citizens) ಎಂಬ ಶೀರ್ಷಿಕೆಯಡಿ ನಡೆಸಲಾದ ಸಮೀಕ್ಷೆಯಲ್ಲಿ, ಶೇ.83.61%ರಷ್ಟು ಸಾರ್ವಜನಿಕರು ಇವಿಎಂಗಳು ವಿಶ್ವಾಸಾರ್ಹವೆಂದು ನಂಬಿರುವುದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಶೇ.69.39ರಷ್ಟು ಜನರು ಇವಿಎಂಗಳು ನಿಖರ ಫಲಿತಾಂಶಗಳನ್ನು ನೀಡುತ್ತವೆ ಎಂದು ಒಪ್ಪಿಕೊಂಡಿದ್ದು, 14.22% ಮಂದಿ ಇದಕ್ಕೆ ಬಲವಾಗಿ ಒಪ್ಪಿಗೆ ವ್ಯಕ್ತಪಡಿಸಿದ್ದಾರೆ.
ಈ ಸಮೀಕ್ಷೆಯು ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ಆಡಳಿತ ವಿಭಾಗಗಳ 102 ವಿಧಾನಸಭಾ ಕ್ಷೇತ್ರಗಳ 5,100 ಮತದಾರರ ಪ್ರತಿಕ್ರಿಯೆಯನ್ನು ಒಳಗೊಂಡಿದೆ. ಅಂಕಿಅಂಶಗಳ ಪ್ರಕಾರ ಕಲಬುರಗಿಯಲ್ಲಿ ಅತಿ ಹೆಚ್ಚು, ಅಂದರೆ 83.24% ಮಂದಿ ಇವಿಎಂಗಳ ಮೇಲಿ ನಂಬಿಕೆ ವ್ಯಕ್ತಪಡಿಸಿದರೆ, 11.24% ಮಂದಿ ಪರಾದರ್ಶಕತೆಯನ್ನು ಬಲವಾಗಿ ನಂಬಿದ್ದಾರೆ. ಅದೇ ರೀತಿ ಮೈಸೂರು ವಿಭಾಗದಲ್ಲಿ 70.67% ಹಾಗೂ 17.92%, ಬೆಳಗಾವಿಯಲ್ಲಿ 63.90% ಹಾಗೂ 21.43%, ಬೆಂಗಳೂರು ವಿಭಾಗದಲ್ಲಿ 9.28% ಮಂದಿ ನಂಬಿಕೆ ಹಾಗೂ 63.67% ಮಂದಿ ಇವಿಎಂಗಳು ವಿಶ್ವಾಸಾರ್ಹವೆಂದು ಒಪ್ಪಿಕೊಂಡಿದ್ದಾರೆ. ಇದಲ್ಲದೇ ಬೆಂಗಳೂರು ವಿಭಾಗದಲ್ಲೇ ಅತಿ ಹೆಚ್ಚು (15.67%) ಮತದಾರರು ತಟಸ್ಥ ಅಭಿಪ್ರಾಯಗಳನ್ನು ನೀಡಿದ್ದಾರೆ.
ಈ ಸಮೀಕ್ಷೆಯ ಫಲಿತಾಂಶಗಳ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, "ಕೆಲ ವರ್ಷಗಳಿಂದ ರಾಹುಲ್ ಗಾಂಧಿ ದೇಶದೆಲ್ಲೆಡೆ ಭಾರತದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ‘ಅಪಾಯದಲ್ಲಿದೆ’, ಇವಿಎಂಗಳು ‘ವಿಶ್ವಾಸಾರ್ಹವಲ್ಲ’, ಚುನಾವಣಾ ಆಯೋಗದ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ ಎಂಬ ಕಥೆ ಹೇಳುತ್ತಿದ್ದಾರೆ. ಆದರೆ ಕರ್ನಾಟಕ ಇದೀಗ ಸಂಪೂರ್ಣ ವಿಭಿನ್ನ ಕಥೆಯನ್ನು ಹೇಳಿದೆ,” ಎಂದರು.
ರಾಜ್ಯವ್ಯಾಪಿ ಸಮೀಕ್ಷೆಯು “ಜನರು ಚುನಾವಣೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ, ಇವಿಎಂಗಳು ಮತ್ತು ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯೆ ಬಗ್ಗೆ ವಿಶ್ವಾಸ ವ್ಯಕ್ತಿಪಡಿಸಿದ್ದು, ಈ ಫಲಿತಾಂಶಗಳು “ಕಾಂಗ್ರೆಸ್ ಮುಖಕ್ಕೆ ಹೊಡೆದಂತಾಗಿದೆ” ಎಂದು ಬಿಜೆಪಿ ಕಿಡಿಕಾರಿದೆ.
ಬಿಜೆಪಿಯ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಸಮೀಕ್ಷೆಯನ್ನು ಕರ್ನಾಟಕ ಸರ್ಕಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಇದು ಚುನಾವಣಾ ಆಯೋಗದ ಸಮೀಕ್ಷೆಯಾಗಿದ್ದು, ಕರ್ನಾಟಕ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ (CEO) ಮೂಲಕ ನಡೆಸಲಾಗಿದೆ," ಎಂದರು. ಅಲ್ಲದೇ ಇವಿಎಂ ಕುರಿತ ಕಾಂಗ್ರೆಸ್ ಆರೋಪಗಳಿಗೆ ಪ್ರತಿಯಾಗಿ ಈ ಸಮೀಕ್ಷೆಯನ್ನು ಉಲ್ಲೇಖಿಸುವ ಬಿಜೆಪಿ, ಅಳಂದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ‘ವೋಟ್ ಚೋರಿ’ ಆರೋಪಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.