ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

17 ವರ್ಷಗಳ ವನವಾಸ.. ತಾಯ್ನಾಡಿಗೆ ಬಂದು ಮತ್ತೆ ಪಕ್ಷ ಕಟ್ಟುವ ಛಲ; ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ತಾರಿಕ್ ರೆಹಮಾನ್ ಯಾರು ಗೊತ್ತಾ?

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಜಿಯಾ ಅವರ ಪುತ್ರ ತಾರಿಕ್ ರಹ್ಮಾನ್ ದೇಶದ ರಾಜಕೀಯದಲ್ಲಿ ಪ್ರಮುಖ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (BNP) ಕಾರ್ಯನಿರ್ವಹಣಾ ಅಧ್ಯಕ್ಷರಾಗಿರುವ ಅವರು, ಪಕ್ಷದ ಮುಂದಿನ ನಾಯಕತ್ವವನ್ನು ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಲವು ವರ್ಷಗಳಿಂದ ವಿದೇಶದಲ್ಲಿದ್ದರೂ, ರಾಜಕೀಯ ತಂತ್ರ ಮತ್ತು ಪಕ್ಷದ ಸಂಘಟನೆಗೆ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮುಂದಿನ ಅವಧಿಯಲ್ಲಿ ಬಾಂಗ್ಲಾದೇಶದ ಪ್ರಧಾನಿಯಾಗಿ ಹೊರಹೊಮ್ಮುವ ಸಾಧ್ಯತೆ ಇರುವ ನಾಯಕರಲ್ಲಿ ತಾರಿಕ್ ರಹ್ಮಾನ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ತಾರಿಕ್ ರಹಮಾನ್

ಬಾಂಗ್ಲಾದೇಶ: ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಒಂದು ಮಹತ್ವದ ಅಧ್ಯಾಯ ಆರಂಭವಾಗುತ್ತಿದೆ. ಸತತ 15 ವರ್ಷಗಳ ಕಾಲ ದೇಶವನ್ನಾಳಿದ್ದ ಶೇಖ್ ಹಸೀನಾ (Sheikh Hasina) ಅವರ ಆಡಳಿತವು 2024ರ ಜುಲೈನಲ್ಲಿ ನಡೆದ ವಿದ್ಯಾರ್ಥಿ ದಂಗೆಯಿಂದಾಗಿ ಪತನಗೊಂಡಿತ್ತು. ಆ ಘಟನೆಯ ಸುಮಾರು 18 ತಿಂಗಳ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (Bangladesh Nationalist Party) ಅಭೂತಪೂರ್ವ ಜಯಗಳಿಸಿದ್ದು, ಅಧಿಕಾರಕ್ಕೇರಲು ಸಜ್ಜಾಗಿದೆ. 300 ಸದಸ್ಯರ ಬಲದ ಜತಿಯಾ ಸಂಸತ್ತಿನಲ್ಲಿ ಬಿಎನ್‌ಪಿ ಈಗಾಗಲೇ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಪಕ್ಷದ ಅಧ್ಯಕ್ಷ ತಾರಿಕ್ ರಹಮಾನ್ (Tarique Rahman) ದೇಶದ ಮುಂದಿನ ಪ್ರಧಾನಿಯಾಗುವುದು ಈಗ ಖಚಿತವಾಗಿದೆ. ಲಂಡನ್‌ನಲ್ಲಿ ಸುಮಾರು 17 ವರ್ಷಗಳ ಕಾಲ ಸ್ವಯಂ-ಘೋಷಿತ ಗಡಿಪಾರು ಜೀವನ ನಡೆಸಿದ್ದ ತಾರಿಕ್ ರಹಮಾನ್ ಅವರಿಗೆ, ಈ ಜಯವು ರಾಜಕೀಯ ಜೀವನದ ಅತ್ಯಂತ ಸ್ಮರಣೀಯ ಪುನರಾಗಮನವಾಗಿದೆ.

ತಾರಿಕ್ ರೆಹಮಾನ್ ಯಾರು?

ನವೆಂಬರ್ 20, 1965 ರಂದು ಢಾಕಾದಲ್ಲಿ ಜನಿಸಿದ ತಾರಿಕ್ ರಹಮಾನ್, ಬಿಎನ್‌ಪಿ ಮುಖ್ಯಸ್ಥೆ ಹಾಗೂ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ. 2008ರಲ್ಲಿ ಅಂದಿನ ಮಿಲಿಟರಿ ಬೆಂಬಲಿತ ಸರ್ಕಾರವು ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಡಿಯಲ್ಲಿ ಇವರನ್ನು ಬಂಧಿಸಿತ್ತು. ಆ ಬಳಿಕ ಅವರು ಲಂಡನ್‌ಗೆ ತೆರಳಿ ಸತತ 17 ವರ್ಷಗಳ ಕಾಲ ಸ್ವಯಂ-ಘೋಷಿತ ಗಡಿಪಾರು ಜೀವನ ನಡೆಸಿದ್ದರು. ಶೇಖ್ ಹಸೀನಾ ಆಡಳಿತದಲ್ಲಿ ಇವರ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇವೆಲ್ಲವೂ ರಾಜಕೀಯ ಪ್ರೇರಿತ ಆರೋಪಗಳು ಎಂದು ತಾರಿಕ್ ಹೇಳುತ್ತಿದ್ದರು.

ಪಾಕ್‌ ವಿರುದ್ಧ ಆಡುತ್ತಾರಾ ಅಭಿಷೇಕ್ ಶರ್ಮಾ?; ಸೂರ್ಯಕುಮಾರ್ ಹೇಳಿದ್ದೇನು?

ತಾಯಿ ಖಲೀದಾ ಜಿಯಾ ಅವರಿಂದ ಪಕ್ಷದ ನಾಯಕತ್ವವನ್ನು ವಹಿಸಿಕೊಂಡ ತಾರಿಕ್, ಕಳೆದ ಡಿಸೆಂಬರ್‌ನಲ್ಲಿ ಸ್ವದೇಶಕ್ಕೆ ಮರಳಿದರು. ಅವರು ಮರಳಿದ ಐದೇ ದಿನಗಳಲ್ಲಿ ಖಲೀದಾ ಜಿಯಾ ನಿಧನರಾದರು. 2024ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ, ತಾರಿಕ್ ಮೇಲಿದ್ದ ಹಳೆಯ ಪ್ರಕರಣಗಳನ್ನು ರದ್ದುಗೊಳಿಸಲಾಯಿತು. ಅತ್ಯಂತ ಚಾಣಾಕ್ಷತನದಿಂದ ಬಿಎನ್‌ಪಿಯ ಚುನಾವಣಾ ಪ್ರಚಾರ ಮತ್ತು ಮೈತ್ರಿ ತಂತ್ರದ ಸಂಪೂರ್ಣ ಜವಾಬ್ದಾರಿಯನ್ನು ಅವರು ವಹಿಸಿಕೊಂಡರು.

ಐತಿಹಾಸಿಕ ಗೆಲುವು

ಈಗ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತಾರಿಕ್ ರಹಮಾನ್ ಅವರು ತಮ್ಮ ತಾಯಿಯ ಉತ್ತರಾಧಿಕಾರಿಯಾಗಿ ದೇಶದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಈ ಬದಲಾವಣೆಯು ಬಾಂಗ್ಲಾದೇಶದ ಆರ್ಥಿಕತೆ ಮತ್ತು ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧದ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.