ಚಂಡೀಗಢ, ಏ. 30: ಪಂಜಾಬ್ ಪೊಲೀಸರು ತರ್ನ್ ತರನ್ (Tarn Taran) ಜಿಲ್ಲೆಯಲ್ಲಿ ರಾಕೆಟ್ ಚಾಲಿತ ಗ್ರೆನೇಡ್ ಸೇರಿ ಭಾರಿ ಪ್ರಮಾಣದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಮೂಲಕ ಸಂಭವನೀಯ ಭಯೋತ್ಪಾದನಾ ಸಂಚನ್ನು ಹತ್ತಿಕ್ಕಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಬುಧವಾರ ತಿಳಿಸಿದ್ದಾರೆ. ಈ ಕಾರ್ಯಾಚರಣೆಯು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಖಲಿಸ್ತಾನ್ ಪರ ಸಂಘಟನೆಗಳ ನಡುವಿನ ನಂಟನ್ನು ಮತ್ತೊಮ್ಮೆ ಬಯಲಿಗೆಳೆದಿದೆ.
ಅಮೃತಸರ ಮತ್ತು ಪಟಿಯಾಲ ಪೊಲೀಸರ ಜಂಟಿ ಕಾರ್ಯಾಚರಣೆಯ ವೇಳೆ ಪಂಜ್ವಾರ್ ಖುರ್ದ್ ಗ್ರಾಮದಲ್ಲಿ ಈ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಾರದ ಆರಂಭದಲ್ಲಿ ಪಟಿಯಾಲದ ಶಂಭು ರೈಲ್ವೇ ಹಳಿಯ ಬಳಿ ಐಇಡಿ ಸ್ಫೋಟಿಸಲು ನಡೆಸಿದ ವಿಫಲ ಯತ್ನದ ತನಿಖೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ. ಶಂಭು ಬಳಿ ಬಾಂಬ್ ಇರಿಸುತ್ತಿದ್ದಾಗ ಅದು ಆಕಸ್ಮಿಕವಾಗಿ ಸ್ಫೋಟಗೊಂಡು ಜಗ್ರೂಪ್ ಸಿಂಗ್ ಎಂಬಾತ ಸಾವನ್ನಪ್ಪಿದ್ದ. ಈ ಘಟನೆಯ 12 ಗಂಟೆಗಳ ಒಳಗಾಗಿ ಪೊಲೀಸರು ಜಾಲದ ಕಿಂಗ್‌ಪಿನ್ ಪ್ರದೀಪ್ ಸಿಂಗ್ ಖಾಲ್ಸಾ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಭಾರತದ ವಿದೇಶಾಂಗ ಸಚಿವ ಜೈಶಂಕರ್‌ಗೆ ಇರಾನ್ ಸಚಿವ ಅರಾಗ್ಚಿ ಕರೆ
ಬಂಧಿತ ಆರೋಪಿ ಸತ್ನಾಮ್ ಸಿಂಗ್ ನೀಡಿದ ಮಾಹಿತಿಯ ಆಧಾರದ ಮೇಲೆ ನಡೆಸಿದ ಶೋಧದಲ್ಲಿ ಒಂದು ಆರ್‌ಪಿಜಿ, 2.3 ಕೆಜಿ ತೂಕದ ಸ್ಟಿಕಿ ಬಾಂಬ್, 1.5 ಕೆಜಿ ಆರ್‌ಡಿಎಕ್ಸ್, ಗ್ಲಾಕ್-18 ಸೇರಿ ಮೂರು ಸುಧಾರಿತ ಪಿಸ್ತೂಲ್‌ಗಳು, ಹ್ಯಾಂಡ್ ಗ್ರೆನೇಡ್ ಮತ್ತು 84 ಸಜೀವ ಗುಂಡುಗಳು ಪತ್ತೆಯಾಗಿವೆ. ಅಲ್ಲದೆ, ವೈರ್‌ಲೆಸ್ ಸೆಟ್‌ಗಳು ಮತ್ತು ಟೈಮರ್ ಸ್ವಿಚ್‌ಗಳನ್ನು ಸಹ ಜಪ್ತಿ ಮಾಡಲಾಗಿದೆ.
ಡಿಜಿಪಿ ಗೌರವ್ ಯಾದವ್ ಅವರ ಪ್ರಕಾರ, ಈ ಉಗ್ರಗಾಮಿ ಜಾಲಕ್ಕೆ ಮಲೇಷ್ಯಾ ಮೂಲದ ಸಂಘಟನೆಯೊಂದು ಹಣಕಾಸಿನ ನೆರವು ನೀಡುತ್ತಿತ್ತು. ಅಷ್ಟೇ ಅಲ್ಲದೆ, ಅಮೆರಿಕ ಮೂಲದ ಸುರಿಂದರ್ ಸಿಂಗ್ ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಕುಖ್ಯಾತ ಭಯೋತ್ಪಾದಕ ರಂಜಿತ್ ಸಿಂಗ್ ನೀತಾ ಎಂಬವರ ಜತೆಗೂ ಈ ತಂಡವು ಸಂಪರ್ಕ ಹೊಂದಿತ್ತು. ಈ ಮಾಡ್ಯೂಲ್ 2026ರ ಜನವರಿಯಲ್ಲಿ ಸಿರಿಹಿಂದ್ ರೈಲ್ವೇ ಹಳಿಯಲ್ಲಿ ನಡೆದ ಸ್ಫೋಟ ಮತ್ತು 2025ರ ನವೆಂಬರ್‌ನಲ್ಲಿ ಮೋಗಾದಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲೂ ಭಾಗಿಯಾಗಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಸದ್ಯ ಆರೋಪಿಗಳ ಮೇಲೆ ಯುಎಪಿಎ ಮತ್ತು ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಯ ಮೂಲಕ ಪಂಜಾಬ್ ಪೊಲೀಸರು ರಾಜ್ಯದಲ್ಲಿ ನಡೆಯಬಹುದಾಗಿದ್ದ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯವನ್ನು ತಪ್ಪಿಸಿದ್ದಾರೆ.