PM Narendra Modi: ಯುಪಿಎ ಆಡಳಿತದಲ್ಲಿ ಜನರ ಮೇಲೆ 'ತೆರಿಗೆ ಬಾಂಬ್' ಎಸೆಯಲಾಗುತ್ತಿತ್ತು; ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ
ಸಂಸತ್ತಿನಲ್ಲಿ ರಾಷ್ಟ್ರಪತಿ ಅವರ ಭಾಷಣಕ್ಕೆ 14ನೇ ಬಾರಿಗೆ ಕೃತಜ್ಞತೆ ಸಲ್ಲಿಸುವ ಗೌರವ ತಮಗೆ ಸಿಕ್ಕಿದ್ದು ಅತ್ಯಂತ ಸೌಭಾಗ್ಯ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ದಿಲ್ಲಿ ಚುನಾವಣೆಯಿಂದ ಹಿಡಿದು ಅರವಿಂದ್ ಕೇಜ್ರಿವಾಲ್‌ವರೆಗೆ ವಿವಿಧ ವಿಷಯಗಳನ್ನು ಅವರು ಈ ವೇಳೆ ಪ್ರಸ್ತಾವಿಸಿದರು.
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಂಗಳವಾರ (ಫೆ. 4) ಲೋಕಸಭೆಯಲ್ಲಿ ಉತ್ತರಿಸುವ ಮೂಲಕ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ. ದಿಲ್ಲಿ ಚುನಾವಣೆಯಿಂದ ಹಿಡಿದು ಅರವಿಂದ್ ಕೇಜ್ರಿವಾಲ್‌ವರೆಗೆ ವಿವಿದ ವಿಷಯಗಳನ್ನು ಅವರು ಈ ವೇಳೆ ಪ್ರಸ್ತಾವಿಸಿದ್ದಾರೆ. ಇದೇ ವೇಳೆ ಅವರು ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಾಡಿದ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಅವರ ಮಾತಿನ ಝಲಕ್ ಹೇಗಿತ್ತು ಎನ್ನುವ ವಿವರ ಇಲ್ಲಿದೆ.
ಸಂಸತ್ತಿನಲ್ಲಿ ರಾಷ್ಟ್ರಪತಿ ಅವರ ಭಾಷಣಕ್ಕೆ 14ನೇ ಬಾರಿಗೆ ಕೃತಜ್ಞತೆ ಸಲ್ಲಿಸುವ ಗೌರವ ತಮಗೆ ಸಿಕ್ಕಿದ್ದು ಅತ್ಯಂತ ಸೌಭಾಗ್ಯ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. "ಈ ಅವಕಾಶ ಮಾಡಿಕೊಟ್ಟ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಅವರು ಹೇಳಿದರು.
ಯುಪಿಎ ಅವಧಿಯಲ್ಲಿ ತೆರಿಗೆ 'ಬಾಂಬ್‌ಗಳು': ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಆದಾಯ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಮಧ್ಯಮ ವರ್ಗದ ಜನರಿಗೆ ಅನುಕೂಲ ಒದಗಿಸಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. 2014ಕ್ಕಿಂತ ಮೊದಲು ಯುಪಿಎ ಅವಧಿಯಲ್ಲಿ, "ಅಂತಹ (ತೆರಿಗೆ) 'ಬಾಂಬ್‌ಗಳನ್ನು' ಎಸೆಯಲಾಗುತ್ತಿತ್ತು ಮತ್ತು 'ಗುಂಡುಗಳನ್ನು' ಹಾರಿಸಲಾಗುತ್ತಿತ್ತು. ಅದು ಜನರ ಜೀವನದ ಮೇಲೆ ಪರಿಣಾಮ ಬೀರಿತ್ತು. ತಮ್ಮ ಸರ್ಕಾರವು ಆ ಗಾಯಗಳನ್ನು ಗುಣಪಡಿಸಿದೆ. 2013-2014ರಲ್ಲಿ ತೆರಿಗೆ ವಿನಾಯಿತಿ 2 ಲಕ್ಷ ರೂ. ಆದಾಯದ ಮೇಲೆ ಮಾತ್ರ ಇತ್ತು. ಇಂದು 12 ಲಕ್ಷ ರೂ. ಆದಾಯದ ಮೇಲೆ ತೆರಿಗೆ ವಿನಾಯಿತಿ ಇದೆ. ಏ. 1ರ ನಂತರ ದೇಶದಲ್ಲಿ ಸಂಬಳ ಪಡೆಯುವ ವರ್ಗವು 12.75 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ" ಎಂದು ಅವರು ತಿಳಿಸಿದರು.
ಆಪ್ ವಿರುದ್ಧ ವಾಗ್ದಾಳಿ: ಪ್ರಧಾನಿ ಮೋದಿ ಅವರು ದಿಲ್ಲಿಯ ಶೀಶ್ ಮಹಲ್ ಅನ್ನು ಉಲ್ಲೇಖಿಸಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಪರೋಕ್ಷವಾಗಿ ಟೀಕಿಸಿದರು. ʼʼಕೆಲವರು ಜಕುಝಿಯ (ಬಾತ್‌ರೂಂನಲ್ಲಿ ಉಪಯೋಗಿಸುವ ಉತ್ಪನ್ನಗಳನ್ನು ತಯಾರಿಸುವ ಅಮೆರಿಕನ್ ಕಂಪನಿ) ಸ್ಟೈಲಿಶ್ ಶವರ್‌ಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಆದರೆ ಎನ್‌ಡಿಎ ಪ್ರತಿ ಮನೆಗೆ ನೀರು ಒದಗಿಸುವತ್ತ ಗಮನಹರಿಸಿದೆ. ತಮ್ಮ ಸರ್ಕಾರ ಯಾವುದೇ ಸುಳ್ಳು ಘೋಷಣೆಗಳನ್ನು ನೀಡಲಿಲ್ಲ. ಬದಲಿಗೆ ಜನರಿಗೆ ನಿಜವಾದ ಅಭಿವೃದ್ಧಿ ಎಂದರೇನು ಎನ್ನುವುದನ್ನು ಮನದಟ್ಟು ಮಾಡಿದೆʼʼ ಎಂದರು.
ಬಡವರ ಗುಡಿಸಲುಗಳಲ್ಲಿ ಫೋಟೊ ಸೆಷನ್: ಇನ್ನು ರಾಹುಲ್ ಗಾಂಧಿ ಹೆಸರನ್ನು ಉಲ್ಲೇಖಿಸದೇ ಅವರ ವಿರುದ್ಧ ವಾಗ್ದಾಳಿ ನಡೆಸಿದರು. "ತಮ್ಮ ಸ್ವಂತ ಮನರಂಜನೆಗಾಗಿ ಬಡವರ ಗುಡಿಸಲುಗಳಲ್ಲಿ ಫೋಟೊ ಸೆಷನ್‌ಗಳನ್ನು ಮಾಡುವವರು ಸಂಸತ್ತಿನಲ್ಲಿ ಬಡವರ ಮಾತನಾಡುವುದನ್ನು ಕೇಳಿದರೆ ಬೇಸರವಾಗುತ್ತದೆ" ಎಂದು ಹೇಳಿದರು. ʼʼತೀವ್ರ ಜ್ವರ ಬಂದಾಗ ಕೆಲವರು ಏನು ಬೇಕಾದರೂ ಹೇಳುತ್ತಾರೆ. ಅದೇ ರೀತಿ ಇನ್ನು ಹಲವರು ತುಂಬಾ ನಿರಾಶೆಗೊಂಡಾಗ ಏನು ಬೇಕಾದರೂ ಮಾತನಾಡುತ್ತಾರೆ. ವಿವಿಧ ಯೋಜನೆಗಳ ಹೆಸರಿನಲ್ಲಿ ಭಾರತದ ಪ್ರಜೆಗಳಲ್ಲದ ಸುಮಾರು 10 ಕೋಟಿ ಮಂದಿ ಸರ್ಕಾರಿ ನಿಧಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ನಾವು ಅಂತಹ 10 ಕೋಟಿ ವಂಚಕರ ಹೆಸರನ್ನು ಫಲಾನುಭವಿ ಪಟ್ಟಿಯಿಂದ ತೆಗೆದು ಹಾಕಿದ್ದೇವೆ. ಮಾತ್ರವಲ್ಲ ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಿದ್ದೇವೆ" ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: PM Narendra Modi: ಕಾಂಗ್ರೆಸ್ ಆಡಳಿತದಲ್ಲಿ ದಿಲ್ಲಿಯಿಂದ 1ರೂ. ಕಳಿಸಿದ್ರೆ 15ಪೈಸೆ ಜನರ ಕೈ ಸೇರುತ್ತಿತ್ತು-ಪ್ರಧಾನಿ ಮೋದಿ ಟಾಂಗ್
ದ್ವೇಷ ಪೂರಿತ ರಾಜಕೀಯ ಸಲ್ಲದು: ಅಧಿಕಾರವು ಸೇವೆಯಾದಾಗ ಮಾತ್ರ ರಾಷ್ಟ್ರ ನಿರ್ಮಾಣ ನಡೆಯುತ್ತದೆ ಎಂದು ಪ್ರಧಾನಿ ಹೇಳಿದರು. "ಅಧಿಕಾರವು ಪರಂಪರೆಯ ಮೂಲಕ ಮುಂದುವರಿದಾಗ, ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ. ನಾವು ಸಂವಿಧಾನದ ಆಶಯವನ್ನು ಅನುಸರಿಸುತ್ತೇವೆ. ನಾವು ದ್ವೇಷಪೂರಿತ ರಾಜಕೀಯದಲ್ಲಿ ತೊಡಗುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು. ತಮ್ಮ ಆಡಳಿತವು ಏಕತೆಗೆ ಅತ್ಯಂತ ಮಹತ್ವ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.