ಬೆಂಗಳೂರು: ಶಿಕ್ಷಣವೆಂದರೆ (education) ಕೇವಲ ಮಾಹಿತಿ ಸಂಗ್ರಹವಲ್ಲ. ಅದು ಭೌತಿಕ ಶಕ್ತಿಯನ್ನು ವಿಕಸನಗೊಳಿಸಿ ಹೃದಯ ಮತ್ತು ಭಾವನೆಗಳ ಮೇಲೆ ಪ್ರಭಾವ ಬೀರಿ ವಿದ್ಯಾರ್ಥಿಗಳಲ್ಲಿ ದಯೆ, ಅನುಕಂಪದ ಭಾವನೆಗಳು ಹುಟ್ಟಿಸಿ ಅವರಲ್ಲಿ ನೈತಿಕತೆ ಮತ್ತು ಜವಾಬ್ದಾರಿಯನ್ನು ಬೆಳೆಸಬೇಕು ಎಂದು ಪ್ರತಿಪಾದಿಸಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ (Dr. Sarvepalli Radhakrishnan). ಇವರು ಒಬ್ಬ ಆದರ್ಶ ಶಿಕ್ಷಕ ಮಾತ್ರವಲ್ಲ ಉತ್ತಮ ಶಿಕ್ಷಣ ಸುಧಾರಕರು, ಮಹಾನ್ ತತ್ತ್ವಜ್ಞಾನಿ, ರಾಜನೀತಿ ಶಾಸ್ತ್ರಜ್ಞರು ಆಗಿದ್ದರು. ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿರುವ ಇವರ ಜನ್ಮ ದಿನವಾದ ಸೆಪ್ಟೆಂಬರ್ 5 ಅನ್ನು ದೇಶಾದ್ಯಂತ ಶಿಕ್ಷಕರ ದಿನವಾಗಿ (Teachers Day) ಆಚರಿಸಲಾಗುತ್ತಿದೆ.
ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ತ್ವ ಜ್ಞಾನ, ಶಂಕರ, ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮೊದಲಾದ ಮಹನೀಯರ ತತ್ತ್ವ ಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದ್ದ ಡಾ.ರಾಧಾಕೃಷ್ಣನ್ ಅವರಿಗೆ ಶಿಕ್ಷಕ ವೃತ್ತಿಯ ಮೇಲೆ ಅಪಾರ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು.
ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಜನಿಸಿದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ತಂದೆ ಸರ್ವಪಲ್ಲಿ ವೀರಸ್ವಾಮಿ, ತಾಯಿ ಸೀತಮ್ಮ. ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿದ್ದ ಇವರಿಗೆ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು. ಆದರೆ ರಾಧಾಕೃಷ್ಣನ್ ಅವರಿಗೆ ಬಾಲ್ಯದಿಂದಲೂ ಓದಬೇಕು ಎನ್ನುವ ಅಪಾರ ಹಂಬಲವಿತ್ತು. ವಿದ್ಯಾರ್ಥಿ ವೇತನ ಪಡೆದು ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ ನಲ್ಲಿ ತತ್ತ್ವಜ್ಞಾನ ವಿಷಯದಲ್ಲಿ ಬಿ.ಎ ಮತ್ತು ಎಂ.ಎ. ಪದವಿಗಳನ್ನು ಪಡೆದರು. 1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಶಿಕ್ಷಕ ಆರಂಭಿಸಿದರು.
ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾದಾಗ ಅವರ ವಿದ್ಯಾರ್ಥಿಗಳು ಹುಟ್ಟುಹಬ್ಬವನ್ನು ಆಚರಿಸಲು ಮುಂದಾಗಿದ್ದರು. ಆಗ ಅವರು ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸಿದರೆ ಹೆಚ್ಚು ಸಂತೋಷವಾಗುತ್ತದೆ ಎಂದಿದ್ದರು. ಇದರ ಬಳಿಕ ಅಂದರೆ 1962ರಿಂದ ಭಾರತದಲ್ಲಿ ನಿರಂತರವಾಗಿ ಇವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು.
ಭಾರತೀಯ ತತ್ತ್ವ ಶಾಸ್ತ್ರವನ್ನು ವಿಶ್ವಕ್ಕೆ ಪರಿಚಯಿಸಿ ಮನುಷ್ಯನ ಬದುಕಿಗೆ ಆಧ್ಯಾತ್ಮಿಕ ಮೌಲ್ಯಗಳು ಅತ್ಯವಶ್ಯಕ ಎಂದು ಪ್ರತಿಪಾದಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಕಲ್ಪನಾ ಶಕ್ತಿಯನ್ನು ಬೆಳೆಸಬೇಕು. ತಮ್ಮನ್ನು ತಾವು ನಿಯಂತ್ರಿಸುವ ತರಬೇತಿಯನ್ನು ಕೊಡಬೇಕು. ತಾಳ್ಮೆಯನ್ನು ಹೆಚ್ಚಿಸಬೇಕು. ಹೊಸ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಉದಾರ ಗುಣವನ್ನು ಬೆಳೆಸುವುದು ಶಿಕ್ಷಣದ
ಗುರಿಯಾಗಬೇಕು. ನಮ್ರತೆ ಮತ್ತು ಸಹಾನುಭೂತಿಯಂತಹ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಶಿಕ್ಷಣವು ಜೀವನದ ಅವಿಭಾಜ್ಯ ಅಂಗ. ಅದು ಮಾನವನನ್ನು ಪರಿಪೂರ್ಣತೆ ಹಾಗೂ ಸುಸಂಸ್ಕೃತಿಯತ್ತ ಒಯ್ಯುವ ಸಾಧನ ಮಾರ್ಗವಾಗಿದೆ ಎಂದಿದ್ದರು. ರಷ್ಯಾದ ಅಧ್ಯಕ್ಷ ಸ್ಟಾಲಿನ್ ಅವರಿಂದ ಮೆಚ್ಚುಗೆಗೆ ಪಾತ್ರರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಕಳಿಂಗ ಯುದ್ಧದ ಬಳಿಕ ಅಶೋಕ ಶ್ರೇಷ್ಠ ಮನುಷ್ಯನಾಗಿರುವಂತೆ ಮುಂದೊಂದು ದಿನ ನೀವಾಗುತ್ತೀರಿ ಎಂದು ಪ್ರಥಮ ಭೇಟಿಯಲ್ಲೇ ಹೇಳಿದ್ದರು.
ಶಿಕ್ಷಣ, ತತ್ತ್ವಜ್ಞಾನ, ದೇಶದ ಅಭಿವೃದ್ಧಿ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿರುವುದು ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗೆ ನೀಡುವ ಅಪಾರ ಗೌರವದ ಪ್ರತೀಕವಾಗಿದೆ.
ಗುರುವಾದವನು ಬ್ರಹ್ಮ, ವಿಷ್ಣು, ಮಹೇಶ್ವರನ ರೂಪ. ಆತನೇ ಪರಬ್ರಹ್ಮನ ಸ್ವರೂಪ ಎನ್ನುತ್ತದೆ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ಶ್ಲೋಕ. ಇದು ಬ್ರಹ್ಮನೆಂದರೆ ದಯೆ, ಕರುಣೆಯನ್ನು ನಮ್ಮೊಳಗೆ ಬೆಳೆಸುವ, ವಿಷ್ಣುವೆಂದರೆ ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರುವ, ಶಿವನೆಂದರೆ ಅಹಂಕಾರವನ್ನು ನಾಶ ಪಡಿಸುವ ಶಿಕ್ಷಣವನ್ನು ಕೊಡುವವನಾಗಿದ್ದಾನೆ ಎನ್ನುತ್ತದೆ. ಅಂತಹ ಗುರುವಿನ ಪ್ರತಿರೂಪದಂತಿದ್ದ ಡಾ. ಸರ್ವಪಳ್ಳಿ ರಾಧಾಕೃಷ್ಣನ್. 1975ರ ಏಪ್ರಿಲ್ 17 ರಂದು ನಿಧನರಾದರು.
KPSC Recruitment Scam: ಕೆಪಿಎಸ್‌ಸಿ ಹಗರಣ: ಜ್ಞಾನೇಂದ್ರ ಅಮಾನತು: ಕರ್ಮಕಾಂಡಕ್ಕೆ ಮತ್ತೊಂದು ಬಲಿ
ವಿಶ್ವದಾದ್ಯಂತ ಎಲ್ಲಾ ದೇಶಗಳಲ್ಲೂ ಶಿಕ್ಷಕರ ದಿನವನ್ನು ಬೇರೆಬೇರೆ ದಿನಗಳಲ್ಲಿ ಆಚರಿಸಲಾಗುತ್ತದೆ. 1966ರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994ರಿಂದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಲಾಗುತ್ತಿದೆ.