ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪರೀಕ್ಷಾ ಅಕ್ರಮ ತಡೆಗೆ ಕೇಂದ್ರದ ಬಿಗಿ ಕ್ರಮ: ದೇಶಾದ್ಯಂತ ಟೆಲಿಗ್ರಾಮ್ ಆ್ಯಪ್‌ಗೆ ತಾತ್ಕಾಲಿಕ ನಿಷೇಧ

NEET (UG) 2026 Re-Exam: ನೀಟ್ 2026 ಮರುಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆ ತಡೆಯುವ ಉದ್ದೇಶದಿಂದ ಟೆಲಿಗ್ರಾಮ್ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ನಕಲಿ ಪ್ರಶ್ನೆ ಪತ್ರಿಕೆ ಹಾಗೂ ಸೈಬರ್ ವಂಚನೆ ಜಾಲಗಳ ವಿರುದ್ಧ ಕೇಂದ್ರ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಕಠಿಣ ಕ್ರಮ ಕೈಗೊಂಡಿವೆ ಎನ್ನಲಾಗಿದೆ.

ನೀಟ್

ನವದೆಹಲಿ, ಜೂ. 16: ವರದಿಗಳ ಪ್ರಕಾರ ಮುಂಬರುವ ನೀಟ್ (NEET UG 2026) ಮರುಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆ ಜಾಲಗಳನ್ನು ತಡೆಯಲು ಕೇಂದ್ರ ಸರ್ಕಾರವು ದೇಶಾದ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ (Telegram App) ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ನೇರ ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69A ಅಡಿಯಲ್ಲಿ ಈ ಕಠಿಣ ಕ್ರಮ ಕೈಗೊಂಡಿದೆ. ಜೂನ್ 21ರಂದು ನಡೆಯಲಿರುವ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಲು ಈ ನಿರ್ಧಾರ ಅತ್ಯಗತ್ಯ ಎಂದು ಎನ್‌ಟಿಎ ಹೇಳಿದೆ.

ಕೇಂದ್ರ ಸರ್ಕಾರದ ಈ ಹೊಸ ಆದೇಶದಲ್ಲಿ ಪ್ರಮುಖವಾಗಿ ಎರಡು ನಿರ್ದೇಶನಗಳನ್ನು ನೀಡಲಾಗಿದೆ. ಮೊದಲನೆಯದಾಗಿ 2026ರ ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಎರಡನೆಯದಾಗಿ, ಟೆಲಿಗ್ರಾಮ್‌ನಲ್ಲಿ ಈಗಾಗಲೇ ಪೋಸ್ಟ್ ಮಾಡಲಾದ ಹಳೆಯ ಸಂದೇಶಗಳನ್ನು ಎಡಿಟ್ ಮಾಡುವ ವೈಶಿಷ್ಟ್ಯವನ್ನು ಜೂನ್ 30ರವರೆಗೆ ನಿಷ್ಕ್ರಿಯಗೊಳಿಸಲು ಆದೇಶಿಸಲಾಗಿದೆ. ಪರೀಕ್ಷೆ ಮುಗಿದ ನಂತರ ವಂಚಕರು ಹಳೆಯ ಸಂದೇಶಗಳನ್ನು ಎಡಿಟ್ ಮಾಡಿ, ಪ್ರಶ್ನೆ ಪತ್ರಿಕೆಗಳನ್ನು ಸೇರಿಸಿ, ಪರೀಕ್ಷೆಗೆ ಮೊದಲೇ ಪತ್ರಿಕೆ ಸೋರಿಕೆಯಾಗಿದೆ ಎಂಬ ಸುಳ್ಳು ಸೃಷ್ಟಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ದೇಶದಲ್ಲಿ ಟೆಲಿಗ್ರಾಮ್ ಆ್ಯಪ್‌ಗೆ ತಾತ್ಕಾಲಿಕ ನಿಷೇಧ:



ಸಕ್ರಿಯ ಜಾಲ ಪತ್ತೆ

"ಪೇಬರ್ ಲೀಕ್ ನೀಟ್", "ಪ್ರೈವೇಟ್ ಮಾಫಿಯಾ" ನಂತಹ ಹೆಸರಿನ ಹಲವು ಟೆಲಿಗ್ರಾಮ್ ಚಾನಲ್‌ಗಳು ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿರುವುದು ಪತ್ತೆಯಾಗಿದೆ. ಬಿಹಾರ, ಗುಜರಾತ್ ಮತ್ತು ರಾಜಸ್ಥಾನ ಪೊಲೀಸ್ ಪಡೆಗಳು ಹಾಗೂ ಗೃಹ ಸಚಿವಾಲಯದ ಒಕ್ಕೂಟದ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇಂತಹ ನೂರಾರು ನಕಲಿ ಚಾನಲ್‌ಗಳು ಮತ್ತು ಬಾಟ್‌ಗಳನ್ನು ಪತ್ತೆಹಚ್ಚಿ ಮುಚ್ಚಿಸಿವೆ. ಅಹಮದಾಬಾದ್‌ನಲ್ಲಿ ಸುಮಾರು 1.5 ಕೋಟಿ ರುಪಾಯಿ ವಂಚಿಸಿದ ಅಂತರರಾಜ್ಯ ಸೈಬರ್ ಗ್ಯಾಂಗ್ ಅನ್ನು ಬಂಧಿಸಲಾಗಿದೆ.

ನೀಟ್‌ ಮರು ಪರೀಕ್ಷೆಗೆ ಕೆಲವೇ ದಿನ ಬಾಕಿ ಇರುವಾಗಲೇ ವಿದ್ಯಾರ್ಥಿ ಆತ್ಮಹತ್ಯೆ!

ಕಟ್ಟುನಿಟ್ಟಿನ ಕ್ರಮ

ಸಾಮಾನ್ಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಈ ತಾತ್ಕಾಲಿಕ ನಿಷೇಧದಿಂದ ಉಂಟಾಗುವ ಅನಾನುಕೂಲತೆಗೆ ಎನ್‌ಟಿಎ ವಿಷಾದ ವ್ಯಕ್ತಪಡಿಸಿದೆ. ಆದಾಗ್ಯೂ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪರೀಕ್ಷೆಯ ನಂಬಿಕೆಯನ್ನು ಉಳಿಸಲು ಈ ಕಠಿಣ ಕ್ರಮ ಅನಿವಾರ್ಯವಾಗಿತ್ತು ಎಂದು ಸ್ಪಷ್ಟಪಡಿಸಿದೆ. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಕೇವಲ ಅಧಿಕೃತ ವೆಬ್‌ಸೈಟ್ ಮಾಹಿತಿಯನ್ನು ಮಾತ್ರ ನಂಬುವಂತೆ ಹಾಗೂ ಇಂತಹ ವಂಚನೆಗಳ ವಿರುದ್ಧ ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್‌ಲೈನ್ 1930ಗೆ ದೂರು ನೀಡುವಂತೆ ಅಭ್ಯರ್ಥಿಗಳಿಗೆ ಮತ್ತು ಪೋಷಕರಿಗೆ ಎನ್‌ಟಿಎ ಸಲಹೆ ನೀಡಿದೆ. ಮುಂಬರುವ ಈ ಅತ್ಯಂತ ಮಹತ್ವದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಸುರಕ್ಷಿತ ಮತ್ತು ನ್ಯಾಯಸಮ್ಮತ ವಾತಾವರಣದಲ್ಲಿ ನಡೆಸಲು ಕೇಂದ್ರದ ಎಲ್ಲ ಇಲಾಖೆಗಳು ತೀವ್ರ ನಿಗಾ ವಹಿಸಿವೆ.