ಶ್ರೀನಗರ, ಮಾ. 10: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (LoC) ಉದ್ದಕ್ಕೂ ಮಂಗಳವಾರ (ಮಾರ್ಚ್ 10) ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನನ್ನು ಸೇನಾ ಪಡೆಗಳು ಹೊಡೆದುರುಳಿಸಿವೆ. ಅಲ್ಲದೆ ʼʼಈ ಕಾರ್ಯಾಚರಣೆ ಮೂಲಕ ಭದ್ರತಾ ಪಡೆ ಸಿಬ್ಬಂದಿ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ (Rajouri Encounter). ಈ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂಬ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯ ನಡೆಸಲಾಯಿತು.
ʼʼಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಅಪರಾಹ್ನ 3 ಗಂಟೆ ಸುಮಾರಿಗೆ ಎಲ್‌ಒಸಿಯ ಉದ್ದಕ್ಕೂ ನೌಶೇರಾ ಸೆಕ್ಟರ್‌ನ ಝಂಗಾರ್‌ನ್‌ಲ್ಲಿ ಇಬ್ಬರು ಭಯೋತ್ಪಾದಕರ ಚಲನವಲನವನ್ನು ಪತ್ತೆಹಚ್ಚಿದವುʼʼ ಎಂದು ವೈಟ್ ನೈಟ್ ಕಾರ್ಪ್ಸ್ ಎಕ್ಸ್‌ನಲ್ಲಿ ತಿಳಿಸಿದೆ.
ಭದ್ರತಾ ಪಡೆಗಳು ದಾಳಿ ನಡೆಸಿ ಉಗ್ರರ ಒಳನುಸುಳುವಿಕೆಯನ್ನು ಯಶಸ್ವಿಯಾಗಿ ವಿಫಲಗೊಳಿಸಿವೆ. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ಓರ್ವ ಭಯೋತ್ಪಾದಕನೊಬ್ಬನನ್ನು ಹೊಡೆದುರುಳಿಸಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಿದೆ. ಪ್ರದೇಶದಲ್ಲಿ ಅಡಗಿಕೊಂಡಿರುವ ಮತ್ತೋರ್ವ ಭಯೋತ್ಪಾದಕನನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ವೈಟ್ ನೈಟ್ ಕಾರ್ಪ್ಸ್‌ನ ಎಕ್ಸ್ ಪೋಸ್ಟ್:
ತೀವ್ರಗೊಂಡ ಶೋಧ ಕಾರ್ಯ
ಇದೀಗ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಿವೆ. ಆ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಡ್ರೋನ್ ಮುಂತಾದ ತಂತ್ರಜ್ಞಾನ ಬಳಸಿ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಯಾವುದೇ ಒಳನುಸುಳುವಿಕೆ ಪ್ರಯತ್ನಗಳನ್ನು ತಡೆಗಟ್ಟಲು ಎಲ್‌ಒಸಿ ಉದ್ದಕ್ಕೂ ಕಣ್ಗಾವಲು ಹೆಚ್ಚಿಸಲಾಗಿದೆ.
ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣ; ಪಾಕಿಸ್ತಾನಿ ಹ್ಯಾಂಡ್ಲರ್‌ಗಳನ್ನು ಉಗ್ರರು ಸಂಪರ್ಕಿಸಿದ್ದು ಹೇಗೆ?
ʼʼರಾಜೌರಿ-ಪೂಂಚ್ ತನ್ನ ಒರಟಾದ ಭೂಪ್ರದೇಶ ಮತ್ತು ದಟ್ಟವಾದ ಕಾಡುಗಳಿಂದಾಗಿ ಸೂಕ್ಷ್ಮ ಒಳನುಸುಳುವಿಕೆ ಮಾರ್ಗಗಳಲ್ಲಿ ಒಂದಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ʼʼಈ ಮಾರ್ಗದ ಮೂಲಕ ಉಗ್ರರು ನುಸುಳಲು ಹೆಚ್ಚಾಗಿ ಪ್ರಯತ್ನಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಭದ್ರತಾ ಸಂಸ್ಥೆಗಳು ಕಾಶ್ಮೀರ ಕಣಿವೆಯಿಂದ ಜಮ್ಮು ಪ್ರದೇಶದ ಕೆಲವು ಭಾಗಗಳಿಗೆ ಭಯೋತ್ಪಾದಕ ಚಟುವಟಿಕೆಗಳು ಸ್ಥಳಾಂತರಗೊಂಡಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಬಿಗಿಯಾದ ಕಣ್ಗಾವಲಿನಿಂದಾಗಿ ಕಣಿವೆಯಲ್ಲಿ ಭಯೋತ್ಪಾದಕ ಘಟನೆಗಳು ಗಮನಾರ್ಹವಾಗಿ ಕಡಿಮೆಯಾಗಿದ್ದರೂ, ಜಮ್ಮುವಿನ ಗುಡ್ಡಗಾಡು ಜಿಲ್ಲೆಗಳಾದ ರಾಜೌರಿ, ಪೂಂಚ್, ದೋಡಾ, ಕಿಶ್ತ್ವಾರ್ ಮತ್ತು ಕಥುವಾಗಳಲ್ಲಿ ದಾಳಿಗಳು ಮತ್ತು ಒಳನುಸುಳುವಿಕೆ ಪ್ರಯತ್ನ ನಡೆಯುತ್ತಲೇ ಇದೆʼʼ ಎಂದಿದ್ದಾರೆ.
ಭದ್ರತಾ ಪಡೆಗಳ ಕಾರ್ಯಾಚರಣೆ; ಉಧಂಪುರದಲ್ಲಿ ಇಬ್ಬರು ಜೈಶ್ ಭಯೋತ್ಪಾದಕರ ಎನ್‌ಕೌಂಟರ್
2021ರ ಅಕ್ಟೋಬರ್‌ನಿಂದ ರಜೌರಿ-ಪೂಂಚ್ ಪ್ರದೇಶದಲ್ಲಿ ಹಲವು ಭಯೋತ್ಪಾದಕ ದಾಳಿಗಳು ನಡೆಯುತ್ತಲೇ ಇವೆ. ಸೇನಾ ವಾಹನಗಳ ಮೇಲೆ ದಾಳಿ ನಡೆಯುತ್ತಿರುವ ಬಗ್ಗೆ ಆಗಾಗ ವರದಿಯಾಗುತ್ತಿದೆ. ಈಗಾಗಲೇ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಸೇರಿ ಹಲವರು ಬಲಿಯಾಗಿದ್ದಾರೆ. ಜತೆಗೆ ಕೆಲವು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಭದ್ರತಾ ಅಧಿಕಾರಿಗಳ ಪ್ರಕಾರ, ಭಯೋತ್ಪಾದಕ ಗುಂಪುಗಳು ಎಲ್‌ಒಸಿ ಉದ್ದಕ್ಕೂ ಒಳನುಸುಳುವಿಕೆ ಮಾರ್ಗಗಳ ಮೂಲಕ ಉಗ್ರರನ್ನು ಕಳುಹಿಸಿ ಜಮ್ಮುವಿನಲ್ಲಿ ತಮ್ಮ ಅಸ್ತಿತ್ವವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿವೆ. ಭದ್ರತೆ ಹೆಚ್ಚಿಸಿದರೂ ಉಗ್ರರು ದಾಳಿ ನಡೆಯುತ್ತಿರುವುದು ಭಾರತೀಯ ಸೇನೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.