ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣ; ಪಾಕಿಸ್ತಾನಿ ಹ್ಯಾಂಡ್ಲರ್‌ಗಳನ್ನು ಉಗ್ರರು ಸಂಪರ್ಕಿಸಿದ್ದು ಹೇಗೆ?

Delhi Red Fort Blast Case: ದೆಹಲಿಯ ಕೆಂಪುಕೋಟೆ ಸ್ಫೋಟ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಉಗ್ರರು ಘೋಸ್ಟ್ ಸಿಮ್ ಕಾರ್ಡ್‌ ಮತ್ತು ಎನ್‌ಕ್ರಿಪ್ಟೆಡ್ ಅಪ್ಲಿಕೇಷನ್‌ ಬಳಸಿಕೊಂಡು ಪ್ಲಾನ್ ಮಾಡಿದ್ದರು ಎನ್ನುವುದು ಇದೀಗ ಬಯಲಾಗಿದೆ.

ದೆಹಲಿ ಸ್ಫೋಟ: ಉಗ್ರರು ಪಾಕ್‌ ಹ್ಯಾಂಡ್ಲರ್‌ಗಳನ್ನು ಸಂಪರ್ಕಿಸಿದ್ದು ಹೇಗೆ?

ಸಂಗ್ರಹ ಚಿತ್ರ -

Priyanka P
Priyanka P Jan 4, 2026 7:47 PM

ನವದೆಹಲಿ, ಜ. 4: ಕಳೆದ ವರ್ಷ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟಕ್ಕೆ (Delhi Bomb Blast) ಸಂಬಂಧಿಸಿದಂತೆ ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್‌ನ ತನಿಖೆ ಚುರುಕುಗೊಂಡಿದೆ. ತನಿಖೆ ವೇಳೆ ಮಹತ್ವದ ಸಂಗತಿ ಬಯಲಾಗಿದೆ. ಆತ್ಮಹತ್ಯಾ ಬಾಂಬರ್‌ ಉಮರ್-ಉನ್-ನಬಿ ಸೇರಿದಂತೆ ಉಗ್ರರು ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ಸಮನ್ವಯ ಸಾಧಿಸಲು ಘೋಸ್ಟ್ ಸಿಮ್ ಕಾರ್ಡ್‌ಗಳು (Ghost sim card) ಮತ್ತು ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಜಾಲವನ್ನು ಬಳಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ದೂರ ಸಂಪರ್ಕ ಇಲಾಖೆ (DoT) ನೀಡಿದ ಮಾಹಿತಿಯ ಆಧಾರದಲ್ಲಿ ತನಿಖಾಧಿಕಾರಿಗಳು ಈ ಮಹತ್ವದ ರಹಸ್ಯ ಕಂಡುಕೊಂಡಿದ್ದಾರೆ. ಈ ರೀತಿಯ ದುರುಪಯೋಗ ತಡೆಯಲು ವಾಟ್ಸ್‌ಆ್ಯಪ್‌, ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಅಪ್ಲಿಕೇಶನ್ ಆಧಾರಿತ ಸಂವಹನ ಸೇವೆಗಳನ್ನು ಸಕ್ರಿಯ, ಭೌತಿಕ ಸಿಮ್ ಕಾರ್ಡ್‌ಗೆ ನಿರಂತರವಾಗಿ ಲಿಂಕ್ ಮಾಡಬೇಕು ಎಂದು ದೂರ ಸಂಪರ್ಕ ಇಲಾಖೆ ಸೂಚಿಸಿದೆ.

ದೆಹಲಿ ಬಾಂಬ್ ಸ್ಫೋಟ: ಮತ್ತೆ ನಾಲ್ವರು ಪ್ರಮುಖರ ಬಂಧನ

ವೈಟ್-ಕಾಲರ್ ಭಯೋತ್ಪಾದಕ ಘಟಕದ ತನಿಖೆಯ ಭಾಗವಾಗಿ ಬಂಧಿತ ವೈದ್ಯರಾದ ಮುಜಮ್ಮಿಲ್ ಗಣೈ, ಅದಿಲ್ ರಾದರ್ ಮತ್ತಿತರರು ಭದ್ರತಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಡ್ಯುಯಲ್-ಫೋನ್ ಪ್ರೋಟೋಕಾಲ್‍ನ ಭಾಗವಾಗಿ ಘೋಸ್ಟ್ ಸಿಮ್ ಕಾರ್ಡ್‌ಗಳನ್ನು ಬಳಸಿದ್ದರು ಎಂದು ತಿಳಿದುಬಂದಿದೆ.

ಕೆಂಪುಕೋಟೆ ಬಳಿ ಸ್ಫೋಟಕ ತುಂಬಿದ ವಾಹನವನ್ನು ಚಲಾಯಿಸುವಾಗ ಹತ್ಯೆಯಾದ ಉಮರ್-ಉನ್-ನಬಿ ಸೇರಿದಂತೆ ಪ್ರತಿಯೊಬ್ಬ ಆರೋಪಿಗಳು ಎರಡರಿಂದ ಮೂರು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಹೊಂದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪರಾಧಿಗಳ ಬಳಿ ಎರಡು ಪ್ರಕಾರದ ಫೋನ್‌ಗಳಿದ್ದವು. ಒಂದು ಫೋನ್ ಅವರ ಹೆಸರಲ್ಲೇ ನೋಂದಾಯಿತವಾಗಿತ್ತು. ಇದನ್ನು ವೈಯಕ್ತಿಕ ಮತ್ತು ವೃತ್ತಿಪರ ಬಳಕೆಗೆ ಉಪಯೋಗಿಸಲಾಗುತ್ತಿತ್ತು. ಇನ್ನೊಂದು ಟೆರರ್ ಫೋನ್ ಆಗಿದ್ದು, ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ವಾಟ್ಸ್‌ಆ್ಯಪ್‌ ಮತ್ತು ಟೆಲಿಗ್ರಾಮ್ ಮೂಲಕ ಸಂವಹನ ಮಾಡಲು ಮಾತ್ರ ಉಪಯೋಗಿಸಲಾಗುತ್ತಿತ್ತು (ಉಕಾಸಾ, ಫೈಜಾನ್, ಮತ್ತು ಹಾಶ್ಮಿ ಎಂಬ ಕೋಡ್‌ವರ್ಡ್‌ನೊಂದಿಗೆ ಬಳಸಲಾಗುತ್ತಿತ್ತು).

ನಕಲಿ ಆಧಾರ್ ಕಾರ್ಡ್ ಮೂಲಕ ಈ ಸಿಮ್‌ಗಳನ್ನು ಪಡೆಯಲಾಗಿತ್ತು. ಇದೇ ಮಾಹಿತಿಯ ಆಧಾರದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿಕೊಂಡು ಸಿಮ್‌ಗಳನ್ನು ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಜಾಲವನ್ನು ಬಯಲು ಮಾಡಿದ್ದಾರೆ.

ಮೆಸೇಜಿಂಗ್ ಅಪ್ಲಿಕೇಶನ್‌ಗಳು ಮೊಬೈಲ್‌ಗಳು ಸಿಮ್ ಇಲ್ಲದೆ ಕಾರ್ಯನಿರ್ವಹಿಸಲು ಅನುಮತಿಸುವ ವೈಶಿಷ್ಟ್ಯಗಳನ್ನು ಬಳಸಿಕೊಳ್ಳುವ ಮೂಲಕ, ಹ್ಯಾಂಡ್ಲರ್‌ಗಳು ಯೂಟ್ಯೂಬ್ ಮೂಲಕ ಐಇಡಿ ಜೋಡಣೆಯನ್ನು ಕಲಿಯಲು, ಮಾಡ್ಯೂಲ್ ಅನ್ನು ನಿರ್ದೇಶಿಸಲು ಸಾಧ್ಯವಾಯಿತು. ಆರಂಭದಲ್ಲಿ ಸಿರಿಯಾ ಅಥವಾ ಅಫ್ಘಾನಿಸ್ತಾನದಲ್ಲಿ ಸೇರಲು ಬಯಸಿದ್ದರು ಎನ್ನಲಾಗಿದೆ.

ಸಿಮ್ ಇಲ್ಲದೆ ಅಪ್ಲಿಕೇಶನ್‌ಗಳನ್ನು ಬಳಸುವ ಈ ವೈಶಿಷ್ಟ್ಯವು ಟೆಲಿಕಾಂ ಸೈಬರ್ ಭದ್ರತೆಗೆ ಸವಾಲನ್ನು ಒಡ್ಡುತ್ತಿದೆ. ಯಾಕೆಂದರೆ ಇದನ್ನು ದೇಶದ ಹೊರಗಿನಿಂದ ಸೈಬರ್ ವಂಚನೆಗಳು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಮಾಡಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.

ಅಕ್ಟೋಬರ್ 18-19ರ ಮಧ್ಯರಾತ್ರಿ ನಿಷೇಧಿತ ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಪೋಸ್ಟರ್‌ಗಳು ಶ್ರೀನಗರದ ಹೊರಗೆ ಗೋಡೆಗಳ ಮೇಲೆ ಕಾಣಿಸಿಕೊಂಡಾಗ ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ಬಯಲಾಗಲು ಪ್ರಾರಂಭವಾಯಿತು. ಕಣಿವೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ನಡೆಯುವ ಬಗ್ಗೆ ಪೋಸ್ಟರ್‌ಗಳು ಎಚ್ಚರಿಕೆ ನೀಡಲಾಗಿತ್ತು.

ಉಗ್ರರ ಜೊತೆ ಲಿಂಕ್ ಆರೋಪ- ವಿಚಾರಣೆ ಬಳಿಕ ವೈದ್ಯೆ ರಿಲೀಸ್

ಇದನ್ನು ಗಂಭೀರ ವಿಷಯವೆಂದು ಪರಿಗಣಿಸಿ, ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಿ.ವಿ. ಸುಂದೀಪ್ ಚಕ್ರವರ್ತಿ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಸಲು ಹಲವು ತಂಡಗಳನ್ನು ರಚಿಸಿದರು.

ಬಂಧಿತ ಆರೋಪಿಗಳ ಹೇಳಿಕೆಗಳನ್ನು ಪರಿಗಣಿಸಿ, ತನಿಖೆಯು ಶ್ರೀನಗರ ಪೊಲೀಸರನ್ನು ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಿತು. ಅಲ್ಲಿ ಇಬ್ಬರು ವೈದ್ಯರು, ದಕ್ಷಿಣ ಕಾಶ್ಮೀರದ ಪುಲ್ವಾಮಾದ ಕೊಯಿಲ್ ನಿವಾಸಿ ಗಣೈ ಮತ್ತು ಲಖನೌ ಶಾಹೀನ್ ಸಯೀದ್‍ನನ್ನು ಬಂಧಿಸಲಾಯಿತು. ಬಂಧಿತರಿಂದ 2,900 ಕೆಜಿ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಸಲ್ಫರ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು. ಈ ವೇಳೆ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣದಲ್ಲಿ 15 ಜನರು ಸಾವನ್ನಪ್ಪಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.