ನವದೆಹಲಿ, ಏ. 30: ಮತದಾನ ಎಣಿಕೆ ಕೇಂದ್ರಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕ್ಯುಆರ್ ಕೋಡ್ (QR Code) ಆಧಾರಿತ ಗುರುತು ವ್ಯವಸ್ಥೆಯನ್ನು ಚುನಾವಣಾ ಆಯೋಗವು (Election Commission of India) ಪರಿಚಯಿಸಿದೆ. ಈ ಹೊಸ ಕ್ರಮದ ಮೂಲಕ ಅಧಿಕಾರಿಗಳು ಮತ್ತು ಸಿಬ್ಬಂದಿಯ ಗುರುತನ್ನು ತಕ್ಷಣ ಪರಿಶೀಲಿಸಲು ಸಾಧ್ಯವಾಗುತ್ತದೆ. ಅಲ್ಲದೆ ಅನಧಿಕೃತ ಪ್ರವೇಶವನ್ನು ತಡೆಯಲು ಸಹಕಾರಿಯಾಗುತ್ತದೆ. ಚುನಾವಣೆ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ದಿಸೆಯಲ್ಲಿ ಇದು ಪ್ರಮುಖ ಹೆಜ್ಜೆ ಎನಿಸಿಕೊಂಡಿದೆ.
ಮತ ಎಣಿಕೆ ಕೇಂದ್ರಗಳಿಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವುದನ್ನು ತಡೆಯಲು, ಭಾರತೀಯ ಚುನಾವಣಾ ಆಯೋಗವು (ಇಸಿಐ) ಇಸಿನೆಟ್‌ನಲ್ಲಿ ಕ್ಯುಆರ್ ಕೋಡ್ ಆಧಾರಿತ ಭಾವಚಿತ್ರದ ಗುರುತಿನ ಚೀಟಿ ಮಾದರಿ ಪರಿಚಯಿಸಿದೆ.
ಅಸ್ಸಾಂ, ಕೇರಳಂ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯ ವಿಧಾನಸಭಾ ಚುನಾವಣೆಗಳ ಮತ್ತು 5 ರಾಜ್ಯಗಳ 7 ಎ.ಸಿ.ಗಳಲ್ಲಿನ ಉಪಚುನಾವಣೆಗಳ ಮತ ಎಣಿಕೆ ಮೇ 4ರಂದು ನಡೆಯಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಮತ ಎಣಿಕೆಯಿಂದ ಪ್ರಾರಂಭಿಸಿ ಈ ಕ್ಯುಆರ್ ಕೋಡ್ ಆಧಾರಿತ ಗುರುತು ವ್ಯವಸ್ಥೆಯನ್ನು ಭವಿಷ್ಯದ ಎಲ್ಲ ಸಾರ್ವತ್ರಿಕ ಮತ್ತು ಲೋಕಸಭಾ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ವಿಸ್ತರಿಸಲಾಗುವುದು ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಕಾರಿನಲ್ಲಿ ಪತ್ತೆಯಾಯ್ತು ಎರಡು ಎಲೆಕ್ಟ್ರಾನಿಕ್ ಮತ ಯಂತ್ರ; ಚುನಾವಣಾ ಆಯೋಗ ಹೇಳಿದ್ದೇನು?
ಕಳೆದೊಂದು ವರ್ಷದಿಂದ ಭಾರತ ಚುನಾವಣಾ ಆಯೋಗವು ತೆಗೆದುಕೊಂಡ 30ಕ್ಕೂ ಹೆಚ್ಚು ಉಪಕ್ರಮಗಳ ಮುಂದುವರಿಕೆಯ ಭಾಗ ಇದಾಗಿದೆ. ಇದೀಗ ಬಿ.ಎಲ್.ಒ.ಗಳಿಗೆ ಪ್ರಮಾಣೀಕೃತ ಕ್ಯುಆರ್ ಕೋಡ್ ಆಧಾರಿತ ಭಾವಚಿತ್ರದ ಗುರುತು ಚೀಟಿ ಪರಿಚಯಿಸಲಾಗಿದೆ.
ಎಣಿಕೆ ಕೇಂದ್ರಗಳಲ್ಲಿ ಗುರುತಿನ ಪರಿಶೀಲನೆಗಾಗಿ ಮೂರು ಹಂತದ ಭದ್ರತಾ ಕಾರ್ಯವಿಧಾನವನ್ನು ಸೂಚಿಸಲಾಗಿದೆ. ಮೊದಲ ಮತ್ತು ಎರಡನೇ ಹಂತಗಳಲ್ಲಿ ಆರ್.ಒ. ನೀಡಿದ ಭಾವಚಿತ್ರದ ಗುರುತಿನ ಚೀಟಿಗಳನ್ನು ಹಸ್ತಚಾಲಿತವಾಗಿ ಪರಿಶೀಲಿಸಲಾಗುತ್ತದೆ. ಎಣಿಕೆ ಸಭಾಂಗಣದ ಬಳಿಯ ಮೂರನೇ ಮತ್ತು ಅತ್ಯಂತ ಒಳಗಿನ ಭದ್ರತಾ ಸುತ್ತುವರಿದ ಜಾಗದಲ್ಲಿ, ಕ್ಯುಆರ್ ಕೋಡ್ ತಪಾಸಣೆ ಮೂಲಕ ಯಶಸ್ವಿ ಪರಿಶೀಲನೆಯ ನಂತರವೇ ಪ್ರವೇಶವನ್ನು ಅನುಮತಿಸಲಾಗುತ್ತದೆ.
ಯಾರಿಗೆಲ್ಲ ಅನ್ವಯ?
ಹೊಸ ಕ್ಯುಆರ್ ಕೋಡ್ ಆಧಾರಿತ ಭಾವಚಿತ್ರದ ಗುರುತಿನ ಚೀಟಿ ನಿಯಮವು ಎಣಿಕೆ ಕೇಂದ್ರಗಳು ಮತ್ತು ಸಭಾಂಗಣಗಳಿಗೆ ಪ್ರವೇಶಿಸಲು ಭಾರತೀಯ ಚುನಾವಣಾ ಆಯೋಗ(ಇಸಿಐ)ದಿಂದ ಅಧಿಕಾರ ಪಡೆದ ವ್ಯಕ್ತಿಗಳ ವಿವಿಧ ವರ್ಗಗಳಿಗೆ ಅನ್ವಯಿಸುತ್ತದೆ. ಇದರಲ್ಲಿ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಣಿಕೆ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಅಭ್ಯರ್ಥಿಗಳು, ಚುನಾವಣಾ ಏಜೆಂಟ್‌ಗಳು ಮತ್ತು ಎಣಿಕೆ ಏಜೆಂಟ್‌ಗಳು ಸೇರಿದ್ದಾರೆ.
ಮಾಧ್ಯಮ ಕೇಂದ್ರ
ಅಧಿಕೃತ ಮಾಧ್ಯಮ ವ್ಯಕ್ತಿಗಳ ಅನುಕೂಲಕ್ಕಾಗಿ ಪ್ರತಿ ಎಣಿಕೆ ಕೇಂದ್ರದಲ್ಲಿನ ಎಣಿಕೆ ಸಭಾಂಗಣಗಳ ಬಳಿ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗುವುದು. ಆಯೋಗದ ಅಸ್ತಿತ್ವದಲ್ಲಿರುವ ಸೂಚನೆಗಳಿಗೆ ಅನುಗುಣವಾಗಿ ಭಾರತೀಯ ಚುನಾವಣಾ ಆಯೋಗ ನೀಡಿದ ಅಧಿಕಾರ ಪತ್ರಗಳ ಆಧಾರದ ಮೇಲೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ಮುಂದುವರಿಸಲಾಗುತ್ತದೆ.
ದಳಪತಿ ವಿಜಯ್‌ಯ ಟಿವಿಕೆಗೆ ‘ಸೀಟಿ’, ಕಮಲ್ ಹಾಸನ್‌ನ ಎಂಎನ್‌ಎಂಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ನೀಡಿದ ಚುನಾವಣಾ ಆಯೋಗ
ಈ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲು ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ತರಬೇತಿ ಪಡೆದ ಸಿಬ್ಬಂದಿಯನ್ನು ಗೊತ್ತುಪಡಿಸಿದ ಪರಿಶೀಲನಾ ಕೇಂದ್ರಗಳಲ್ಲಿ ತಡೆರಹಿತ ಮತ್ತು ಸುರಕ್ಷಿತ ಪ್ರವೇಶ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಎಣಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಭದ್ರತೆ ಮತ್ತು ದಕ್ಷತೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯಲು ಎಲ್ಲ ಮುಖ್ಯ ಚುನಾವಣಾ ಅಧಿಕಾರಿಗಳು, ಜಿಲ್ಲಾ ಚುನಾವಣಾ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶಿಸಲಾಗಿದೆ.