ಪಟನಾ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಯಾದವ್ (Lalu Prasad Yadav) ಅವರ ಪುತ್ರಿ ರೋಹಿಣಿ ಆಚಾರ್ಯ (Rohini Acharya) ಶನಿವಾರ ರಾಜಕೀಯ ತೊರೆದು ತಮ್ಮ ಕುಟುಂಬವನ್ನು ತ್ಯಜಿಸಿರುವುದಾಗಿ ಘೋಷಿಸಿದರು. ಮೊನ್ನೆಯಷ್ಟೇ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Election) ಆರ್‌ಜೆಡಿ ಹೀನಾಯ ಸೋಲನ್ನು ಅನುಭವಿಸಿತು. 243 ಸದಸ್ಯರ ವಿಧಾನಸಭೆಯಲ್ಲಿ ಕೇವಲ 25 ಸ್ಥಾನಗಳನ್ನು ಗೆದ್ದಿತು.
ಆರ್‌ಜೆಡಿ ಸಂಸದ ಸಂಜಯ್ ಯಾದವ್ ಅವರು ಕೇಳಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಸಂಸದ ಸಂಜಯ್ ಅವರು ರೋಹಿಣಿ ಆಚಾರ್ಯ ಅವರ ಸಹೋದರ ತೇಜಸ್ವಿ ಯಾದವ್ ಅವರ ಆಪ್ತ ಸಹಾಯಕರೂ ಆಗಿದ್ದಾರೆ. ಈ ರೀತಿ ಮಾಡಲು ಸಂಜಯ್ ತನ್ನನ್ನು ಕೇಳಿದ್ದರು ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ರಮೀಜ್ ನೆಮತ್ ಖಾನ್ ಎಂಬವರ ಹೆಸರನ್ನೂ ಅವರು ಉಲ್ಲೇಖಿಸಿದ್ದಾರೆ.
ರೋಹಿಣಿ ಆಚಾರ್ಯ ಮಾಡಿದ ಆರೋಪಗಳ ನಂತರ ಬೆಳಕಿಗೆ ಬಂದ ಈ ವ್ಯಕ್ತಿ ಯಾರು? ಈ ಹೆಸರು ಮೊದಲು ಮಾಧ್ಯಮಗಳಲ್ಲಿ ಅಥವಾ ಬಿಹಾರ ರಾಜಕೀಯದಲ್ಲಿ ಕಾಣಿಸಿಕೊಂಡಿರಲಿಲ್ಲ. ರಮೀಜ್ ನೆಮತ್ ಖಾನ್ ಅವರು ತೇಜಸ್ವಿ ಯಾದವ್ ಅವರ ಹಳೆಯ ಸ್ನೇಹಿತ ಮತ್ತು ಅವರ ಪ್ರಮುಖ ತಂಡದ ಭಾಗವಾಗಿದ್ದಾರೆ ಎಂದು ತಿಳಿದುಬಂದಿದೆ. ಅವರ ಸ್ನೇಹ ಕ್ರಿಕೆಟ್ ಮೈದಾನದಿಂದ ರಾಜಕೀಯದವರೆಗೆ ವಿಸ್ತರಿಸಿತು. ಖಾನ್ ತಮ್ಮ ಸ್ನೇಹಿತ ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ಹಾಗೂ ಪ್ರಚಾರ ತಂಡಗಳನ್ನು ನೋಡಿಕೊಳ್ಳುತ್ತಾರೆ ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Tejashwi Yadav: ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟ ತೇಜಸ್ವಿ ಯಾದವ್; ಬಿಜೆಪಿ ವಿರುದ್ಧ 14 ಸಾವಿರ ಮತಗಳಿಂದ ಜಯ
ರಮೀಜ್ ನೆಮತ್ ಖಾನ್ ಯಾರು?
ಉತ್ತರ ಪ್ರದೇಶದ ನಿವಾಸಿಯಾದ ರಮೀಜ್ ನೆಮತ್ ಖಾನ್, ಬಲರಾಂಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ರಿಜ್ವಾನ್ ಜಹೀರ್ ಅವರ ಅಳಿಯ. ರಮೀಜ್ ನೆಮತ್ ಖಾನ್ ಅವರ ಮಾವ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಎರಡು ಬಾರಿ ಸಂಸದರಾಗಿ ಮತ್ತು ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಯಿಂದ ಸ್ಪರ್ಧಿಸಿದ್ದರು. ಅವರು ಒಮ್ಮೆ ಸ್ವತಂತ್ರ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು.
ರಿಜ್ವಾನ್ ಜಹೀರ್ ಒಂದು ಹಂತದಲ್ಲಿ ಉತ್ತರ ಪ್ರದೇಶದ ಅತ್ಯಂತ ಕಿರಿಯ ಶಾಸಕರಾಗಿದ್ದರು. ರಮೀಜ್ ನೆಮತ್ ಖಾನ್ ಅವರ ಪತ್ನಿ ಜೀಬಾ ರಿಜ್ವಾನ್ ತುಳಸಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅವರು ಎರಡು ಬಾರಿ ಗೆಲ್ಲಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಟಿಕೆಟ್‌ನಲ್ಲಿ ಮತ್ತು ಜೈಲಿನಲ್ಲಿದ್ದಾಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2021 ರಲ್ಲಿ ತುಳಸಿಪುರದಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಮೀಜ್ ನೆಮತ್ ಖಾನ್ ಪ್ರಕರಣವನ್ನು ಎದುರಿಸಿದ್ದರು. ಅವರ ವಿರುದ್ಧದ ಆರೋಪದಲ್ಲಿ ಅವರು ಕಾಂಗ್ರೆಸ್ ನಾಯಕ ದೀಪಂಕರ್ ಸಿಂಗ್ ಮತ್ತು ಅವರ ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಅವರ ಮೇಲಿತ್ತು.
ಇನ್ನು 2022 ರಲ್ಲಿ, ತುಳಸಿಪುರ ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ಫಿರೋಜ್ ಪಪ್ಪು ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪಿತೂರಿ ಆರೋಪದ ಮೇಲೆ ರಮೀಜ್ ನೆಮತ್ ಖಾನ್, ಅವರ ಪತ್ನಿ, ಮಾವ ರಿಜ್ವಾನ್ ಜಹೀರ್ ಮತ್ತು ಇತರ ಮೂವರನ್ನು ಬಂಧಿಸಲಾಯಿತು. ರಮೀಜ್ ನೇಮತ್ ಖಾನ್ ಅವರಿಗೆ ಹಲವಾರು ಪ್ರಕರಣಗಳಲ್ಲಿ ಜಾಮೀನು ದೊರೆತಿದ್ದು, ಕೆಲವು ಪ್ರಕರಣಗಳು ಬಾಕಿ ಇವೆ. ಬಲರಾಂಪುರದಲ್ಲಿ ಒಂಭತ್ತು ಮತ್ತು ಕೌಶಂಬಿಯಲ್ಲಿ ಎರಡು ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ.
ರಮೀಜ್ ನೆಮತ್ ಖಾನ್ ಎದುರಿಸುತ್ತಿರುವ ಇತರ ಗಂಭೀರ ಆರೋಪಗಳಲ್ಲಿ 2023ರಲ್ಲಿ ನಡೆದ ಮತ್ತೊಂದು ಕೊಲೆ ಪ್ರಕರಣವೂ ಸೇರಿದೆ. ಪ್ರತಾಪ್‌ಗಢ ಗುತ್ತಿಗೆದಾರ ಶಕೀಲ್ ಖಾನ್ ಹತ್ಯೆ ಪ್ರಕರಣದಲ್ಲಿ ಖಾನ್ ವಿರುದ್ಧ ಆರೋಪವಿದೆ. ಕುಶಿನಗರದ ರೈಲ್ವೆ ಹಳಿಗಳ ಬಳಿ ಶಕೀಲ್ ಶವ ಪತ್ತೆಯಾಗಿತ್ತು. ಗುತ್ತಿಗೆದಾರರ ಪತ್ನಿ ಸಲ್ಲಿಸಿದ ದೂರಿನ ಆಧಾರದ ಮೇಲೆ ರಮೀಜ್ ನೆಮತ್ ಖಾನ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಅದೇ ವರ್ಷ, ಯುಪಿ ಸರ್ಕಾರವು ರಮೀಜ್ ನೆಮತ್ ಖಾನ್ ಹೆಸರಿನಲ್ಲಿ ಖರೀದಿಸಿದ ಸುಮಾರು 4.75 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡಿತು. ಜುಲೈ 2024 ರಲ್ಲಿ ಗ್ಯಾಂಗ್‌ಸ್ಟರ್ಸ್ ಕಾಯ್ದೆಯಡಿ ಖಾನ್‍ನನ್ನು ಬಂಧಿಸಲಾಯಿತು. ಈ ವರ್ಷದ ಏಪ್ರಿಲ್‌ನಲ್ಲಿ ಜಾಮೀನು ನೀಡಲಾಯಿತು. ಸದ್ಯ, ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ.
ರಮೀಜ್ ನೆಮತ್ ಖಾನ್ ಮಥುರಾ ರಸ್ತೆಯ ದೆಹಲಿ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿ ಜಾಮಿಯಾದಿಂದ ಬಿಎ ಮತ್ತು ಎಂಬಿಎ ಪದವಿ ಪಡೆದರು. ಅವರು ಬಾಲ್ಯದಿಂದಲೂ ಕ್ರಿಕೆಟ್‍ನಲ್ಲಿ ಆಸಕ್ತಿ ಹೊಂದಿದ್ದರು. ದೆಹಲಿ ಮತ್ತು ಜಾರ್ಖಂಡ್‌ನಲ್ಲಿ ವಿವಿಧ ವಯೋಮಾನದ ತಂಡಗಳಿಗೆ ಆಡುತ್ತಿದ್ದಾರೆ. ಅವರು 2008-09ರಲ್ಲಿ ಜಾರ್ಖಂಡ್ ಅಂಡರ್-22 ತಂಡದ ನಾಯಕರಾಗಿದ್ದರು. ಈ ಸಮಯದಲ್ಲಿ, ಅವರು ತೇಜಸ್ವಿ ಯಾದವ್ ಅವರೊಂದಿಗೆ ಸ್ನೇಹ ಬೆಳೆಸಿಕೊಂಡರು. ಅದು ನಂತರ ಅವರ ರಾಜಕೀಯ ಜೀವನಕ್ಕೆ ಕಾರಣವಾಯಿತು. 2016 ರಲ್ಲಿ, ಅವರು ಆರ್‌ಜೆಡಿಗೆ ಸೇರಿದರು. ಅಂದಿನಿಂದ ತೇಜಸ್ವಿ ಯಾದವ್ ಅವರ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.