ನವದೆಹಲಿ: ದೇಶಕ್ಕೆ ಬಲಿದಾನ ಮಾಡಿದವರ ಬಗ್ಗೆ ಹಲವಾರು ಚಿತ್ರಗಳು ಈಗಾಗಲೇ ತೆರೆ ಮೇಲೆ ಬಂದಿದೆ. ಅವುಗಳ ಸಾಲಿನಲ್ಲಿ ಇದೀಗ ಧುರುಂಧರ್ (Ravindra Kaushik) ಮತ್ತು ಧುರಂಧರ್: ದಿ ರಿವೆಂಜ್ ಸಿನಿಮಾವೂ (Dhurandhar) ಸೇರಿದೆ. ಭಾರತೀಯನೊಬ್ಬ ಶತ್ರು ದೇಶದಲ್ಲಿಯೇ ಬೇಹುಗಾರಿಕೆ ನಡೆಸಿ ದೇಶಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ ಕಥಾ (Raw) ಹಂದರವನ್ನು ಚಿತ್ರ ಒಳಗೊಂಡಿದೆ. ನಿಜವಾಗಿಯೂ ಇದೇ ಕಥೆಯನ್ನು ಹೋಲುವ ಭಾರತೀಯನೊಬ್ಬ ಮಾಡಿದ ಮಹಾತ್ಯಾಗದ ಕತೆ ಕೇಳಿದರೆ ಪ್ರತಿಯೊಬ್ಬ ಭಾರತೀಯನ ಕಣ್ಣಂಚಲ್ಲಿ ನೀರು ಬರುತ್ತದೆ.
ಹೌದು ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿ ಕೊಟ್ಟ ಬ್ಲ್ಯಾಕ್ ಟೈಗರ್ ರವೀಂದ್ರ ಕೌಶಿಕ್ ಕಥೆಯಿದು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಯುವಕ ಇಡೀ ಪಾಕಿಸ್ತಾನ ಸೇನೆಯನ್ನು ಯಾಮಾರಿಸಿ ಭಾರತಕ್ಕಾಗಿ ಗುಪ್ತವಾಗಿ ಮಾಹಿತಿ ಕಳಿಸಿಕೊಟ್ಟ ಎಂದರೆ ನಂಬಲಸಾಧ್ಯ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಏಪ್ರಿಲ್ 11, 1952 ರಂದು ಜನಿಸಿದ ರವೀಂದ್ರ ಕೌಶಿಕ್ ಬಾಲ್ಯದಿಂದಲೂ ಸೇನಾ ವಾತಾವರಣದಲ್ಲಿಯೇ ಬೆಳೆದವರು. ತಂದೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ದೇಶಭಕ್ತಿ ಅವರ ರಕ್ತದಲ್ಲಿಯೇ ಇತ್ತು. ಗಂಗಾನಗರದ ಎಸ್‌ಡಿ ಬಿಹಾನಿ ಕಾಲೇಜಿನಿಂದ ವಾಣಿಜ್ಯದಲ್ಲಿ ಪದವಿ ಪಡೆಯುವಾಗ ಕೌಶಿಕ್ ಅವರು ಬೆಳೆಸಿಕೊಂಡ ರಂಗಭೂಮಿಯ ಹವ್ಯಾಸ ಅವರನ್ನು ರಾ (ಗುಪ್ತಚರ ಇಲಾಖೆ) ಗುರುತಿಸುವಂತಾಯಿತು.
ಅದು 1973 ರ ಸಮಯ ಕೌಶಿಕ್ , ಲಕ್ನೋದಲ್ಲಿ ನಡೆದ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಚಾರಣೆಗೆ ಒಳಗಾಗುತ್ತಿರುವ ಭಾರತೀಯ ಸೈನಿಕನ ಏಕಪಾತ್ರಾಭಿನಯವನ್ನು ನಿರ್ವಹಿಸಿದ್ದರು. ಅವರ ಚಾಣಾಕ್ಷತೆಯನ್ನು ನೋಡಿದ ರಾ ಅಧಿಕಾರಿಗಳು ನಿಬ್ಬೆರಗಾಗಿದ್ದರು. ಅಧಿಕಾರಿಗಳು 21 ವರ್ಷದ ರವೀಂದ್ರ ಕೌಶಿಕ್‌ಗೆ ದೊಡ್ಡ ಆಫರ್ ಅನ್ನು ನೀಡಿದ್ದರು. ದೇಶಕ್ಕಾಗಿ ನೀನು ಬದುಕುತ್ತೀಯಾ ಎಂದು ನೇರವಾಗಿ ಕೌಶಿಕ್ ಬಳಿ ಕೇಳಿದ್ದರು. ಒಂದು ಕ್ಷಣವೂ ಯೋಚಿಸದ ರವೀಂದ್ರ ಕೌಶಿಕ್ ಆಗ್ತೀನಿ ಎಂದು ಉತ್ತರ ನೀಡಿದ್ದರಂತೆ. ಬಳಿಕ ದೆಹಲಿಯಲ್ಲಿ ಅವರಿಗೆ ಎರಡು ವರ್ಷಗಳ ಕಠಿಣ ಟ್ರೇನಿಂಗ್ ಪ್ರಾರಂಭವಾಗಿತ್ತು. ನಿವೃತ್ತ ರಾ ಅಧಿಕಾರಿಯೊಬ್ಬರು ತಮ್ಮ ಬಯೋಗ್ರಫಿಯಲ್ಲಿ ಕೌಶಿಕ್ ಬಗ್ಗೆ ಉಲ್ಲೇಖಿಸಿದ್ದು ಆತನ ಕಣ್ಣಲ್ಲಿ ಮಿಂಚು ಇತ್ತು ಎಂದು ಉಲ್ಲೇಖಿಸಿದ್ದರು.
ರವೀಂದ್ರ ಕೌಶಿಕ್‌ನಿಂದ ನಬಿ ಅಹ್ಮದ್ ಆಗಿ ಬದಲು!
ಇಸ್ಲಾಮಿಕ್ ತತ್ವಗಳನ್ನು ಸೂಕ್ಷ್ಮವಾಗಿ ಅಭ್ಯಸಿಸುತ್ತಿದ್ದ ಕೌಶಿಕ್ ತಮ್ಮ ಹೆಸರನ್ನು ಸಹ ಬದಲಿಸಿಕೊಂಡಿದ್ದರು. ರವೀಂದ್ರ ಕೌಶಿಕ್‌ನಿಂದ ನಬಿ ಅಹ್ಮದ್ ಆಗಿ ಬದಲಾಗಿದ್ದರು. ಹಿಂದೂ ಸಂಸ್ಕೃತಿಯಿಂದ ಬಂದ ಅವರಿಗೆ ಪಾಕಿಸ್ತಾನಿ ಉರ್ದು ಕಲಿಯುವುದೇ ದೊಡ್ಡ ಸವಾಲಾಗಿತ್ತು. ಛಲ ಬಿಡದೆ ಕೆಲವೇ ದಿನಗಳಲ್ಲಿ ಕರಗತ ಮಾಡಿಕೊಂಡಿದ್ದರು. 1975 ರವೀಂದ್ರ ಕೌಶಿಕ್ ಅವರ ಜೀವನ ಮಹತ್ವದ ಘಟ್ಟ . ನಬಿ ಅಹ್ಮದ್ ಆಗಿ ಅವರು ಪಾಕಿಸ್ತಾನಕ್ಕೆ ಕಾಲಿಟ್ಟರು. ಕರಾಚಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಗೆ ಸೇರಿಕೊಂಡರು. ಬಳಿಕ ಪಾಕಿಸ್ತಾನ ಆರ್ಮಿಗೆ ಸೇರಿ ಭಾರತದ ಪರ ಬೇಹುಗಾರಿಕೆ ಪ್ರಾರಂಭಿಸಿದರು. 1979 ರಿಂದ 1983ರವರೆಗೆ, ಪಾಕಿಸ್ತಾನ ಸೇನೆಯಲ್ಲೇ ಇದ್ದು ನವದೆಹಲಿಗೆ ಮಾಹಿತಿಗಳನ್ನು ಕಳಿಸುತ್ತದ್ದರು. ಪಾಕಿಸ್ತಾನ ಸೇನೆಯ ಪ್ರತಿಯೊಂದು ಗೌಪ್ಯ ಮಾಹಿತಿ ಭಾರತಕ್ಕೆ ದೊರಕುತ್ತಿತ್ತು.
ಪಾಕಿಸ್ತಾನದಲ್ಲಿ ಅವರ ಹಿನ್ನೆಲೆ ಎಷ್ಟು ಮರೆಯಾಗಿತ್ತೆಂದರೆ ಪಾಕಿಸ್ತಾನಿ ಯುವತಿಯನ್ನೇ ಪ್ರೀತಿಸಿ ಮದುವೆಯಾಗಿದ್ದರು. ಆಕೆಗೂ ಕೌಶಿಕ್ ಬೇಹುಗಾರಿಕೆ ನಡೆಸುತ್ತಿರುವುದು ತಿಳಿದಿರಲಿಲ್ಲ. ಪಂಜಾಬ್ ವಲಯದಲ್ಲಿನ ಪಾಕಿಸ್ತಾನಿ ಪಡೆಗಳ ಚಲನವಲನಗಳ ಕುರಿತಾದ ಅವರ ವರದಿಗಳು ಮತ್ತು ಕಹುತಾದಲ್ಲಿನ ಪರಮಾಣು ಸೌಲಭ್ಯದ ಕುರಿತಾದ ಸೂಕ್ಷ್ಮ ದತ್ತಾಂಶಗಳನ್ನೇ ಭಾರತಕ್ಕೆ ಒದಗಿಸಿದ್ದೇ ಇದೇ ರವೀಂದ್ರ ಕೌಶಿಕ್. ಇವರ ಕಾರ್ಯವೈಖರಿಯನ್ನು ನೋಡಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಬ್ಲಾಕ್ ಟೈಗರ್ ಎಂಬ ಬಿರುದನ್ನು ನೀಡಿದ್ದರು.
ಅದು 1983ರ ಸಮಯ ಕೌಶಿಕ್ ಎಂದಿನಂತೆ ಪಾಕ್ ಸೇನೆಯ ಎಲ್ಲಾ ಮಾಹಿತಿಯನ್ನು ಒದಗಿಸುತ್ತಿದ್ದರು. ಆದರೆ ಕಿರಿಯ ಅಧಿಕಾರಿಯ ಒಂದೇ ತಪ್ಪು ಅವರ ಎಂಟು ವರ್ಷದ ಪರಿಶ್ರಮವನ್ನೇ ವ್ಯರ್ಥವಾಗಿಸಿತು. ರವೀಂದ್ರ ಕೌಶಿಕ್ ಸಂಪರ್ಕಿಸಲು ರಾ ಅಧಿಕಾರಿಗಳು ಇನ್ಯತ್ ಮಸೀಹ್ ಎಂಬ ಏಜೆಂಟ್ ಒಬ್ಬನನ್ನು ಇಸ್ಲಾಮಾಬಾದ್‌ಗೆ ಕಳುಹಿಸಿದ್ದರು. ಆತ ಪಾಕಿಸ್ತಾನದ ರಾ ಅಧಿಕಾರಿಗಳ ಕೈಗೆ ಸಿಕ್ಕಿಬಿದಿದ್ದ. ಆತ ರವೀಂದ್ರ ಕೌಶಿಕ್ ಹೆಸರನ್ನು ಹೇಳಿದ್ದ. ಪಾಕ್ ಅಧಿಕಾರಿಗಳು ರವೀಂದ್ರನನ್ನು ಬಂಧಿಸಿದರು. ಸಿಯಾಲ್‌ಕೋಟ್‌ನ ಚಿತ್ರಹಿಂಸಾ ಕೇಂದ್ರದಲ್ಲಿ ಅವರಿಗೆ ಚಿತ್ರಹಿಂಸೆಯನ್ನು ನೀಡಿದರು. ಆದರೂ ಕೌಶಿಕ್ ತನ್ನ ನಿಜವಾದ ಹೆಸರನ್ನು ಹೇಳಿರಲಿಲ್ಲ. 1985ರಲ್ಲಿ ಪಾಕಿಸ್ತಾನದ ಮಿಲಿಟರಿ ಮರಣದಂಡನೆ ಶಿಕ್ಷೆಯನ್ನು ರವೀಂದ್ರ ಕೌಶಿಕ್‌ಗೆ ನೀಡಿತ್ತು. ಬಳಿಕ ಅದನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿತು.
ಧುರಂಧರ್ ಯಾರು? ಸಿನಿಮಾ ಹೇಗಿದೆ? ಇಲ್ಲಿದೆ ಸಿನಿಮಾ ವಿಮರ್ಶೆ
ಭಾರತ ಮೌನವಹಿಸಿದ್ಯಾಕೆ?
ತಮ್ಮದೇ ರಾ ಏಜೆಂಟ್ ಪಾಕಿಸ್ತಾನದಲ್ಲಿ ಸಿಕ್ಕಿ ಬಿದ್ದ ಬಳಿಕ ಭಾರತ ಸರ್ಕಾರ ಮೌನವಹಿಸಿತ್ತು. ರವೀಂದ್ರ ಕೌಶಿಕ್ ಬಿಡುಗಡೆಗೆ ಅಷ್ಟಾಗಿ ಯಾವುದೇ ಪ್ರಯತ್ನಗಳು ಬಂದಿರಲಿಲ್ಲ. ರಾಜತಾಂತ್ರಿಕ ಕಾರಣಗಳನ್ನು ಭಾರತ ಸರ್ಕಾರ ನೀಡಿತ್ತು. ಜೈಲಿನಿಂದಲೇ ರವೀಂದ್ರ ಕೌಶಿಕ್ ಕೆಲ ಪತ್ರಗಳನ್ನು ತಮ್ಮ ಕುಟುಂಬಕ್ಕೆ ಬರೆದಿದ್ದರು. ಅದರದಲ್ಲಿ ಕೆಲ ಸಾಲುಗಳು ಎಂತಹ ಕಲ್ಲು ಹೃದಯದವರನ್ನೂ ಕರುಗುವಂತೆ ಮಾಡುತ್ತದೆ. ಭಾರತದಂತಹ ಮಹಾನ್ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವವರಿಗೆ ಸಿಗುವುದು ಇದೇನಾ? ಎಂದು ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೇ ಅಮೆರಿಕ್ಕೆ ಕೆಲಸ ಮಾಡಿದ್ದರೆ ನಾಲ್ಕು ದಿನದಲ್ಲಿ ಹೊರಗಿರುತ್ತಿದೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದರು. 26 ವರ್ಷ ದೇಶಕ್ಕಾಗಿ ದುಡಿದ ರವೀಂದ್ರ ಕೌಶಿಕ್‌ಗೆ ಕೊನೆಗೂ ನ್ಯಾಯ ಸಿಗಲೇ ಇಲ್ಲ. ಇಂದಿಗೂ ಅವರ ತ್ಯಾಗ, ಶೌರ್ಯ ಅಜರಾಮರ.