ದೆಹಲಿ, ಜು. 28: ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ದೆಹಲಿ-ಅಮೃತಸರ-ಕಟರ ಎಕ್ಸ್‌ಪ್ರೆಸ್ ವೇಯದ್ದು (Delhi-Amritsar-Katra Expressway) ಎನ್ನಲಾದ ವಿಡಿಯೊವೊಂದು ಹರಿದಾಡುತ್ತಿದೆ. ಈ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಕಳಪೆ ಗುಣಮಟ್ಟದ ಥರ್ಮೋಕಾಲ್ ಬಳಸಲಾಗುತ್ತಿದೆ ಎಂದು ಈ ವಿಡಿಯೊದಲ್ಲಿ ಹೇಳಲಾಗುತ್ತಿದೆ. ಈ ವಿಡಿಯೊ ಮೂಲಕ ಕೇಂದ್ರ ಸರ್ಕಾರವನ್ನು, ಸರ್ಕಾರದ ನಿರ್ಮಾಣ ಕಾಮಗಾರಿಯನ್ನು ಟೀಕಿಸಲಾಗುತ್ತಿದೆ. ಅಲ್ಲದೆ ಎನ್‌ಡಿಎ, ಬಿಜೆಪಿ ವಿರೋಧಿಗಳು ಈ ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಂಡು ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಇದೀಗ ಫ್ಯಾಕ್ಟ್‌ಚೆಕ್‌ನಲ್ಲಿ (Fact Check) ಈ ವಿಡಿಯೊದ ಅಸಲಿಯತ್ತು ಬಹಿರಂಗಗೊಂಡಿದ್ದು, ಇದೊಂದು ನಕಲಿ ವಿಡಿಯೊ ಎನ್ನುವುದು ಸಾಬೀತಾಗಿದೆ. ಆ ಮೂಲಕ ಈ ದೃಶ್ಯ ಇಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸುತ್ತಿರುವವರಿಗೆ ತೀವ್ರ ಮುಖಭಂಗವಾದಂತಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ವಿಡಿಯೊದ ಬಗ್ಗೆ ಪ್ರತಿಕ್ರಿಯಿಸಿ ಇದೊಂದು ದಾರಿ ತಪ್ಪಿಸುವ ಪ್ರಯತ್ನ ಎಂದು ಸ್ಪಷ್ಟಪಡಿಸಿದೆ. ವಿಡಿಯೊದಲ್ಲಿ ತೋರಿಸಿರುವ ವಸ್ತು ಥರ್ಮೋಕಾಲ್ ಅಲ್ಲವೆಂದೂ ಅದನ್ನು ತಪ್ಪಾಗಿ ವಿವರಿಸಲಾಗಿದೆ ಎಂದು ತಿಳಿಸಿದೆ.
ಇಲ್ಲಿದೆ ಫ್ಯಾಕ್ಟ್‌ಚೆಕ್ ವರದಿ:
NHAI ಹೇಳಿದ್ದೇನು?
ಎನ್‌ಎಚ್‌ಎಐ ಪ್ರಕಾರ, ವಿಡಿಯೊದಲ್ಲಿ ತೋರಿಸುತ್ತಿರುವ ಬಿಳಿಯಾದ ವಸ್ತು ಥರ್ಮೋಕಾಲ್ ಅಲ್ಲ. ಬದಲಾಗಿ ಅದು ಹೊಸ ರೀತಿಯ, ವಿಶೇಷ ಕಂಪ್ರೆಸಿಬಲ್ ಫಿಲ್ಲರ್ (Compressible filler). ಇದನ್ನು ಕ್ರ್ಯಾಶ್ ಬಾರಿಯರ್ ಮತ್ತು ತಡೆಗೋಡೆ ಬಳಿ ಬಳಸಲಾಗುತ್ತದೆ. ಭಾರತೀಯ ರೋಡ್ ಕಾಂಗ್ರೆಸ್ (IRC) ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿಗದಿಪಡಿಸಿದ ಮಾನದಂಡಗಳ ಪ್ರಕಾರವೇ ಇದನ್ನು ಉಪಯೋಗಿಸಲಾಗುತ್ತಿದೆ. ತಾಪಮಾನ ಬದಲಾವಣೆಗಳಿಂದ ಉಂಟಾಗುವ ಕಾಂಕ್ರೀಟ್ ರಚನೆಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆಗೆ ಸಾಕಷ್ಟು ಸ್ಥಳಾವಕಾಶ ಒದಗಿಸಲು ಇದು ನೆರವಾಗುತ್ತದೆ.
ದೆಹಲಿ ದಾಳಿ ಬೆನ್ನಲ್ಲೇ 20,000 ಮುಸ್ಲಿಂ ಸೈನಿಕರು ರಾಜೀನಾಮೆ ನೀಡಿದ್ರಾ? ವೈರಲ್ ಸುದ್ದಿಯ ಅಸಲಿಯತ್ತೇನು?
ತಜ್ಞರ ಪ್ರತಿಕ್ರಿಯೆ
ಈ ಬಗ್ಗೆ ಎಂಜಿನಿಯರ್‌ಗಳೂ ಪ್ರತಿಕ್ರಿಯಿಸಿದ್ದು, ಉದ್ದವಾದ ಪ್ಯಾರಪೆಟ್‌ಗಳು ಮತ್ತು ಕಾಂಕ್ರೀಟ್ ರಚನೆಗಳಲ್ಲಿ ಇದನ್ನು ಬಳಸಲಾಗುತ್ತದೆ ಎಂದಿದ್ದಾರೆ. ಶೀತ ಮತ್ತು ಶಾಖದಿಂದಾಗಿ ಸಿಮೆಂಟ್ ಮತ್ತು ಕಾಂಕ್ರೀಟ್ ರಚನೆಗಳು ಹಿಗ್ಗುತ್ತವೆ ಮತ್ತು ಕುಗ್ಗುತ್ತದೆ. ಈ ಪ್ರಕ್ರಿಯೆಗೆ ಸಾಕಷ್ಟು ಸ್ಥಳಾವಕಾಶವಿಲ್ಲದಿದ್ದರೆ ರಚನೆಯಲ್ಲಿ ಬಿರುಕು ಉಂಟಾಗಬಹುದು. ಈ ಸಮಸ್ಯೆಯನ್ನು ತಪ್ಪಿಸಲು ಈ ವಿಶೇಷ ಕಂಪ್ರೆಸಿಬಲ್ ಫಿಲ್ಲರ್ ಬಳಸಲಾಗುತ್ತದೆ. ಇದು ಸೇತುವೆ ಮತ್ತು ಪ್ಯಾರಪೆಟ್ ಅನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿರಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇದು ಸಂಪೂರ್ಣವಾಗಿ ಪ್ರಮಾಣಿತ ಎಂಜಿನಿಯರಿಂಗ್ ಕಾರ್ಯವಿಧಾನವಾಗಿದ್ದು, ರಸ್ತೆಯ ಗುಣಮಟ್ಟ ಅಥವಾ ಸುರಕ್ಷತೆಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಎನ್‌ಎಚ್‌ಎಐ ಒತ್ತಿ ಹೇಳಿದೆ. ಜತೆಗೆ ಸೋಷಿಯಲ್ ಮೀಡಿಯಾದಲ್ಲಿನ ಜನರ ದಾರಿ ತಪ್ಪಿಸುವ ಅಪೂರ್ಣ ಮಾಹಿತಿಗಳನ್ನು ನಂಬದಂತೆ ಕರೆ ನೀಡಿದೆ.
ಬೆಂಗಳೂರಿನಲ್ಲಿ ನೀಟ್ ಆಕಾಂಕ್ಷಿ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬರಲು ಕಾಂಗ್ರೆಸ್ ರ‍್ಯಾಲಿ ಕಾರಣವೇ?
ಯಾವುದೇ ವಿಡಿಯೊ ಅಥವಾ ಹೇಳಿಕೆಯನ್ನು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಅಪೂರ್ಣ ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಹರಿಯಬಿಡುವ ಇಂತಹ ವಿಡಿಯೊಗಳು ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸಬಹುದು ಎಂದು ಹೇಳಿದೆ. ಕೇಂದ್ರ ಸರ್ಕಾರದ ವಿರೋಧಿ ಬಣಗಳು ಈ ದಾರಿ ತಪ್ಪಿಸುವ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.