Fact Check: ದೆಹಲಿ ದಾಳಿ ಬೆನ್ನಲ್ಲೇ 20,000 ಮುಸ್ಲಿಂ ಸೈನಿಕರು ರಾಜೀನಾಮೆ ನೀಡಿದ್ರಾ? ವೈರಲ್ ಸುದ್ದಿಯ ಅಸಲಿಯತ್ತೇನು? ಇಲ್ಲಿದೆ ವಿವರ
Delhi Blast: ದೆಹಲಿ ದಾಳಿ ಬೆನ್ನಲ್ಲೇ 20,000 ಮುಸ್ಲಿಂ ಸೈನಿಕರಿಂದ ರಾಜೀನಾಮೆ ಸ್ವೀಕರಿಸಿದ್ದೇವೆ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆಂದು ಪ್ರತಿಪಾದಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ನಿಜವೇ? ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದ್ದೇನು? ಇಲ್ಲಿದೆ ವಿವರ.
ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (ಸಂಗ್ರಹ ಚಿತ್ರ) -
ನವದೆಹಲಿ, ಜು. 22: ದೆಹಲಿ ದಾಳಿ ಬೆನ್ನಲ್ಲೇ 20,000 ಮುಸ್ಲಿಂ ಸೈನಿಕರಿಂದ ರಾಜೀನಾಮೆ ಸ್ವೀಕರಿಸಿದ್ದೇವೆ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (Upendra Dwivedi) ಹೇಳಿದ್ದಾರೆಂದು ಪ್ರತಿಪಾದಿಸುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ʼʼನಮ್ಮ ಸೈನ್ಯವು ವೃತ್ತಿಪರ ಪಡೆಯಾಗಿತ್ತು. ಆದರೆ ಈ ನಿರಂತರ ಕೇಸರೀಕರಣವು ನಮ್ಮ ನೈತಿಕತೆಯನ್ನು ನಾಶ ಮಾಡಿದೆ. ಯಾವುದೇ ಯುದ್ಧದ ಸಂದರ್ಭದಲ್ಲಿ, ಪಂಜಾಬ್ ಸಿಖ್ಖರು ಮತ್ತು ಮುಸ್ಲಿಮರು ನಮ್ಮ ಸೈನ್ಯದ ವಿರುದ್ಧ ನಿಲ್ಲುತ್ತಾರೆ. ಏಕೆಂದರೆ ಅದಕ್ಕೆ ಕಾರಣ ನರೇಂದ್ರ ಮೋದಿ (PM Narendra Modi)ʼʼ ಎಂದು ವಿಡಿಯೊದಲ್ಲಿ ಹೇಳಲಾಗಿದೆ. ಆದರೆ ಇದು ನಿಜವಾದ ವಿಡಿಯೊವಲ್ಲ. ಎಐ ರಚಿತ ವಿಡಿಯೊ ಎನ್ನುವುದು ಫ್ಯಾಕ್ಟ್ ಚೆಕ್ ಮೂಲಕ ಸಾಬೀತು ಪಡಿಸಲಾಗಿದೆ. ಈ ಮೂಲಕ ವದಂತಿಯನ್ನು ತಳ್ಳಿ ಹಾಕಲಾಗಿದೆ.
ಭಾರತೀಯ ಸೇನೆಗೆ ಸಂಬಂಧಿಸಿದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳು ಸಹ ಮಾಜಿ ಸೇನಾ ಮುಖ್ಯಸ್ಥರ ಹೇಳಿದ್ದಾರೆ ಎನ್ನಲಾದ ಈ ಮಾತುಗಳನ್ನು ಹಂಚಿಕೊಂಡಿರಲಿಲ್ಲ. ಇದೀಗ ಇದು ತಿರುಚಿದ ವಿಡಿಯೊ ಎನ್ನುವುದು ಸ್ಪಷ್ಟವಾಗಿದೆ.
ಇಲ್ಲಿದೆ ಪೋಸ್ಟ್:
ದೆಹಲಿಯ ದಾಳಿಗಳ ಬೆನ್ನಲ್ಲೇ 20000 ಮುಸ್ಲಿಂ ಸೈನಿಕರಿಂದ ರಾಜೀನಾಮೆ ಸ್ವೀಕರಿಸಿದ್ದೇವೆ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆಂದು ಪ್ರತಿಪಾದಿಸುವ ಅಸತ್ಯದ ವೀಡಿಯೊವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.#PIBFactCheck: ಇದು AI-ಸೃಷ್ಟಿತ ಡೀಪ್ಫೇಕ್ ವೀಡಿಯೊ ಆಗಿದೆ. ನಿವೃತ್ತ ಜನರಲ್ ಉಪೇಂದ್ರ… https://t.co/X21UmAfffh
— PIB in Karnataka (@PIBBengaluru) July 22, 2026
ರಿವರ್ಸ್ ಇಮೇಜ್ ಸರ್ಚ್ ಮೂಲಕ ಈ ವಿಡಿಯೊದ ಮೂಲವನ್ನು ಪತ್ತೆಹಚ್ಚಲಾಗಿದೆ. ವೈರಲ್ ವಿಡಿಯೊದಲ್ಲಿ ಕಾಣುವ ವಾಟರ್‌ಮಾರ್ಕ್ ಹೊಂದಿರುವ ಐಎಎನ್ಎಸ್‌ನ ವಿಡಿಯೊ 2025ರ ನವೆಂಬರ್ 12ರ ಎಕ್ಸ್ ಪೋಸ್ಟ್‌ಗೆ ಸೇರಿದೆ ಎನ್ನುವುದು ತಿಳಿದುಬಂದಿದೆ. ಮೂಲ ವಿಡಿಯೊದಲ್ಲಿ ಅವರು ಜಾಗತಿಕ ಭದ್ರತೆ ಮತ್ತು ಯುದ್ಧ ತಂತ್ರಜ್ಞಾನದ ಕುರಿತು ಮಾತನಾಡಿದ್ದರು. ಕೋಮು ವಿಚಾರಗಳು ಅಥವಾ ರಾಜೀನಾಮೆಗಳ ಬಗ್ಗೆ ಅವರು ಯಾವುದೇ ಚರ್ಚೆ ನಡೆಸಿಲ್ಲ ಎಂದು ಅದಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೊಸ ವಸ್ತ್ರ ಸಂಹಿತೆಯನ್ನು ಅನಾವರಣಗೊಳಿಸಿದ ಭಾರತೀಯ ಸೇನೆ
2025ರ ನವೆಂಬರ್ 12ರಂದು ನಡೆದ ರಕ್ಷಣಾ ಸಂವಾದದಲ್ಲಿ ಅವರು ನಡೆಸಿದ ಭಾಷಣವನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು. ಜನರಲ್ ದ್ವಿವೇದಿ ಎಂದಿಗೂ ಈ ಹೇಳಿಕೆಗಳನ್ನು ನೀಡಿಲ್ಲ. ವೈರಲ್ ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಲವು ಕೆಂಪು ಧ್ವಜಗಳು ಕಂಡುಬಂದಿವೆ. ವಿರೂಪಗೊಂಡ ಟ್ಯಾಗ್ ಲಾಂಛನ ಮತ್ತು ಐಎಎನ್ಎಸ್ (IANS) ವಾಟರ್‌ಮಾರ್ಕ್ ಕಂಡು ಬಂದಿದೆ. ಅಲ್ಲದೆ ದ್ವಿವೇದಿ ಅವರ ಕೆಳ ದವಡೆಯ ಸುತ್ತಲೂ ಕಲೆ ಇದೆ. ಒಟ್ಟಾರೆಯಾಗಿ ಈ ಎಲ್ಲ ಅಂಶಗಳು ವಿಡಿಯೊವನ್ನು ಎಐ ಬಳಸಿ ರಚಿಸಲಾಗಿದೆ ಎನ್ನುವುದು ಸಾಬೀತಾಗಿದೆ.
ಸರ್ಕಾರದ ಪಿಐಬಿ ಸತ್ಯಪರಿಶೀಲನಾ ಘಟಕವು ಈ ವಿಡಿಯೊವನ್ನು ನಕಲಿ ಎಂದು ತಿಳಿಸಿದೆ. ನಿವೃತ್ತ ಸೇನಾ ಮುಖ್ಯಸ್ಥರು ಅಂತಹ ಯಾವುದೇ ಕೋಮುವಾದಿ ಹೇಳಿಕೆಗಳನ್ನು ನೀಡಿಲ್ಲ ಎಂದು ದೃಢಪಡಿಸಿದೆ. ಈ ವಿಡಿಯೊ ದ್ವಿವೇದಿ ಅವರನ್ನು ಗುರಿಯಾಗಿಸಿಕೊಂಡು ತಿರುಚಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವುದಕ್ಕಾಗಿಯೇ ಈ ವಿಡಿಯೊವನ್ನು ರಚಿಸಿರುವ ಅನುಮಾನ ಮೂಡಿದೆ.