ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂದೋರ್‌ನ 8 ವರ್ಷಗಳ ದಾಖಲೆ ಪತನ; ನವಿ ಮುಂಬೈ ಮುಡಿಗೆ ಭಾರತದ ಸ್ವಚ್ಛ ನಗರ ಕಿರೀಟ

ಸತತ ಎಂಟು ವರ್ಷಗಳಿಂದ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಅಜೇಯ ದಾಖಲೆ ಹೊಂದಿದ್ದ ಮಧ್ಯಪ್ರದೇಶದ ಇಂದೋರ್ ನಗರವನ್ನು ಹಿಂದಿಕ್ಕಿ, ಮಹಾರಾಷ್ಟ್ರದ ನವಿ ಮುಂಬೈ (Navi Mumbai) ದೇಶದ ಅತ್ಯಂತ ಸ್ವಚ್ಛ ನಗರ (Clean City) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಸತತ ಎಂಟು ವರ್ಷಗಳಿಂದ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಅಜೇಯ ದಾಖಲೆ ಹೊಂದಿದ್ದ ಮಧ್ಯಪ್ರದೇಶದ ಇಂದೋರ್ ನಗರವನ್ನು ಹಿಂದಿಕ್ಕಿ, ಮಹಾರಾಷ್ಟ್ರದ ನವಿ ಮುಂಬೈ (Navi Mumbai) ದೇಶದ ಅತ್ಯಂತ ಸ್ವಚ್ಛ ನಗರ (Clean City) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ 'ಸ್ವಚ್ಛ ಸರ್ವೇಕ್ಷಣ್ 2025-26' (Swachh Survekshan 2025-26) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವಿ ಮುಂಬೈ ಮಹಾನಗರ ಪಾಲಿಕೆಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ದೇಶಾದ್ಯಂತ 4,700 ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳು ಈ ಬಾರಿಯ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವು.

ಈ ಬಾರಿಯ ರಾಷ್ಟ್ರೀಯ ಶ್ರೇಯಾಂಕದಲ್ಲಿ ನವಿ ಮುಂಬೈ ಮೊದಲ ಸ್ಥಾನವನ್ನು ಅಲಂಕರಿಸಿದರೆ, ಗುಜರಾತ್‌ನ ವಾಣಿಜ್ಯ ನಗರಿ ಸೂರತ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಆಂಧ್ರಪ್ರದೇಶದ ವಿಜಯವಾಡ ಮೂರನೇ ಸ್ಥಾನದಲ್ಲಿದೆ. ಕಳೆದ ಎಂಟು ವರ್ಷಗಳಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದ ಇಂದೋರ್, ಈ ಬಾರಿ ಹೊಸದಾಗಿ ಪರಿಚಯಿಸಲಾದ 'ಸ್ವಚ್ಛ ಶಹರ್ ಜೋಡಿ' ವಿಭಾಗದಲ್ಲಿ ತನ್ನ ಪಾಲುದಾರ ಪಟ್ಟಣವಾದ ದೇಪಾಲ್‌ಪುರದೊಂದಿಗೆ ಜಂಟಿಯಾಗಿ ಎರಡನೇ ಸ್ಥಾನ ಗಳಿಸಿದೆ. ಈ ವಿಶೇಷ ವಿಭಾಗದಲ್ಲಿ ಗುಜರಾತ್‌ನ ಅಹಮದಾಬಾದ್ ಮತ್ತು ಸಾನಂದ್ ಜೋಡಿ ಮೊದಲ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.

10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ವಿಭಾಗ: ಆಂಧ್ರಪ್ರದೇಶದ ಗ್ರೇಟರ್ ವಿಶಾಖಪಟ್ಟಣಂ ಅಗ್ರಸ್ಥಾನ ಪಡೆದಿದ್ದು, ಜಬಲ್‌ಪುರ ಮತ್ತು ಲಕ್ನೋ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. 3 ರಿಂದ 10 ಲಕ್ಷ ಜನಸಂಖ್ಯೆ ವಿಭಾಗ: ಮಧ್ಯಪ್ರದೇಶದ ಉಜ್ಜಯಿನಿ ಮೊದಲ ಸ್ಥಾನವನ್ನು ಗಳಿಸಿದೆ. ವಿಶೇಷ ಭೌಗೋಳಿಕ ವಿಭಾಗ: ಒಡಿಶಾದ ಪುರಿ 'ಅತ್ಯಂತ ಸ್ವಚ್ಛ ಕರಾವಳಿ ನಗರ' ಪ್ರಶಸ್ತಿ ಪಡೆದರೆ, ಉತ್ತರಾಖಂಡದ ರುದ್ರಪುರ 'ಅತ್ಯಂತ ಸ್ವಚ್ಛ ಹಿಮಾಲಯ ನಗರ' ಎಂಬ ಗೌರವಕ್ಕೆ ಪಾತ್ರವಾಗಿದೆ.

ಸ್ವಚ್ಛ ನಗರಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ ಕಾರವಾರ

ಮಧ್ಯಪ್ರದೇಶದ ರೇವಾ ಸ್ವಚ್ಛ ನದಿ ತೀರದ ಪಟ್ಟಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬಿಲಾಸ್‌ಪುರ ಮತ್ತು ವಾರಣಾಸಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ (HUA) ಸಚಿವಾಲಯದ ಪ್ರಕಾರ, ಸ್ವಚ್ಛ ಕರಾವಳಿ ಪಟ್ಟಣ ವಿಭಾಗದಲ್ಲಿ ಪುರಿ ಮೊದಲ ಸ್ಥಾನ ಪಡೆದರೆ, ಕೇರಳದ ಅಲಪ್ಪುಳ ಮತ್ತು ಮಹಾರಾಷ್ಟ್ರದ ರತ್ನಗಿರಿ ನಂತರದ ಸ್ಥಾನಗಳಲ್ಲಿವೆ.

Vishakha Bhat Heggar

View all posts by this author