ಭೋಪಾಲ್, ಅ. 25: ದೇಶದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR), ಮತ ಕಳ್ಳತನ ವಿವಾದ ತಾರಕಕ್ಕೇರಿದೆ. ಈ ವಿಚಾರವಾಗಿ ವಿಪಕ್ಷ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ವಾಗ್ವಾದ ಮುಂದುವರಿದಿದೆ. ಇದರ ನಡುವೆ ಮಧ್ಯ ಪ್ರದೇಶದ ಖರ್ಗೋನ್ ಜಿಲ್ಲೆಯ ನರ್ಮದಾ ನದಿ ದಂಡೆಯಲ್ಲಿ ಸಾವಿರಾರು ವೋಟರ್ ಐಡಿ ಕಾರ್ಡ್ (Voter ID Cards) ಪತ್ತೆಯಾಗಿದ್ದು, ಮತ್ತೊಂದು ಸುತ್ತಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಎಫ್ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಕೇಂದ್ರ ಸ್ಥಾನದಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿರುವ ಮಂಡಲೇಶ್ವರದ ಘಾಟ್ ಬಳಿ ಗುರುತಿನ ಚೀಟಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬಹುತೇಕ ಇಂದೋರ್ನ ರಾವ್ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮತದಾರರ ಗುರುತಿನ ಚೀಟಿಗಳಿವು ಎಂದು ಮೂಲಗಳು ತಿಳಿಸಿವೆ. ನಿರ್ದಿಷ್ಟವಾಗಿ ಎಷ್ಟು ಕಾರ್ಡ್ ಪತ್ತೆಯಾಗಿವೆ ಮತ್ತು ಅವು ಇಲ್ಲಿಗೆ ಹೇಗೆ ಬಂದವು ಎನ್ನುವುದು ಗೊತ್ತಾಗಿಲ್ಲ.
ಕಾಂಗ್ರೆಸ್ನ ಎಕ್ಸ್ ಪೋಸ್ಟ್:
ಸಾವಿರಾರು ವೋಟರ್ ಐಡಿಗಳು ನದಿ ದಂಡೆಯ ಮೇಲೆ ಬಿದ್ದಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಮತ್ತು ಸ್ಥಳೀಯಾಡಳಿತ ಧಾವಿಸಿದ್ದು, ಕಾರ್ಡ್ಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದೆ.
ಭಾರತದ ವೋಟರ್ ಐಡಿ ಮಾದರಿ ಮೆಚ್ಚಿದ ಟ್ರಂಪ್; ಅಮೆರಿಕದಲ್ಲಿಯೂ ಜಾರಿಯಾಗುತ್ತಾ ಹೊಸ ಕಾನೂನು?
ಅಧಿಕಾರಿಗಳು ಹೇಳಿದ್ದೇನು?
ಮಹೇಶ್ವರ ಸಬ್-ಡಿವಿಷಿನಲ್ ಮ್ಯಾಜಿಸ್ಟ್ರೇಟ್ ಪೂರ್ವಾ ಮಂಡ್ಲೋಯಿ ಮಾಹಿತಿ ನೀಡಿ ವೋಟರ್ ಐಡಿ ಪತ್ತೆಯಾಗಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ತಹಶೀಲ್ದಾರ್ ತನಿಖೆಗೆ ಆದೇಶಿಸಿರುವುದಾಗಿಯೂ ತಿಳಿಸಿದ್ದಾರೆ. ʼʼಪತ್ತೆಯಾದ ವೋಟರ್ ಐಡಿಯ ನಿರ್ದಿಷ್ಟ ಸಂಖ್ಯೆ ಗೊತ್ತಾಗಿಲ್ಲ. ತನಿಖೆ ಬಳಿಕ ಹೆಚ್ಚಿನ ವಿವರ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತೇವೆʼʼ ಎಂದು ಹೇಳಿದ್ದಾರೆ.
ಮಂಡಲೇಶ್ವರ ಪೊಲೀಸ್ ಅದಿಕಾರಿ ಶ್ವೇತಾ ಶುಕ್ಲಾ ಮಾತನಾಡಿ, ʼʼಭಾನುವಾರ (ಅಕ್ಟೋಬರ್ 25) ನರ್ಮದಾ ಘಾಟ್ನಲ್ಲಿ ನಿಸ್ವಾರ್ಥ ಸೇವಾ ಸಮಿತಿ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾಗ ವೋಟರ್ ಐಡಿ ಪತ್ತೆಯಾಗಿದೆ. ಸಮಿತಿ ಸದಸ್ಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ವಶಕ್ಕೆ ಪಡೆದಿದ್ದಾರೆʼʼ ಎಂದು ವಿವರಿಸಿದ್ದಾರೆ. ಈ ಬಗ್ಗೆ ಲಿಖಿತ ದೂರು ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ.
ಪೌರತ್ವ ಸಿಗೋ ಮೊದಲೇ ವೋಟರ್ ಲಿಸ್ಟ್ನಲ್ಲಿ ಸೋನಿಯಾ ಗಾಂಧಿ ಹೆಸರು ಸೇರ್ಪಡೆ ಆಗಿತ್ತಾ?
ಕಾಂಗ್ರೆಸ್ನಿಂದ ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಈ ಮಧ್ಯೆ ಕಾಂಗ್ರೆಸ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ. ಪಕ್ಷದ ಕಾರ್ಯಕರ್ತರು ಮಂಡಲೇಶ್ವರ್ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಖರ್ಗೋನ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿ ನಾಯಕ್ ಘಟನೆಯ ವಿರುದ್ಧ ಕಿಡಿಕಾರಿದ್ದಾರೆ. ಚುನಾವಣೆಯಲ್ಲಿ ಮೋಸ ನಡೆಯುತ್ತಿದೆ ಎನ್ನುವ ಪಕ್ಷದ ಆರೋಪಕ್ಕೆ ಇದೇ ಸಾಕ್ಷಿ ಎಂದು ಅವರು ಹೇಳಿದ್ದಾರೆ. ಪತ್ತೆಯಾದ ವೋಟರ್ ಐಡಿ ನಕಲಿಯೇ ಅಸಲಿಯೇ, ಅಸಲಿಯಾದರೆ ಇಲ್ಲಿಗೆ ಬಂದಿದ್ದು ಹೇಗೆ ಮುಂತಾದ ಪ್ರಶ್ನೆಗಳಿಗೆ ತನಿಖೆ ಬಳಿಕ ಉತ್ತರ ಸಿಗಲಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.