ನವದೆಹಲಿ, ಆ. 29: ಕಾಂಗ್ರೆಸ್ ಮಾಜಿ ಸಂಸದ, ಇತ್ತೀಚೆಗೆ ಮೃತಪಟ್ಟ ಸಜ್ಜನ್ ಕುಮಾರ್ (Sajjan Kumar) ನಿವಾಸಕ್ಕೆ ಭೇಟಿ ನೀಡಿದ ನಂತರ ಮೂವರು ಬಿಜೆಪಿ ಸಂಸದರ ನಡೆಯನ್ನು ಪಕ್ಷ ಖಂಡಿಸಿದೆ. ಸಜ್ಜನ್ ಕುಮಾರ್ ನಿಧನದ ನಂತರ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ನಿವಾಸಕ್ಕೆ ಭೇಟಿ ನೀಡಿದ ನಂತರ ಬಿಜೆಪಿಯು ತನ್ನ ಮೂವರು ದೆಹಲಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದೆ. ಕಮಲಜೀತ್ ಸೆಹ್ರಾವತ್, ರಾಮ್‌ವೀರ್ ಸಿಂಗ್ ಬಿಧುರಿ ಮತ್ತು ಯೋಗೇಂದರ್ ಚಂದೋಲಿಯಾ ಅವರ ಭೇಟಿಯ ಬಗ್ಗೆ ಬಿಜೆಪಿ ಮುಖ್ಯಸ್ಥ ನಿತಿನ್ ನಬಿನ್ (Nitin Nabin) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1984ರ ಸಿಖ್ ದಂಗೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಆಗಸ್ಟ್ 20ರಂದು ದೆಹಲಿ ಆಸ್ಪತ್ರೆಯಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕುಮಾರ್ ಅವರನ್ನು ಸರ್ಕಾರಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದರು.
1984ರ ಸಿಖ್ ವಿರೋಧಿ ಗಲಭೆಯ ಸಂತ್ರಸ್ತರ ಪರ ಪ್ರಮುಖ ವಕೀಲರಾಗಿದ್ದ ಮತ್ತು ಈ ವರ್ಷದ ಏಪ್ರಿಲ್‌ನಲ್ಲಿ ಬಿಜೆಪಿ ಸೇರಿದ್ದ ನಾಯಕ ಎಚ್.ಎಸ್. ಫೂಲ್ಕಾ ಕೂಡ ಸಂಸದರನ್ನು ಟೀಕಿಸಿದ್ದರು. ʼʼಸಾಮೂಹಿಕ ನರ ಹಂತಕ ಸಜ್ಜನ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಲು ಮೂವರು ಸಂಸದರು ಭೇಟಿ ನೀಡಿರುವುದನ್ನು ಖಂಡಿಸುತ್ತೇನೆʼʼ ಎಂದು ಫೂಲ್ಕಾ ಹೇಳಿದ್ದಾರೆ.
'ಧುರಂಧರ್ 2' ವಿರುದ್ಧ ಸಿಖ್ ಸಂಘಟನೆಯಿಂದ FIR; ಮಾಧವನ್ ಕೊಟ್ಟ ಸ್ಪಷ್ಟನೆ ಇದು
ಮೂವರು ಸಂಸದರು ಸಜ್ಜನ್ ಕುಮಾರ್ ಅವರ ಮನೆಗೆ ಪಕ್ಷದ ವ್ಯಕ್ತಿಗಳಾಗಿ ಅಲ್ಲ, ವೈಯಕ್ತಿಕವಾಗಿ ಹೋಗಿದ್ದಾರೆ ಎಂದು ಬಿಜೆಪಿ ವಕ್ತಾರ ಆರ್.ಪಿ. ಸಿಂಗ್ ತಿಳಿಸಿದ್ದಾರೆ.
ಯಾರಿದು ಸಜ್ಜನ್ ಕುಮಾರ್?
ಸಜ್ಜನ್ ಕುಮಾರ್ 1945ರ ಸೆಪ್ಟೆಂಬರ್ 23ರಂದು ದೆಹಲಿಯಲ್ಲಿ ರಘುನಾಥ್ ಸಿಂಗ್ ಮತ್ತು ಮೀ ಕೌರ್ ದಂಪತಿಗೆ ಜನಿಸಿದರು. ರಾಜಕೀಯಕ್ಕೆ ಕಾಲಿಡುವ ಮೊದಲು ಬೇಕರಿ ಮಾಲಕರಾಗಿದ್ದ ಅವರು 1977ರಲ್ಲಿ ದೆಹಲಿ ಕೌನ್ಸಿಲರ್ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಅವರು ಮೊದಲು ದೆಹಲಿ ಮಹಾನಗರ ಪಾಲಿಕೆಗೆ ಆಯ್ಕೆಯಾದರು. ನಂತರ ಕಾಂಗ್ರೆಸ್‌ನ ದೆಹಲಿ ಘಟಕದ ಪ್ರಧಾನ ಕಾರ್ಯದರ್ಶಿಯಾದರು. ಅವರು ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರ ನಿಷ್ಠಾವಂತರಾಗಿದ್ದರು. 1980ರಲ್ಲಿ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಔಟರ್ ದೆಹಲಿ ಕ್ಷೇತ್ರದಿಂದ 7ನೇ ಲೋಕಸಭೆಗೆ ಆಯ್ಕೆಯಾದರು. 1991ರಲ್ಲಿ ಅವರು ಲೋಕಸಭೆಗೆ ಮರು ಆಯ್ಕೆಯಾದರು. 2004ರಲ್ಲಿ ಔಟರ್ ದೆಹಲಿ ಸ್ಥಾನವನ್ನು ಮತ್ತೊಮ್ಮೆ 8.5 ಲಕ್ಷಕ್ಕೂ ಹೆಚ್ಚು ಮತಗಳೊಂದಿಗೆ ಗೆದ್ದರು.
ಇಂದಿರಾ ಗಾಂಧಿ ಹತ್ಯೆಯ ನಂತರ ಭುಗಿಲೆದ್ದ 1984ರ ಸಿಖ್ ವಿರೋಧಿ ದಂಗೆಯಲ್ಲಿ ಕುಮಾರ್ ದೋಷಿ ಎಂದು ಸಾಬೀತಾಯಿತು. ಈ ಗಲಭೆಗಳು ಮುಖ್ಯವಾಗಿ ದೆಹಲಿಯಲ್ಲಿ ಸಾವಿರಾರು ಸಿಖ್ಖರ ಹತ್ಯೆಗೆ ಕಾರಣವಾಯಿತು. ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಲ್ಲದೆ, ಗಲಭೆಕೋರರಿಗೆ ಹಣ ಮತ್ತು ಮದ್ಯವನ್ನು ಒದಗಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದರು.