ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟಿಎಂಸಿ ಬಿಕ್ಕಟ್ಟು: ಉಚ್ಚಾಟಿತರಿಗೆ 60 ಶಾಸಕರ ಬೆಂಬಲ; ಇಬ್ಭಾಗವಾಗುತ್ತ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್

TMC Crisis: ತೃಣಮೂಲ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿರುವ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಾಹಾ ಅವರಿಗೆ 60 ಶಾಸಕರ ಬೆಂಬಲವಿದೆ ಎಂದು ಹೇಳುವ ಪತ್ರವನ್ನು ಹಾಜರುಪಡಿಸಲಾಗಿದೆ. ಜತೆಗೆ ವಿಧಾನಸಭೆಯ ವಿಪಕ್ಷದ ನಾಯಕ ಹುದ್ದೆಗೆ ರಿತಬ್ರತಾ ಬ್ಯಾನರ್ಜಿ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ.

ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ)

ಕೋಲ್ಕತ್ತಾ, ಜೂ. 3: ತೃಣಮೂಲ ಕಾಂಗ್ರೆಸ್‌ನಿಂದ (Trinamool Congress) ಉಚ್ಚಾಟನೆಗೊಂಡಿರುವ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಾಹಾ ತಮಗೆ 60 ಶಾಸಕರ ಬೆಂಬಲವಿದೆ ಎಂದು ಹೇಳುವ ಪತ್ರವನ್ನು ಸಲ್ಲಿಸಿದ್ದಾರೆ. ಅದರಲ್ಲಿ ಮಮತಾ ಬ್ಯಾನರ್ಜಿ (Mamatha Banerjee) ಅವರನ್ನೇ ಪಕ್ಷದ ನಾಯಕಿಯಾಗಿ ಪುನರುಚ್ಚರಿಸಲಾಗಿದೆ. 58 ಶಾಸಕರು ಸಹಿ ಮಾಡಿರುವ ಈ ಪತ್ರಕ್ಕೆ ಇನ್ನೂ ಇಬ್ಬರು ಶಾಸಕರು ಸಹಿ ಹಾಕುವ ನಿರೀಕ್ಷೆಯಿದೆ. ಜತೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹುದ್ದೆಗೆ ರಿತಬ್ರತಾ ಬ್ಯಾನರ್ಜಿ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ.

ಈ ಕ್ರಮವನ್ನು, ಪಕ್ಷವನ್ನು ಕಾರ್ಪೋರೇಟ್ ಸಂಸ್ಥೆಯಂತೆ ನಡೆಸುತ್ತಿದ್ದಾರೆ ಎಂದು ರಿತಬ್ರತಾ ಬ್ಯಾನರ್ಜಿ ನಿರಂತರವಾಗಿ ಆರೋಪಿಸುತ್ತಿರುವ ಅಭಿಷೇಕ್ ಬ್ಯಾನರ್ಜಿ ಅವರನ್ನು ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಇದು ಮಮತಾ ಬ್ಯಾನರ್ಜಿ ಅವರನ್ನೂ ದ್ವಂದ್ವ ಸ್ಥಿತಿಗೆ ತಳ್ಳುವ ಸಾಧ್ಯತೆಯಿದೆ. ಏಕೆಂದರೆ, ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಲ್ಲಬೇಕೋ ಅಥವಾ ಪಕ್ಷದ ಬಹುಪಾಲು ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೋ ಎಂಬ ಕಠಿಣ ನಿರ್ಧಾರವನ್ನು ಅವರು ತೆಗೆದುಕೊಳ್ಳಬೇಕಾಗಬಹುದು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) 80 ಸ್ಥಾನಗಳಲ್ಲಿ ಜಯ ಗಳಿಸಿದೆ. 60 ಶಾಸಕರ ಬೆಂಬಲ ಹೊಂದಿರುವ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಾಹಾ, ಪಕ್ಷಾಂತರ ನಿಷೇಧ ಕಾನೂನಿನಡಿ ಅಗತ್ಯವಿರುವ ಮೂರನೇ ಎರಡರಷ್ಟು ಬೆಂಬಲ ಗಳಿಸಿದ್ದಾರೆ.

ಚುನಾವಣೆಯಲ್ಲಿ ಸೋತ ಮಮತಾ ಬ್ಯಾನರ್ಜಿಗೆ ಸ್ವಪಕ್ಷೀಯರಿಂದಲೇ ಮುಖಭಂಗ

ಒಂದು ವೇಳೆ ಪಕ್ಷದಲ್ಲಿ ಅಧಿಕೃತ ವಿಭಜನೆ ಸಂಭವಿಸಿ, ಮಮತಾ ಬ್ಯಾನರ್ಜಿ ಪ್ರಸ್ತಾವನೆಯನ್ನು ತಿರಸ್ಕರಿಸಿದರೆ, ಅವರ ಬಣವು ಟಿಎಂಸಿಯ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲೂ ಹಕ್ಕು ಸಾಧಿಸಲು ಪ್ರಯತ್ನಿಸಬಹುದು. ಇದಲ್ಲದೆ, ಈ ಬೆಳವಣಿಗೆ ಬಂಡಾಯ ಶಾಸಕರಿಗೆ ನೈತಿಕ ಮೇಲುಗೈಯನ್ನೂ ನೀಡುತ್ತದೆ. ಪಕ್ಷವನ್ನು ಸ್ಥಾಪಿಸಿದ ಮಮತಾ ಬ್ಯಾನರ್ಜಿ ಅವರಿಂದ ಬಲವಂತವಾಗಿ ಪಕ್ಷದ ನಿಯಂತ್ರಣ ಕಸಿದುಕೊಂಡರು ಎಂಬ ಅಪಖ್ಯಾತಿ ಎದುರಿಸದೆ, ತಮ್ಮ ಕ್ರಮಕ್ಕೆ ಬಹುಮತ ಶಾಸಕರ ಬೆಂಬಲವಿದೆ ಎಂದು ಸಮರ್ಥಿಸಿಕೊಳ್ಳಲು ಅವಕಾಶ ಇದೆ.

ಮೂಲಗಳ ಪ್ರಕಾರ, ಬಂಡಾಯ ಶಾಸಕರು ಹೊಸ ಪಕ್ಷವನ್ನು ಸ್ಥಾಪಿಸುವ ಯಾವುದೇ ಯೋಜನೆ ಹೊಂದಿಲ್ಲ. ಬದಲಾಗಿ, ಅವರು ಈಗಿರುವ ಪಕ್ಷದೊಳಗೆಯೇ ತಮ್ಮ ಹಕ್ಕು ಮತ್ತು ಬೆಂಬಲವನ್ನು ಪ್ರತಿಪಾದಿಸುವ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಇಬ್ಬರು ಶಾಸಕರಲ್ಲಿ ರಿತಬ್ರತಾ ಕೂಡ ಒಬ್ಬರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ಅವರ ಹೆಸರನ್ನು ಬಹಿರಂಗಪಡಿಸಿ, ಬಂಡಾಯ ನಾಯಕನಿಂದ ವಿಧಾನಸಭಾಧ್ಯಕ್ಷರಿಗೆ ಅಧಿಕೃತ ದೂರು ಸಲ್ಲಿಕೆಯಾಗಿದೆ ಎಂದು ಹೇಳಿದ ಕೇವಲ 15 ನಿಮಿಷಗಳಲ್ಲೇ ಪಕ್ಷವು ಈ ಕ್ರಮ ಕೈಗೊಂಡಿತ್ತು.

ಪರಿಹಾರ ಸಾಮಗ್ರಿ ಬಚ್ಚಿಟ್ಟ ಆರೋಪ: ತೃಣಮೂಲ ಕಾಂಗ್ರೆಸ್ ಸಂಸದರ ಕಚೇರಿ ಧ್ವಂಸಗೊಳಿಸಿದ ಸಾರ್ವಜನಿಕರು

ಮೇ 6ರಂದು ವಿರೋಧ ಪಕ್ಷದ ನಾಯಕ, ಉಪ ನಾಯಕ ಮತ್ತು ಮುಖ್ಯ ಸಚೇತಕ ಹುದ್ದೆಗಳಿಗೆ ಸಂಬಂಧಿಸಿದ ಪಕ್ಷದ ನಿರ್ಣಯ ಪತ್ರದಲ್ಲಿ ತಮ್ಮದು ಸೇರಿದಂತೆ ಹಲವು ಟಿಎಂಸಿ ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂದು ರಿತಬ್ರತಾ ಮತ್ತು ಸಂದೀಪನ್ ಸಹಾ ಆರೋಪಿಸಿದ್ದರು.

ಹೊಸ ಗುಂಪು

ಪಕ್ಷದಿಂದ ಉಚ್ಚಾಟನೆಗೊಂಡ ಮರುದಿನವೇ, ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಾಹಾ ಟಿಎಂಸಿಯ ಹಲವು ಶಾಸಕರೊಂದಿಗೆ ಸಂಪರ್ಕದಲ್ಲಿರುವುದು ಕಂಡುಬಂದಿತು. ವರದಿಗಳ ಪ್ರಕಾರ, ಈ ಇಬ್ಬರು ನಾಯಕರು ಕೋಲ್ಕತ್ತಾದ ಎಂಎಲ್‌ಎ ಶಾಸಕರು ತಂಗಿದ್ದ ವಸತಿ ಗೃಹದಲ್ಲಿ ಪಕ್ಷದ ಹಲವು ಶಾಸಕರನ್ನು ಭೇಟಿ ಮಾಡಿದ್ದು, ಟಿಎಂಸಿಯೊಳಗೆ ಹೊಸ ಗುಂಪೊಂದು ರೂಪುಗೊಳ್ಳುತ್ತಿರುವ ಸಾಧ್ಯತೆಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

ಇದಕ್ಕೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ರಿತಬ್ರತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವವನ್ನು ಬಹಿರಂಗವಾಗಿ ಪ್ರಶ್ನಿಸಿದ್ದರು. ಇನ್ನು ಉಚ್ಚಾಟಿತ ಇಬ್ಬರು ಶಾಸಕರು ಪಕ್ಷವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ದಕ್ಷಿಣ ಕೋಲ್ಕತ್ತಾದ ಹೋಟೆಲ್‌ನಲ್ಲಿ ಕೆಲವು ಶಾಸಕರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಟಿಎಂಸಿ ಶಾಸಕ ಕುನಾಲ್ ಘೋಷ್ ಆರೋಪಿಸಿದರು.