ಕೋಲ್ಕತ್ತಾ, ಜೂ. 3: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC Crisis) ಪಕ್ಷದಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಮಾಜಿ ಸಿಪಿಐ(ಎಂ) ನಾಯಕ ಹಾಗೂ ಟಿಎಂಸಿ ಶಾಸಕ ರಿತಬ್ರತ ಬ್ಯಾನರ್ಜಿ (Ritabrata Banerjee) ನೇತೃತ್ವದಲ್ಲಿ ಪಕ್ಷದೊಳಗೆ ಬಂಡಾಯ ಎದ್ದಿದ್ದು, ಇದು ಪಕ್ಷ ವಿಭಜನೆಗೆ (TMC Split) ಕಾರಣವಾಗುವ ಸಾಧ್ಯತೆ ಇದೆ. ರಿತಬ್ರತ ಬ್ಯಾನರ್ಜಿ ಮತ್ತು ಇನ್ನೋರ್ವ ಶಾಸಕ ಸಂದೀಪನ್ ಸಾಹಾ (Sandipan Saha) ಅವರನ್ನು ಟಿಎಂಸಿ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷದಿಂದ ಉಚ್ಚಾಟಿಸಿದೆ. ರಿತಬ್ರತ ತಮ್ಮ ಬಳಿ ಟಿಎಂಸಿಯ 80 ಶಾಸಕರಲ್ಲಿ 60ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.
ಬಂಡಾಯ ಶಾಸಕರು ರಿತಬ್ರತ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಬೆಳವಣಿಗೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ (Eknath Shinde) ನೇತೃತ್ವದಲ್ಲಿ ಶಿವಸೇನೆ ಬಂಡಾಯ (Shiv Sena Rebellion) ನಡೆದ ಘಟನೆಯನ್ನು ನೆನಪಿಸುತ್ತಿದೆ.
ಯಾರು ಈ ರಿತಬ್ರತ ಬ್ಯಾನರ್ಜಿ?
ರಿತಬ್ರತ ಬ್ಯಾನರ್ಜಿ ತಮ್ಮ ರಾಜಕೀಯ ಜೀವನವನ್ನು ಸಿಪಿಐ(ಎಂ) ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಮೂಲಕ ಆರಂಭಿಸಿದರು. 2008ರಲ್ಲಿ ಎಸ್‌ಎಫ್‌ಐ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದರು. 2014ರಲ್ಲಿ ಸಿಪಿಐ(ಎಂ) ಅವರನ್ನು ರಾಜ್ಯಸಭೆಗೆ ಕಳುಹಿಸಿತು. ಆದರೆ ಪಕ್ಷದ ಹಿರಿಯ ನಾಯಕರ ವಿರುದ್ಧ ಟೀಕೆ ಮಾಡಿದ ಕಾರಣ ಹಾಗೂ ಹಲವು ವಿವಾದಗಳ ಹಿನ್ನೆಲೆಯಲ್ಲಿ 2017ರಲ್ಲಿ ಸಿಪಿಐ(ಎಂ) ಅವರನ್ನು ಪಕ್ಷದಿಂದ ಉಚ್ಚಾಟಿಸಿತು.
ಟಿಎಂಸಿಯಲ್ಲಿ ಎರಡನೇ ಇನ್ನಿಂಗ್ಸ್
ಸಿಪಿಐ(ಎಂ) ತೊರೆದ ಬಳಿಕ ರಿತಬ್ರತ ಟಿಎಂಸಿಗೆ ಸೇರ್ಪಡೆಯಾದರು. ಪಕ್ಷದ ಕಾರ್ಮಿಕ ಘಟಕ ಐಎನ್‌ಟಿಟಿಯುಸಿ ಅಧ್ಯಕ್ಷರಾಗಿ ಕೆಲಸ ಮಾಡಿದರು. 2024ರಲ್ಲಿ ಟಿಎಂಸಿ ಅವರನ್ನು ರಾಜ್ಯಸಭೆಗೆ ಕಳುಹಿಸಿತ್ತು. 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಉಲುಬೇರಿಯಾ ಪೂರ್ಬ ಕ್ಷೇತ್ರದಿಂದ ಗೆದ್ದು ಶಾಸಕರಾದರು. ಪಕ್ಷದೊಳಗೆ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡರು.
ಅಭಿಷೇಕ್ ಬ್ಯಾನರ್ಜಿ ವಿರುದ್ಧ ಅಸಮಾಧಾನ
ಚುನಾವಣೆಯಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿದ ಬಳಿಕ ರಿತಬ್ರತ ಪಕ್ಷದ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸಲು ಆರಂಭಿಸಿದರು. ವಿಶೇಷವಾಗಿ ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವ ಹಾಗೂ ಐ-ಪ್ಯಾಕ್ ಸಲಹಾ ಸಂಸ್ಥೆಯ ಮೇಲಿನ ಅವಲಂಬನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಟಿಎಂಸಿ ಶಾಸಕರ ಸಹಿಗಳನ್ನು ನಕಲಿ ಮಾಡಿ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿ ಸ್ಪೀಕರ್‌ಗೆ ದೂರು ಸಲ್ಲಿಸಿದರು.
ಟಿಎಂಸಿ ವಿಭಜನೆಯತ್ತ?
ಬಂಡಾಯ ಗುಂಪು ತಮ್ಮ ಬಳಿ ಎರಡು-ಮೂರಾಂಶಕ್ಕಿಂತ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳುತ್ತಿದ್ದು, ಈ ಸಂಖ್ಯೆ ಸಾಬೀತಾದರೆ, ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಿ ಟಿಎಂಸಿಯ ಹೆಸರು ಹಾಗೂ ಚಿಹ್ನೆಯ ಮೇಲೂ ಹಕ್ಕು ಸಾಧಿಸುವ ಪ್ರಯತ್ನ ನಡೆಸಬಹುದು. ಆದರೆ, ರಿತಬ್ರತ ಗುಂಪು ಇನ್ನೂ ಮಮತಾ ಬ್ಯಾನರ್ಜಿ ನಮ್ಮ ನಾಯಕಿ ಎಂದು ಹೇಳುತ್ತಿದ್ದು, ಪಕ್ಷದ ಸೋಲಿಗೆ ಅಭಿಷೇಕ್ ಬ್ಯಾನರ್ಜಿ ಅವರನ್ನು ಹೊಣೆ ಮಾಡುತ್ತಿದೆ.
ರಾಜಕೀಯ ವಲಯದಲ್ಲಿ ಕುತೂಹಲ
ಒಮ್ಮೆ ಸಿಪಿಐ(ಎಂ)ನ ಬ್ಲೂ-ಐಡ್ ಬಾಯ್ ಆಗಿದ್ದ ರಿತಬ್ರತ ಬ್ಯಾನರ್ಜಿ, ನಂತರ ಪಕ್ಷದಿಂದ ಹೊರಹಾಕಲ್ಪಟ್ಟು ಟಿಎಂಸಿಯಲ್ಲಿ ಮರುಜನ್ಮ ಪಡೆದರು. ಈಗ ಅದೇ ಟಿಎಂಸಿಯ ಅತಿದೊಡ್ಡ ಬಿಕ್ಕಟ್ಟಿನ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದು, ಪಶ್ಚಿಮ ಬಂಗಾಳ ರಾಜಕೀಯಕ್ಕೆ ಹೊಸ ತಿರುವು ನೀಡಿದ್ದಾರೆ.