ಕೋಲ್ಕತ್ತಾ: ಟಿಎಂಸಿ (TMC) ನಾಯಕರಾದ ಸುಖೇಂದು ಶೇಖರ್ ರಾಯ್ ಮತ್ತು ಸುಶ್ಮಿತಾ ದೇವ್ ಅವರ ರಾಜೀನಾಮೆ ಬಳಿಕ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯಸಭಾ ಸಂಸದ ಪ್ರಕಾಶ್ ಚಿಕ್ ಬರೈಕ್ (Prakash Baraik) ಗುರುವಾರ ಮೇಲ್ಮನೆಗೆ ರಾಜೀನಾಮೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟಿಎಂಸಿ ರಾಜ್ಯಸಭಾ ಸಂಸದರ ಸಂಖ್ಯೆ ಮೂರಕ್ಕೆ ಏರಿದೆ. ಬರೈಕ್ ಅವರ ರಾಜೀನಾಮೆಯೊಂದಿಗೆ, ರಾಜ್ಯಸಭೆಯಲ್ಲಿ ಪಕ್ಷದ ಬಲ 10 ಸಂಸದರಿಗೆ ಇಳಿಯಲಿದೆ. ಮುಂದಿನ ವಾರದೊಳಗೆ ಇನ್ನೂ ಮೂರು ಟಿಎಂಸಿ ರಾಜ್ಯಸಭಾ ಸದಸ್ಯರು ರಾಜೀನಾಮೆ ನೀಡಬಹುದು ಎಂದು ಮೂಲಗಳು ಸೂಚಿಸಿವೆ. ಇದು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಮಮತಾ ಬ್ಯಾನರ್ಜಿ ಅವರ ವಿಶ್ವಾಸಾರ್ಹ ಸಹಾಯಕ ಸುಖೇಂದು ಶೇಖರ್ ರಾಯ್ ಸೋಮವಾರ ರಾಜೀನಾಮೆ ನೀಡುವುದರೊಂದಿಗೆ ಟಿಎಂಸಿ ಸಂಸದರಲ್ಲಿ ಬಿಕ್ಕಟ್ಟು ಪ್ರಾರಂಭವಾಯಿತು. 2026 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ನಂತರ ಟಿಸಿಎಂ ಛಿದ್ರ ಛಿದ್ರವಾಗಿದೆ. ದಿನೇ ದಿನೇ ಮಮತಾ ಅವರ ಶಾಸಕಾಂಗ ಪಕ್ಷದ ಮೇಲಿನ ಹಿಡಿತ ದುರ್ಬಲಗೊಳ್ಳುತ್ತಿರುವಂತೆ ಕಾಣುತ್ತಿದೆ, ಅವರ 80 ಶಾಸಕರಲ್ಲಿ 58 ಮಂದಿ ಬಂಡಾಯ ಶಾಸಕಿ ರಿತಬ್ರತಾ ಬ್ಯಾನರ್ಜಿ ಅವರನ್ನು ಬೆಂಬಲಿಸುತ್ತಿದ್ದಾರೆ. ಆ ಸಂಖ್ಯೆ ಈಗ 64 ಕ್ಕೆ ಏರಿದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಒಟ್ಟು 28 ಲೋಕಸಭಾ ಸಂಸದರನ್ನು ಹೊಂದಿದೆ. ಸಂಸತ್ತಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ 20 ಟಿಎಂಸಿ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಕಾಕೋಲಿ ಘೋಷ್ ಹೇಳಿಕೊಂಡಿದ್ದರು. ಬಂಡಾಯ ಟಿಎಂಸಿ ಸಂಸದರು ಎನ್‌ಡಿಎ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಕಾಕೋಲಿ ಘೋಷ್ ಅವರೊಂದಿಗೆ ನಿಂತಿರುವ ಟಿಎಂಸಿ ಸಂಸದರ ಸಂಖ್ಯೆ 20 ಎಂದು ಹೇಳಲಾಗಿದೆ. ಆದರೆ, ಇದುವರೆಗೆ ಕಾಣಿಸಿಕೊಂಡಿರುವ ಹೆಸರುಗಳಲ್ಲಿ 14 ಟಿಎಂಸಿ ಸಂಸದರು ಸೇರಿದ್ದಾರೆ. ಕಾಕೋಲಿ ಘೋಷ್ ಜೊತೆಗೆ ಶತಾಬ್ದಿ ರಾಯ್, ಬಾಪಿ ಹಲ್ಡರ್, ಅರೂಪ್ ಚಕ್ರವರ್ತಿ, ಜೂನ್ ಮಾಲಿಯಾ, ದೀಪಕ್ ಅಧಿಕಾರಿ (ದೇವ್), ಕಲಿಪಾದ ಸರೆನ್, ಜಗದೀಶ್ ಬಸುನಿಯಾ, ಅಸಿತ್ ಮಲ್, ಅಬು ತಾಹಿರ್ ಖಾನ್, ಖಲೀಕುರ್ ರೆಹಮಾನ್, ಶರ್ಮಿಳಾ ಸರ್ಕಾರ್, ಪ್ರಸೂನ್ ಬ್ಯಾನರ್ಜಿ ಮತ್ತು ಪಾರ್ಥ ಭೌಮಿಕ್ ಇದ್ದಾರೆ.
ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್; ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಟಿಎಂಸಿಯ ಸುಷ್ಮಿತಾ ದೇವ್ ರಾಜೀನಾಮೆ
ಕಾಂಗೆಸ್ ಜೊತೆ ಟಿಎಂಸಿ ವಿಲೀನ?
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ಮಮತಾ ಬ್ಯಾನರ್ಜಿಯವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ಕಾಂಗ್ರೆಸ್ ಜೊತೆಗೆ ವಿಲೀನಗೊಳ್ಳುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ, ಮಮತಾ ಬ್ಯಾನರ್ಜಿಗೆ ಉಪಾಧ್ಯಕ್ಷ ಸ್ಥಾನ ಮತ್ತು ಅಭಿಷೇಕ್ ಬ್ಯಾನರ್ಜಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನದ ಆಫರ್ ಅನ್ನು ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.