ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Grap-III: ಕಳಪೆ ಪ್ರದರ್ಶನ ತೋರಿದ ವಾಯು ಗುಣಮಟ್ಟ: ಮಾಲಿನ್ಯ ನಿಯಂತ್ರಣಕ್ಕೆ ದೆಹಲಿಯಲ್ಲಿ ಬಿಗಿ ಕ್ರಮ

ಚಳಿಗಾಲದ ಆರಂಭದಲ್ಲೇ ದೆಹಲಿ ಜನತೆಗೆ ಕಳಪೆ ಗುಣಮಟ್ಟದ ಗಾಳಿಯನ್ನು ಉಸಿರಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಮಂಗಳವಾರ ವಾಯು ಗುಣಮಟ್ಟ ಸೂಚ್ಯಂಕ 400 ಅಂಕಗಳನ್ನು ದಾಟಿರುವುದರಿಂದ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಗಳನ್ನು (Delhi Grap-III) ಬಿಗಿ ಗೊಳಿಸಲಾಗಿದೆ. ಈ ಋತುವಿನಲ್ಲಿ ಇದೇ ಮೊದಲ ಬಾರಿಗೆ ವಾಯು ಗುಣಮಟ್ಟ ಸೂಚ್ಯಂಕ 400 ಅಂಕ ದಾಟಿದೆ.

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬಿಗಿ ಕ್ರಮ

ದೆಹಲಿಯಲ್ಲಿ ವಾಯುಗುಣ ಮಟ್ಟ ಕಳಪೆಯಾಗಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. (ಸಂಗ್ರಹ ಚಿತ್ರ) -

ನವದೆಹಲಿ: ವಾಯುಗುಣಮಟ್ಟ ಸೂಚ್ಯಂಕ (Air quality index) 400 ಅಂಕದ ಗಡಿ ದಾಟಿರುವುದರಿಂದ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಗಳನ್ನು ಬಿಗಿಗೊಳಿಸಲಾಗಿದೆ. ಇದಕ್ಕಾಗಿ ಮಂಗಳವಾರ ತಕ್ಷಣದಿಂದ ಜಾರಿಗೆ ಬರುವಂತೆ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (Graded Response Action Plan-III) ಅನ್ನು ವಿಧಿಸಲಾಗಿದೆ. ಚಳಿಗಾಲದ ಆರಂಭದಲ್ಲೇ ದೆಹಲಿಯಲ್ಲಿ (Delhi) ವಾಯು ಗುಣಮಟ್ಟ ಅತ್ಯಂತ ಕಳಪೆ ಪ್ರದರ್ಶನವನ್ನು ತೋರಿದೆ. ಇದು ಈ ಋತುವಿನಲ್ಲಿ ಮೊದಲ ಬಾರಿಗೆ ಕಳವಳವನ್ನು ಉಂಟು ಮಾಡುವಂತೆ ಮಾಡಿದೆ.

ದೆಹಲಿಯಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವುದರಿಂದ ಅಧಿಕಾರಿಗಳು ಮಂಗಳವಾರ ತಕ್ಷಣದಿಂದ ಜಾರಿಗೆ ಬರುವಂತೆ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ ಹಂತ III ಅನ್ನು ಜಾರಿಗೊಳಿಸಿದ್ದಾರೆ. ವಾಯು ಗುಣಮಟ್ಟ ಸೂಚ್ಯಂಕೆ ಸೋಮವಾರ 362ರಿಂದ ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ 425ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: Bihar Predict Exit Polls: ಪ್ರಶಾಂತ್‌ ಕಿಶೋರ್‌ರ ಜನ ಸುರಾಜ್‌ ಪಕ್ಷಕ್ಕೆ 0-5 ಕ್ಷೇತ್ರದಲ್ಲಿ ಜಯ!

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀರ್ ಅಪ್ಲಿಕೇಶನ್‌ನ ದತ್ತಾಂಶವು ಮಂಗಳವಾರ ಬೆಳಗ್ಗೆ 7 ಗಂಟೆಗೆ ನಗರದ 39 ಸಕ್ರಿಯ ಕೇಂದ್ರಗಳಲ್ಲಿ 34 ಕಳವಳಕಾರಿ ವಾಯುಗುಣ ಮಟ್ಟವನ್ನು ತೋರಿಸಿದೆ. ಅವುಗಳಲ್ಲಿ ಬವಾನಾದಲ್ಲಿ 462, ವಜೀರ್‌ಪುರದಲ್ಲಿ 460, ಮುಂಡ್ಕಾ ಮತ್ತು ಪಂಜಾಬಿ ಬಾಗ್‌ನಲ್ಲಿ 452 ಸೂಚ್ಯಂಕ ದಾಖಲಾಗಿದೆ.

ವಾಯು ಗುಣಮಟ್ಟ ಸೂಚ್ಯಂಕದಲ್ಲಿ 51 ಮತ್ತು 100 ಅನ್ನು 'ತೃಪ್ತಿದಾಯಕ', 101 ರಿಂದ 200 'ಮಧ್ಯಮ', 201 ರಿಂದ 300 'ಕಳಪೆ', 301 ರಿಂದ 400 'ತುಂಬಾ ಕಳಪೆ' ಮತ್ತು 400ಕ್ಕಿಂತ ಹೆಚ್ಚಿನದನ್ನು 'ತೀವ್ರ ಕಳವಳಕಾರಿ' ಎಂದು ಪರಿಗಣಿಸಲಾಗಿದೆ.

ದೆಹಲಿಯಲ್ಲಿ ಜಿಆರ್ ಎಪಿ-III ಜಾರಿ

ದೆಹಲಿಯಲ್ಲಿ ಈಗ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (Graded Response Action Plan-III) ಅನ್ನು ಜಾರಿಗೆಗೊಳಿಸಿರುವುದರಿಂದ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ.

ಅನಿವಾರ್ಯವಲ್ಲದ ನಿರ್ಮಾಣ ಮತ್ತು ಕೆಡವುವಿಕೆ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ದೆಹಲಿ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ನೋಯ್ಡಾದಲ್ಲಿ ಎಲ್ಲಾ ಖಾಸಗಿ ಬಿಎಸ್-III ಪೆಟ್ರೋಲ್ ಮತ್ತು ಬಿಎಸ್-IV ಡೀಸೆಲ್ ಎಲ್ ಎಂವಿಗಳನ್ನು (ನಾಲ್ಕು ಚಕ್ರ ವಾಹನಗಳು) ನಿಷೇಧಿಸಲಾಗಿದೆ.

ಅನಿವಾರ್ಯವಲ್ಲದ ಡೀಸೆಲ್ ಚಾಲಿತ ಬಿಎಸ್-IV ಮಧ್ಯಮ ಸರಕು ವಾಹನಗಳು, ಅಗತ್ಯ ವಸ್ತುಗಳನ್ನು ಸಾಗಿಸುವ ಅಥವಾ ಅಗತ್ಯ ಸೇವೆಗಳನ್ನು ಒದಗಿಸುವ ವಾಹನಗಳನ್ನು ಹೊರತುಪಡಿಸಿ ದೆಹಲಿಯ ಹೊರಗೆ ನೋಂದಾಯಿಸಲಾದ ಬಿಎಸ್-IV ಮತ್ತು ಕಡಿಮೆ ಡೀಸೆಲ್ ಹಗುರ ವಾಣಿಜ್ಯ ವಾಹನಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.

ಇದನ್ನೂ ಓದಿ: Bihar Exit Polls: ಬಿಹಾರ ಎಕ್ಸಿಟ್‌ ಪೋಲ್‌ ವರದಿಯಲ್ಲಿ ಎನ್‌ಡಿಎಗೆ ಬಹುಮತ; ದಾಖಲೆಯ ಮತದಾನ ವರವಾಯ್ತಾ?

ಖಾಸಗಿ ಕಂಪೆನಿಗಳು ಮನೆಯಿಂದ ಕೆಲಸ ಮಾಡಲು ಅಥವಾ ಹೈಬ್ರಿಡ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.

5 ನೇ ತರಗತಿಯವರೆಗಿನ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದ್ದು ತರಗತಿಗಳನ್ನು ಆನ್‌ಲೈನ್‌ ಮೂಲಕ ನಡೆಸಲು ಸೂಚಿಸಲಾಗಿದೆ.

ಕಟ್ಟುನಿಟ್ಟಾದ ಧೂಳು ಮತ್ತು ತ್ಯಾಜ್ಯ ನಿರ್ವಹಣಾ ಮಾರ್ಗಸೂಚಿಗಳನ್ನು ಅನುಸರಿಸಿ ರೈಲ್ವೆ, ಮೆಟ್ರೋ ನಿರ್ಮಾಣ, ವಿಮಾನ ನಿಲ್ದಾಣಗಳು, ರಕ್ಷಣೆ, ನೈರ್ಮಲ್ಯ ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಅಗತ್ಯ ಯೋಜನೆಗಳನ್ನು ನಿಷೇಧದಿಂದ ವಿನಾಯಿತಿ ನೀಡಲಾಗಿದೆ.